Home ಟಾಪ್ ಸುದ್ದಿಗಳು ಮತಾಂತರದ ಆರೋಪ; ದಾವಾ ಕೇಂದ್ರದ ಇಬ್ಬರು ಧರ್ಮಗುರುಗಳ ಬಂಧನ

ಮತಾಂತರದ ಆರೋಪ; ದಾವಾ ಕೇಂದ್ರದ ಇಬ್ಬರು ಧರ್ಮಗುರುಗಳ ಬಂಧನ

ದೇಶದಲ್ಲಿ ಸಾಮೂಹಿಕ ಮತಾಂತರದಲ್ಲಿ ಭಾಗಿಯಾಗಿದ್ದ ಆರೋಪದಡಿ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ -ಯುಪಿಎಟಿಎಸ್ ಸೋಮವಾರ ಇಬ್ಬರು ಮುಸ್ಲಿಮ್ ಧರ್ಮಗುರುಗಳನ್ನು ಬಂಧಿಸಿದೆ.
ಮುಫ್ತಿ ಖಾಜಿ ಜಹಾಂಗೀರ್ ಖಾಸ್ಮಿ ಮತ್ತು ಮುಹಮ್ಮದ್ ಉಮರ್ ಗೌತಮ್ ಬಂಧನಕ್ಕೊಳಗಾದ ಧರ್ಮಗುರುಗಳು.


ವಿಚಾರಣೆಯ ನಂತರ ಇಬ್ಬರನ್ನೂ ಬಂಧಿಸಲಾಗಿದೆ. ವಿದೇಶದಿಂದ ಧನಸಹಾಯ ಪಡೆದ ಬಗ್ಗೆ ಪ್ರಮುಖ ಸಾಕ್ಷ್ಯಗಳು, ದಾಖಲೆಗಳು ದೊರೆತಿವೆ ಎಂದು ಪೊಲೀಸ್ ಎಟಿಎಸ್ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಸೋಮವಾರ ಹೇಳಿದ್ದಾರೆ.
ಘಾಜಿಯಾಬಾದ್‌ನ ದಸ್ನಾ ದೇವಸ್ಥಾನದಲ್ಲಿ ಹಿಂದೂ ಪೂಜಾರಿಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಮುಸ್ಲಿಮ್ ಯುವಕರನ್ನು ಬಂಧಿಸಿದ ಬಳಿಕ ಪೊಲೀಸರಿಗೆ ಈ ಗುಂಪಿನ ಬಗ್ಗೆ ಮಾಹಿತಿ ತಿಳಿದಿದೆ. ಗೌತಮ್ ಮತ್ತು ಜಹಾಂಗೀರ್ ಸುಮಾರು 1,000 ಮುಸ್ಲಿಮೇತರರನ್ನು ಇಸ್ಲಾಂಗೆ ಮತಾಂತರಗೊಳಿಸಿ ಅವರನ್ನು ಕಟ್ಟರ್ ವಾದಿಗಳಾಗಿ ಮಾಡಿದ್ದಾರೆ. ನೋಯ್ಡಾದಲ್ಲಿ ಕಿವುಡ ಮತ್ತು ಮೂಕರಿಗಾಗಿ ಇರುವ ಶಾಲೆಯಲ್ಲಿ ಒಂದು ಡಜನ್ ಗೂ ಹೆಚ್ಚು ಮಕ್ಕಳನ್ನೂ ಇಸ್ಲಾಂಗೆ ಮತಾಂತರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


“ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್ಐ ಸೇರಿದಂತೆ ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಆರೋಪಿಗಳಿಗೆ ಧನಸಹಾಯ ಬಂದಿರುವುದು ತನಿಖೆಯಿಂದ ತಿಳಿದುಬಂದಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಇಸ್ಲಾಮಿಕ್ ದಾವಾ ಕೇಂದ್ರದ ಅಧ್ಯಕ್ಷರು ಸೇರಿದಂತೆ ಆರೋಪಿಗಳ ವಿರುದ್ಧ ಪೊಲೀಸರು ಉತ್ತರ ಪ್ರದೇಶದ ಹೊಸ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version