Home ಟಾಪ್ ಸುದ್ದಿಗಳು ಭಾರತದ ವಿಭಜನೆಗೆ ನೆಹರೂ ಕಾರಣ ಎಂದ ಬಿಜೆಪಿ ವಿರುದ್ಧ ಸೋನಿಯಾ ಗರಂ

ಭಾರತದ ವಿಭಜನೆಗೆ ನೆಹರೂ ಕಾರಣ ಎಂದ ಬಿಜೆಪಿ ವಿರುದ್ಧ ಸೋನಿಯಾ ಗರಂ

ನವದೆಹಲಿ: ನೆಹರೂ ಅವರು ಭಾರತದ ವಿಭಜನೆಗೆ ಕಾರಣ ಎಂದು ಬಿಜೆಪಿ ಹೇಳಿರುವುದರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿರುಗೇಟು ನೀಡಿದ್ದಾರೆ.
ರಾಜಕೀಯ ಲಾಭಕ್ಕಾಗಿ ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಂಡವರ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಸುಳ್ಳಿನ ಕೋಟೆಯ ಮೇಲೆ ಕಟ್ಟುವುದನ್ನು ಸೋನಿಯಾ ಗಾಂಧಿ ಖಂಡಿಸಿದ್ದಾರೆ.
ಸ್ವಾತಂತ್ರ್ಯ ದಿನದ ತನ್ನ ಸಂದೇಶದಲ್ಲಿ ಸೋನಿಯಾ ಗಾಂಧಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಜೀವ ಸವೆಸಿದವರ ಬಗ್ಗೆ, ಅವರ ಬಲಿದಾನದ ಬಗೆಗೆ, ವೈಭವದ ಸಾಧನೆಯ ಬಗ್ಗೆ ಕುಂದುಂಟಾಗುವಂತೆ ಇತಿಹಾಸ ಹೇಳುವುದನ್ನು ಯಾರೂ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದರು.
“ಕಳೆದ 75 ವರ್ಷಗಳಲ್ಲಿ ನಾವು ಬೇಕಾದಷ್ಟು ಸಾಧನೆಗಳನ್ನು ಮಾಡಿದ್ದೇವೆ. ಆದರೆ ತನ್ನದನ್ನೇ ಕೊಚ್ಚಿಕೊಳ್ಳುವ ಈಗಿನ ನರಕ ಸದೃಶ ಮನಸ್ಸಿನ ಸರಕಾರವು ಸ್ವಾತಂತ್ರ್ಯ ಹೋರಾಟಗಾರರ ಮತ್ತು ಹಿಂದಿನವರ ಸಾಧನೆಗಳನ್ನು, ಭವ್ಯ ನಡೆಗಳನ್ನು ಕುಂದಿಸಿ ಇತಿಹಾಸ ಪ್ರದರ್ಶಿಸುತ್ತಿದೆ. ಇದು ಸರಿಯಲ್ಲ.” ಎಂದ ಸೋನಿಯಾ ಗಾಂಧಿಯವರ ಲಿಖಿತ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ಬಿಡುಗಡೆ ಮಾಡಿದೆ.
“ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ರಾಜಕೀಯ ಲಾಭಕ್ಕಾಗಿ ಹಿಂದಿನ ದೇಶ ನಾಯಕರ ಬಗ್ಗೆ ತಪ್ಪಭಿಪ್ರಾಯ ನೀಡುವುದನ್ನು ಖಂಡಿಸುತ್ತದೆ. ಮಹಾತ್ಮಾ ಗಾಂಧೀಜಿ, ನೆಹರೂ, ಸರ್ದಾರ್ ಪಟೇಲ್, ಮೌಲಾನಾ ಆಜಾದ್ ಮೊದಲಾದವರ ಬಗ್ಗೆ ಸುಳ್ಳು ಹರಡುವುದನ್ನು ಪಕ್ಷ ಸಹಿಸುವುದಿಲ್ಲ.” ಎಂದೂ ಸೋನಿಯಾ ಹೇಳಿದ್ದಾರೆ.
ಸೋನಿಯಾರು ವಿಶೇಷವಾಗಿ ಏನೂ ಹೇಳಲು ಹೋಗಿಲ್ಲ. ಸ್ವಾತಂತ್ರ್ಯದ ಮುನ್ನಾ ದಿನ ದೇಶದ ವಿಭಜನೆಗೆ ನೆಹರೂ ಕಾರಣ ಎಂದು ಜಾಲ ತಾಣಗಳಲ್ಲಿ ಬಿಜೆಪಿಯವರು ವೈರಲ್ ಮಾಡಿದ ಸುದ್ದಿಗೆ ಸೂಚ್ಯವಾಗಿ ಉತ್ತರಿಸಿದ್ದಾರೆ. ಭಾರತದ ವಿಭಜನೆಗೆ ಯಾರು ಯಾರು ಕಾರಣ ಎಂಬುದರ ಪ್ರಶ್ನೆಯಲ್ಲಿ ಮೊದಲ ಕಾರಣಕರ್ತ ನೆಹರೂ ಎಂದು ಸಂಘ ಪರಿವಾರದವರು ಪ್ರಚಾರ ಮಾಡಿದ್ದರು.
ಭಾನುವಾರವೇ ಕಾಂಗ್ರೆಸ್ ನಾಯಕರು ಈ ಸಂಘೀ ಪ್ರಚಾರದ ಬಗ್ಗೆ ಕೋಪ ಜಾಲತಾಣಕ್ಕೇರಿಸಿದ್ದರು. ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಅವರು ದೇಶದ ವಿಭಜನೆಯು ಹಿಂದುತ್ವದ ಕೂಸಾಗಿದ್ದು ಆ ಧ್ಯೇಯವನ್ನು ಹುಟ್ಟು ಹಾಕಿದವರು ಸಾವರ್ಕರ್ ಮತ್ತು ಅದಕ್ಕೆ ಖಚಿತ ರೂಪ ನೀಡಿದವರು ಮುಹಮದಾಲಿ ಜಿನ್ನಾ ಎಂದು ಹೇಳಿದರು.
“ಆಗಸ್ಟ್ 14ರಂದು ಪ್ರಧಾನಿಯವರು ದೇಶ ವಿಭಜನೆಯ ಭಯಾನಕಗಳು ಎಂದು ಹೇಳಿರುವುದು ಅವರ ಇಂದಿನ ರಾಜಕೀಯದ ಕೈಲಾಗತನವನ್ನು ಮುಚ್ಚಿಕೊಳ್ಳಲಿಕ್ಕಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರು ತಮ್ಮ ಪ್ರಾಣ ಕಳೆದುಕೊಂಡರು. ಅವರ ಬಲಿದಾನಗಳನ್ನು ಮರೆಯುವುದು ಇಲ್ಲವೇ ಅಗೌರವಿಸುವುದು ಎಂದಿಗೂ ಸರಿಯಲ್ಲ” ಎಂದು ರಾಜ್ಯ ಸಭೆ ಸದಸ್ಯರೂ ಆದ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.
ಕೋವಿಡ್ ನಿಂದ ಈಗ ತಾನೇ ಚೇತರಿಸಿಕೊಂಡಿರುವ ಸೋನಿಯಾ ಗಾಂಧಿಯವರು ವಿಜ್ಞಾನ, ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಕಳೆದ 75 ವರುಷಗಳಲ್ಲಿ ಆಗಿರುವ ಪ್ರಗತಿಯು ನಮ್ಮ ಅಂದಿನ ನಾಯಕರ ದೂರದೃಷ್ಟಿಯ ಫಲ ಮತ್ತು ಜನರ ಕಠಿಣ ದುಡಿಮೆಯ ಕೊಯಿಲು ಎನ್ನುವುದನ್ನು ಮರೆಯಬಾರದು ಎಂದೂ ಸೋನಿಯಾ ಗಾಂಧಿಯವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Join Whatsapp
Exit mobile version