ಮತ್ತೆ ಟ್ರೆಂಡ್ ಆದ ‘ತನಿಷ್ಕ್ ಬಹಿಷ್ಕರಿಸಿ’ ಹ್ಯಾಶ್ ಟ್ಯಾಗ್: ಈ ಬಾರಿಯ ವಿವಾದ ದೀಪಾವಳಿ ಜಾಹಿರಾತು

Prasthutha|

ಹೊಸದಿಲ್ಲಿ: ಹಿಂದೂ ಸೊಸೆಯ ಸೀಮಂತಕ್ಕಾಗಿ ಮುಸ್ಲಿಂ ಕುಟುಂಬವು ಸಿದ್ಧಗೊಳ್ಳುತ್ತಿರುವ ಕೋಮುಸೌಹಾರ್ದತೆಯನ್ನು ಸಾರುವ ಜಾಹಿರಾತಿನ ಕಾರಣಕ್ಕಾಗಿ ಗುರಿಯಾಗಿದ್ದ ತನಿಷ್ಕ್ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಮ್ಮೆ ವಿವಾದಕ್ಕೊಳಗಾಗಿದೆ. ‘ತನಿಷ್ಕ್ ಬಹಿಷ್ಕರಿಸಿ’ ಎಂಬ ಕೂಗು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದೆ. ಈ ಬಾರಿ ಜಾಹಿರಾತಿನಲ್ಲಿ ದೀಪಾವಳಿ ಆಚರಣೆಯ ಕುರಿತು ನಡೆಸಲಾಗುವ ಮಾತುಕತೆಗಳು ವಿವಾದಕ್ಕೆ ಕಾರಣವಾಗಿದೆ.

- Advertisement -

ತಾವು ಹೇಗೆ ದೀಪಾವಳಿಯನ್ನು ಆಚರಿಸಲಿದ್ದೇವೆ ಎಂಬ ಕುರಿತು ಮಹಿಳೆಯರು ನಡೆಸುವ ಮಾತುಕತೆಯನ್ನು ಜಾಹೀರಾತು ವೀಡಿಯೊದಲ್ಲಿ ತೋರಿಸಲಾಗುತ್ತದೆ.

ಜಾಹೀರಾತಿನಲ್ಲಿ ಸಯಾನಿ ಗುಪ್ತಾ, “ದೀರ್ಘ ಸಮಯದ ಬಳಿಕ ನಾನು ತಾಯಿಯನ್ನು ಭೇಟಿಯಾಗಲು ಬಯಸುತ್ತೇನೆ. ಖಂಡಿತವಾಗಿಯೂ ಈ ಬಾರಿ ಪಟಾಕಿಗಳಿಲ್ಲ, ಯಾರೂ ಕೂಡ ಪಟಾಕಿಗೆ ಬೆಂಕಿ ಕೊಡಬೆಕೆಂದು ನಾನು ಭಾವಿಸುವುದಿಲ್ಲ, ಬದಲಾಗಿ ದಾನ,  ನಗು ಮತ್ತು ಸಕಾರಾತ್ಮಕತೆಗಳೊಂದಿಗೆ ಕಳೆಯಬೇಕು” ಎನ್ನುತ್ತಾರೆ.

- Advertisement -

“ಮಿಠಾಯಿಗಳನ್ನು ತಿನ್ನುತ್ತಾ, ತುಂಬಾ ಆಹಾರವನ್ನು ಸೇವಿಸುತ್ತಾ” ಎಂದು ಅಲಯಾ ಫರ್ನಿಚರ್ವಾಲಾ ಧ್ವನಿಗೂಡಿಸುತ್ತಾರೆ.

“ಉಡುಪು ಧರಿಸುವುದು, ಚೆಂದದ ಆಭರಣ ತೊಡುವುದು ಮತ್ತು ಸೀರೆ ಅಥವಾ ಸಲ್ವಾರ್ ಕಮೀಝ್ ತೊಡುವುದು” ಎಂದು ನೀನಾ ಗುಪ್ತಾ ಸಲಹೆ ನೀಡುತ್ತಾರೆ.

“ಈ ವರ್ಷ ಕುಟುಂಬದೊಂದಿಗೆ ಕಾಲಕಳೆಯುವುದೇ ಮುಖ್ಯ” ಎಂದು ನಿಮ್ರತಾ ಕೌರ್ ಅಂತ್ಯದಲ್ಲಿ ಎಲ್ಲರಿಗೂ ದಿಪಾವಳಿಯ ಶುಭಾಶಯ ಕೋರುವುದಕ್ಕೆ ಮುಂಚಿತವಾಗಿ ಹೇಳುತ್ತಾರೆ.

ಆದರೆ ಮಾಲಿನ್ಯ ತಡೆಗಾಗಿ ಪಟಾಕಿ ಸುಡದಿರಲು ನೀಡಿದ ಕರೆಯು ಸಾಮಾಜಿಕ ಮಾಧ್ಯಮದ ಒಂದು ವಿಭಾಗಕ್ಕೆ ಹಿಡಿಸಲಿಲ್ಲ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಜ್ಯುವೆಲ್ಲರಿ ಬ್ರ್ಯಾಂಡ್ ಅನ್ನು ಟೀಕಿಸಿದ್ದು, “ದೀಪಾವಳಿಯನ್ನು ಹೇಗೆ ಆಚರಿಸಬೇಕೆಂದು ಯಾರೇ ಆದರೂ ಹಿಂದೂಗಳಿಗೆ ಯಾಕಾಗಿ ಸಲಹೆ ನೀಡಬೇಕು? ಕಂಪೆನಿಗಳು ತಮ್ಮ ಉತ್ಪಾದನೆಗಳನ್ನು ಮಾರುವುದಕ್ಕೆ ಗಮನ ಹರಿಸಬೇಕು. ಪಟಾಕಿ ಸುಡುವುದರಿಂದ ದೂರವಿರಲು ನಮಗೆ ಉಪನ್ಯಾಸ ನೀಡಬೇಡಿ. ನಾವು ದೀಪವನ್ನು ಹಚ್ಚುತ್ತೇವೆ, ಸಿಹಿ ಹಂಚುತ್ತೇವೆ ಹಸಿರು ಪಟಾಕಿಯನ್ನು ಸುಡುತ್ತೇವೆ. ನಮ್ಮನ್ನು ಸೇರಿಕೊಳ್ಳಿ. ನೀವು ಅರ್ಥೈಸುತ್ತೀರಿ ಎಂದು ಭಾವಿಸುತ್ತೇನೆ” ಎಂದು ಬರೆದಿದ್ದಾರೆ.

ಇನ್ನೋರ್ವ ಬಿಜೆಪಿ ನಾಯಕ ಗೌರವ್ ಗೋಯಲ್ ತನ್ನ ಕೋಪವನ್ನು ಹೊರಹಾಕಿದ್ದು, “ಹೇಗೆ ದೀಪಾವಳಿ ಆಚರಿಸಬೇಕೆಂದು ಹಿಂದೂಗಳಿಗೆ ಹೇಳಲು ತನಿಷ್ಕ್ ಯಾರು? ನಿಮ್ಮ ಸಲಹೆಯನ್ನು ನೀವೇ ಇಟ್ಟುಕೊಳ್ಳಿ. ಅದನ್ನು ನಿಮ್ಮ ಕಳಪೆ ಪ್ರಚಾರ ಅಭಿಯಾನಕ್ಕೆ ಬಳಸಿಕೊಳ್ಳಿ” ಎಂದು ಬರೆದಿದ್ದಾರೆ.

ಅದೇ ರೀತಿ, ಹಲವರು ಟ್ವಿಟ್ಟರ್ ನಲ್ಲಿ ಬಿಜೆಪಿ ನಾಯಕರನ್ನು ಸೇರಿಕೊಂಡಿದ್ದು, ತನಿಷ್ಕ್ ಬಹಿಷ್ಕರಿಸಿ ಎಂದು ಟ್ವೀಟ್ ಮಾಡಿದ್ದಾರೆ.  

Join Whatsapp