Home ಟಾಪ್ ಸುದ್ದಿಗಳು ಮಕ್ಕಳನ್ನು ಹೆರುವುದು ನೀವು; ಸರ್ಕಾರವೇಕೆ ಶಿಕ್ಷಣ ವೆಚ್ಚ ಭರಿಸಬೇಕು? : ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ...

ಮಕ್ಕಳನ್ನು ಹೆರುವುದು ನೀವು; ಸರ್ಕಾರವೇಕೆ ಶಿಕ್ಷಣ ವೆಚ್ಚ ಭರಿಸಬೇಕು? : ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

ಲಕ್ನೊ: ಖಾಸಗಿ ಶಾಲೆಯ ಶುಲ್ಕದಲ್ಲಿ ವಿನಾಯಿತಿ ಕೊಡಿಸುವಂತೆ ಮನವಿ ಮಾಡಿದ ಮಹಿಳೆಯರನ್ನು ಉದ್ದೇಶಿಸಿ, ‘ಮಕ್ಕಳನ್ನು ಹೆರುವುದು ನೀವು; ಸರ್ಕಾರವೇಕೆ ಶಿಕ್ಷಣ ವೆಚ್ಚ ಭರಿಸಬೇಕು?’ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಲಕ್ನೊದಿಂದ 150 ಕಿಮೀ ದೂರವಿರುವ ಔರಯಾ ಜಿಲ್ಲೆಯ ಮಹಿಳೆಯರು ಶಾಲಾ ದಾಖಲಾತಿಯ ಅರ್ಜಿಯೊಂದಿಗೆ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಮಕ್ಕಳಿಗೆ ಶುಲ್ಕದಲ್ಲಿ ವಿನಾಯಿತಿ ಕೊಡಿಸಿ ಎಂದು ಮನವಿ ಮಾಡಿದಾಗ, “ಬಚ್ಚೆ ಪೈದಾ ಕರೇಂ ಆಪ್, ಔರ್ ಖರ್ಚಾ ಉಠಾಯೆ ಸರ್ಕಾರ್?” ಎಂದು ಬಿಜೆಪಿ ಶಾಸಕ ರಮೇಶ್ ದಿವಾಕರ್ ಪ್ರಶ್ನಿಸಿದ್ದಾರೆ.

ಇದಲ್ಲದೆ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಿ ಎಂದು ಮಹಿಳೆಯರಿಗೆ ಹೇಳಿರುವ ಬಿಜೆಪಿ ಶಾಸಕ, ಸರ್ಕಾರಿ ಶಾಲೆಗಳಲ್ಲಿ ಯಾವುದೇ ಶುಲ್ಕವಿಲ್ಲ. ನೀವು ನಿಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸಿ ಎಂದೂ ಹೇಳಿದ್ದಾರೆ.

ಈ ಘಟನೆಯನ್ನು ವ್ಯಕ್ತಿಯೊಬ್ಬರು ವಿಡಿಯೊ ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರ ಬೆನ್ನಿಗೇ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಾಸಕ ರಮೇಶ್ ದಿವಾಕರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ವಿರೋಧ ಪಕ್ಷಗಳು, ಅವರ ಹೇಳಿಕೆ ಬಿಜೆಪಿಯ ಮಹಿಳಾ ವಿರೋಧಿ ಮನಃಸ್ಥಿತಿಯನ್ನು ಸೂಚಿಸುತ್ತದೆ ಎಂದು ವಾಗ್ದಾಳಿ ನಡೆಸಿವೆ. ಬಿಜೆಪಿ ನಾಯಕರಿಗೆ ಮಹಿಳೆಯರ ಬಗ್ಗೆ ಯಾವುದೇ ಗೌರವವಿಲ್ಲ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕರೊಬ್ಬರು ಟೀಕಿಸಿದ್ದಾರೆ.

Join Whatsapp
Exit mobile version