Home ಟಾಪ್ ಸುದ್ದಿಗಳು ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್: 9 ಮಂದಿ ಅಧಿಕಾರಿಗಳ ಮನೆ, ಕಚೇರಿಗಳಿಗೆ ಎಸಿಬಿ ದಾಳಿ

ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್: 9 ಮಂದಿ ಅಧಿಕಾರಿಗಳ ಮನೆ, ಕಚೇರಿಗಳಿಗೆ ಎಸಿಬಿ ದಾಳಿ

ಬೆಂಗಳೂರು, ಜು.15: ಅಕ್ರಮ ಆಸ್ತಿ ಗಳಿಕೆ ಆರೋಪ ಮೇರೆಗೆ ರಾಜ್ಯದ ವಿವಿಧೆಡೆ 9 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಗುರುವಾರ ಭ್ರಷ್ಟಾಚಾರ ನಿಗ್ರಹ ದಳ -ಎಸಿಬಿ ಏಕಕಾಲದಲ್ಲಿ ದಾಳಿ ನಡೆಸಿದೆ.

ಬೆಂಗಳೂರು, ಕೋಲಾರ, ಮಂಗಳೂರು ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ ನೀಡಿದೆ. ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿದ ಎಸಿಬಿ ತಂಡ ಪರಿಶೀಲನೆಯಲ್ಲಿ ತೊಡಗಿವೆ.

ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳ ವಿವರ:

ಮಂಗಳೂರಿನ ನಗರಾಭಿವೃದ್ಧಿ ವಿಭಾಗ ಜಿಲ್ಲಾಧಿಕಾರಿ ಕಚೇರಿ ಕಾರ್ಯಪಾಲಕ ಅಭಿಯಂತರ ಜಿ.ಶ್ರೀಧರ್, ಉಡುಪಿಯ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಇಇ ಕೃಷ್ಣ ಎಸ್​, ಹೆಬ್ಸೂರು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿಯ ಸಿಇ ಆರ್.ಪಿ ಕುಲಕರ್ಣಿ, ಕೋಲಾರದ ಮಾಲೂರು ನಗರ ಯೋಜನಾ ಪ್ರಾಧಿಕಾರ ಸಹಾಯಕ ನಿರ್ದೇಶಕ ಹೆಚ್.ಆರ್ ಕೃಷ್ಣಪ್ಪ, ಬೀದರ್ ನ ಜೆಇ ಪಿಆರ್​ಇ ಸುರೇಶ್ ಮೋಹ್ರೆ, ಮಂಡ್ಯದ ಡಿಸಿಎಫ್​ ಸಾಮಾಜಿಕ ಅರಣ್ಯ ವೆಂಕಟೇಶ್ ಟಿ, ವಿಜಯಪುರದ ಹೆಸ್ಕಾಂ ಎಇಇ ಸಿದ್ದರಾಮ ಮಲ್ಲಿಕಾರ್ಜುನ್, ಕೋರಮಂಗಲದ ಹಿರಿಯ ಮೋಟಾರು ವಾಹನ ನಿರೀಕ್ಷಕ ಎ.ಕೃಷ್ಣಮೂರ್ತಿ, ಬಳ್ಳಾರಿಯ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಎ.ಎನ್.ವಿಜಯ್ ಕುಮಾರ್ ಅವರ ಕಚೇರಿ ಹಾಗೂ ಅವರಿಗೆ ಸೇರಿದ ಮನೆ, ನಿವೇಶನಗಳ ಮೇಲೆ ದಾಳಿ ನಡೆದಿದೆ.

ಕೋಲಾರ : ಬೆಳ್ಳಂ ಬೆಳಗ್ಗೆ ಜಿಲ್ಲೆಯ ಮಾಲೂರು ಯೋಜನಾ ಪ್ರಾಧಿಕಾರದ ಸಹಾಯಕ‌ ನಿರ್ದೇಶಕ ಹೆಚ್.ಆರ್.ಕೃಷ್ಣಪ್ಪ ಅವರ ಮನೆ, ಕಚೇರಿ ಮೇಲೆ‌ ದಾಳಿ ಎಸಿಬಿ ದಾಳಿ ನಡೆದಿದೆ. ಕೃಷ್ಣಪ್ಪ ಅವರ ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿಯ ಮನೆ ಮತ್ತು ಕೋಲಾರದ ಮಾಲೂರಿನ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಕೃಷ್ಣಪ್ಪ ಇತ್ತೀಚಿಗಷ್ಟೆ ಮಾಲೂರಿಗೆ ವರ್ಗಾವಣೆಯಾಗಿ ಬಂದಿದ್ದರು. ದಾವಣಗೆರೆ ಎಸಿಬಿ ಎಸ್ಪಿ ಜಯ ಪ್ರಕಾಶ್ ನೇತೃತ್ವದ ತಂಡ ಅಧಿಕಾರಿ ತಂಡ ಕೃಷ್ಣಪ್ಪ ಅವರ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದೆ.

ಗದಗ: ಕಾಮಗಾರಿಯೊಂದರ ಬಿಲ್ ಪಾಸ್​ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗದಗ – ಬೆಟಗೇರಿ ನಗರಸಭೆ ಎಇಇ ಎಸಿಬಿ ಬಲೆಗೆ ಬಿದ್ದಿದ್ದಾರೆ. 14 ಲಕ್ಷ ಮೊತ್ತದ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಅಬ್ದುಲ್ ಸಲಾಮ್ ಮನಿಯಾರ್ ಎಂಬುವರು ಕಸ ವಿಲೇವಾರಿ ಘಟಕಕ್ಕೆ ಘನತ್ಯಾಜ್ಯ ಸಾಗಣೆ ಮಾಡಲು ಟೆಂಡರ್ ಪಡೆದು ಕೆಲಸ ಮಾಡಿಸಿದ್ದರು.
ಆದರೆ, ಬಿಲ್ ಪಾಸ್ ಮಾಡಲು ಹಿಂದೇಟು ಹಾಕಿದ ನಗರಸಭೆ ಎಇಇ ವರ್ಧಮಾನ್ ಎಸ್.ಹುದ್ದಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುತ್ತಿಗೆದಾರನಿಂದ ಸಂಜೆ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಇನ್ನು 10 ಕ್ಕೂ ಹೆಚ್ಚು ಸಿಬ್ಬಂದಿ ದಾಖಲೆಗಳ ಪರಿಶೀಲನೆಗೆ ಇಳಿದಿದ್ದು ಎಇಇ ಅವರನ್ನ ವಶಕ್ಕೆ ಪಡೆದಿದ್ದಾರೆ.


ಮಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ
ಮಂಗಳೂರು: ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಅಧಿಕಾರಿ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆದಿದೆ. ಜಿಲ್ಲಾ ನಗರಾಭಿವೃದ್ಧಿ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಜಿ.ಶ್ರೀಧರ್ ಅವರ ಮಂಗಳೂರು ನಗರದಲ್ಲಿರುವ ಶ್ರೀಧರ್ ಮನೆ ಮತ್ತು ಕಚೇರಿಗೆ ದಾಳಿ ನಡೆಸಿ, ಹುಡುಕಾಟ ನಡೆಸಿದ್ದಾರೆ. ಶ್ರೀಧರ್ ಅವರ ಮೈಸೂರಿನಲ್ಲಿರುವ ಮನೆಗೂ ದಾಳಿ ನಡೆಸಲಾಗಿದೆ. ಮಂಗಳೂರು ಎಸಿಬಿ, ಎಸ್ಪಿ ಮತ್ತು ತಂಡ ದಾಖಲೆ ಪತ್ರ ಪರಿಶೀಲಿಸುತ್ತಿದೆ.
ಖಚಿತ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಶ್ರೀಧರ್ ಅಧಿಕಾರಿಯ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಈ ಎಲ್ಲ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ ಐಆರ್ ದಾಖಲಾಗಿದೆ. ಎಸಿಬಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

Join Whatsapp
Exit mobile version