ಬೆಂಗಳೂರು ಗಲಭೆ | ದಿನಕ್ಕೊಂದು ‘ಪ್ರಮುಖ ಸೂತ್ರಧಾರ’ | ನೈತಿಕತೆ ಮರೆತ ಕನ್ನಡ ದೃಶ್ಯ ಮಾಧ್ಯಮಗಳು!!

Prasthutha|

ಬೆಂಗಳೂರು ಗಲಭೆ ; ‘ಪ್ರಸ್ತುತ’ ವಿಶೇಷ ವರದಿ

- Advertisement -

ಮತಾಂಧ ಯುವಕನೊಬ್ಬ ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಫೇಸ್ಬುಕ್ ನಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಿದ್ದ ಕಾಮೆಂಟ್ ವೊಂದು ಆಗಸ್ಟ್ 11 ರ ರಾತ್ರಿ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪ್ರದೇಶಗಳು ಹೊತ್ತಿ ಉರಿಯಲು ಕಾರಣವಾಗಿತ್ತು. ಗಲಭೆ ನಡೆದು ವಾರ ಕಳೆದರೂ ಕೆಲ ಕನ್ನಡ ದೃಶ್ಯ ಮಾಧ್ಯಮಗಳು ಮಾತ್ರ ಇನ್ನೂ ಜನರನ್ನು ಪ್ರಚೋದಿಸಿ ತಮ್ಮ ಟಿಆರ್ಪಿ ಗಳಿಸುವ ಹುನ್ನಾರದಿಂದ ಹಿಂದೆ ಸರಿದಂತಿಲ್ಲ. ಪ್ರತಿ ದಿನ ಬಿಜೆಪಿಯನ್ನು ಹೊರತುಪಡಿಸಿ ಉಳಿದೆಲ್ಲಾ ರಾಜಕೀಯ ಪಕ್ಷಗಳಿಂದ ಒಂದೊಂದು “ಕಿಂಗ್ ಪಿನ್” ಗಳನ್ನು ಹುಡುಕುತ್ತಲೇ ಈ ಮಾಧ್ಯಮಗಳು ಯಾರನ್ನೋ ಮೆಚ್ಚಿಸುವ ಪ್ರಯತ್ನದಲ್ಲಿದ್ದು, ಈಗಾಗಲೇ ರಾಜ್ಯಾದ್ಯಂತ ಸಾರ್ವಜನಿಕರು ಈ ಏಕಪಕ್ಷೀಯ ವರದಿಗಳ ಕುರಿತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಗಲಭೆಯ ಕುರಿತು ಅವಲೋಕಿಸುವುದಾದರೆ ಪೊಲೀಸರೇ ನೀಡಿದ್ದ ಗಡುವಿನೊಳಗೆ ಆರೋಪಿಯನ್ನು ಬಂಧಿಸದ ಹಾಗೂ ನೀಡಿದ್ದ ದೂರನ್ನು ದಾಖಲು ಮಾಡದೆ ಇದ್ದ ಪೊಲೀಸರ ನಡೆಯ ವಿರುದ್ಧವೇ ಸ್ಥಳೀಯರಲ್ಲಿ ಅಸಹನೆ ಮಡುಗಟ್ಟಿತ್ತು. ಇದರಿಂದ ಆಕ್ರೋಶಗೊಂಡ ಮುಸ್ಲಿಮ್ ಸಮುದಾಯದ ಕೆಲ ಯುವಕರು ಅಲ್ಲಿನ ಪೊಲೀಸ್ ಠಾಣೆಯ ಮೇಲೂ ದಾಳಿ ಮಾಡಿದ್ದರು. ಪೊಲೀಸ್ ಠಾಣೆಯ ಮೇಲಿನ ದಾಳಿ ಸಮರ್ಥನೀಯವಲ್ಲದಿದ್ದರೂ, ಘಟನೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸದ ಪೊಲೀಸರ ಅಸಹಕಾರವೂ ಒಂದು ರೀತಿಯಲ್ಲಿ ಪರೋಕ್ಷವಾಗಿ ಗಲಭೆಗೆ ಪ್ರಚೋದನೆ ನೀಡಿದ್ದವು ಎಂಬ ಬಲವಾದ ಆರೋಪಗಳೂ ಕೇಳಿ ಬಂದಿದ್ದವು. ಮಾತ್ರವಲ್ಲ, ಪ್ರತಿಭಟನಕಾರರ ಮೇಲೆ ಪೊಲೀಸ್ ಗೋಲಿಬಾರ್ ನಡೆದು ನಾಲ್ವರು ಯುವಕರು ಸಾವನ್ನಪ್ಪಿದ್ದರು. ಸಂಜೆಯಿಂದ ರಾತ್ರಿ 10 ಗಂಟೆಯ ವರೆಗೂ ಠಾಣೆಯ ಮುಂಭಾಗದಲ್ಲಿ ನಿಧಾನವಾಗಿ ಜನ ಸೇರುತ್ತಿದ್ದರೂ ರಾಜ್ಯ ಗುಪ್ತಚರ ಇಲಾಖೆ ಮಾತ್ರ ಇದಕ್ಕೂ ತಮಗೂ ಏನೂ ಸಂಬಂಧವಿಲ್ಲದಂತೆ ಸುಮ್ಮನಿತ್ತು. ಇದು ಪರಿಸ್ಥಿತಿ ಸಂಪೂರ್ಣ ಹದೆಗೆಡಲು ಕಾರಣವಾಯಿತು.. ಸರ್ಕಾರ ಹಾಗೂ ಗುಪ್ತಚರ ಇಲಾಖೆಯ ಈ ವೈಫಲ್ಯಗಳನ್ನು ಮರೆಮಾಚಲು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳನ್ನು ಆರೋಪಿ ಸ್ಥಾನದಲ್ಲಿ ಕೂರಿಸಿ ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ.   

- Advertisement -

ಗಲಭೆಗೆ ಸಂಬಂಧಪಟ್ಟಂತೆ ಪೊಲೀಸರು ಬಹುತೇಕ ಅಮಾಯಕರನ್ನೇ ಬಂಧಿಸಿದ್ದಾರೆ ಎನ್ನುವ ಆರೋಪದ ಮಧ್ಯೆಯೇ ಕನ್ನಡದ ದೃಶ್ಯ ಮಾಧ್ಯಮಗಳು ತಮಗೆ ತೋಚಿದ್ದನ್ನು “ಸುದ್ದಿ” ಮಾಡುತ್ತಾ ಅದೇ ಘಟನೆಯ ವಾಸ್ತವ ಎನ್ನುವಂತೆ ಬಿಂಬಿಸಿ ಪ್ರಚಾರ ಮಾಡುತ್ತಿದೆ. ಇದು ಇನ್ನಷ್ಟು ಅಮಾಯಕರನ್ನು ಜನರು ಆರೋಪಿ ಸ್ಥಾನದಲ್ಲಿ ನೋಡುವಂತೆ ಮಾಡಿದೆ. ಗಲಭೆ ನಡೆದ ಮೊದಲ ದಿನ ಎಸ್.ಡಿ.ಪಿ.ಐ ಪಕ್ಷದ ಮುಝಮ್ಮಿಲ್ ಪಾಶಾರನ್ನು ಪ್ರಮುಖ ಸೂತ್ರಧಾರಿ ಎಂಬಂತೆ ಬಿಂಬಿಸಲಾಯಿತು. ಆದರೆ ಯಾವಾಗ ಮುಝಮ್ಮಿಲ್ ಪಾಶಾರವರು ಪೊಲೀಸರೊಂದಿಗೆ ಸೇರಿಕೊಂಡು ಪರಿಸ್ಥಿತಿ ಶಾಂತಿಗೊಳಿಸುವ ಪ್ರಯತ್ನದ ವೀಡೀಯೋ ವೈರಲ್ ಆಯಿತೋ, ನೈತಿಕತೆಯಿಲ್ಲದ ದೃಶ್ಯ ಮಾಧ್ಯಮಗಳು ಹೊಸ ಸೂತ್ರಧಾರರನ್ನು ಹುಡುಕುವಂತಾಯಿತು. ಮರುದಿನ ಕೆಲ ಚಾನೆಲ್ ಗಳು ಕಾಂಗ್ರೆಸ್ಸಿನ ಕಲೀಮ್ ಪಾಶಾರನ್ನು ಹೊಸ ಪ್ರಮುಖ ಸೂತ್ರಧಾರನೆಂಬಂತೆ ತೋರಿಸಿದವು. ಇಷ್ಟಕ್ಕೇ ತಣಿಯದ ಇವರ ಟಿಆರ್ಪಿ ದಾಹ, ಮರುದಿನ ಜೆಡಿಎಸ್ ನ ವಾಜಿದ್ ಪಾಶಾರನ್ನು ಮುಂದಿನ ಸೂತ್ರಧಾರನನ್ನಾಗಿ ತೋರಿಸುವ ಹಂತಕ್ಕೆ ತಲುಪಿದವು. ದಿನಕ್ಕೊಂದು ಸೂತ್ರಧಾರನಿಗಾಗಿ ಹುಡುಕಾಡುತ್ತಿದ್ದ ಮಾಧ್ಯಮಗಳಿಗೆ ಮುಂದೆ ಸಿಕ್ಕಿದ್ದು 5 ಜನರ ಒಂದು ದೊಡ್ಡ ತಂಡ. ಹಾಸ್ಯಾಸ್ಪದವೇನೆಂದರೆ ಮಾಧ್ಯಮಗಳ ಈ “ಸೂತ್ರಧಾರ” ರ ಹೊಸ ತಂಡದಲ್ಲಿ ಒಂದು 65 ವರ್ಷದ ವಯೋವೃದ್ಧರನ್ನೂ ಸೇರಿಸಿದ್ದು! ಹೀಗೆ ಮುಂದುವರೆದ ಮಾಧ್ಯಮಗಳ ವರಸೆ, ಗಲಭೆಗೆ ಸಂಬಂಧಪಟ್ಟಂತೆ ಉಗ್ರರ ನಂಟೂ ಇದೆ ಎಂಬ ಹೊಸತೊಂದು ಮಜಲಿನ ಅನೈತಿಕ ಪತ್ರಿಕೋಧ್ಯಮವನ್ನೂ ಬಟಾಬಯಲುಗೊಳಿಸಿತು.   

ವಾಸ್ತವದಲ್ಲಿ ಬೆಂಗಳೂರು ಗಲಭೆಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ಈಗಾಗಲೇ 380ಕ್ಕೂ ಹೆಚ್ಚು ಜನರನ್ನು ಬಂಧಿಸಿರುವಾಗ ಕನ್ನಡ ದೃಶ್ಯ ಮಾಧ್ಯಮಗಳು ಹೀಗೆ ದಿನಕ್ಕೊಂದು ಪ್ರಮುಖ ಸೂತ್ರಧಾರರನ್ನು ಸಾಧರಪಡಿಸುತ್ತಿರುವುದರ ಹಿಂದೆ ಬಹುದೊಡ್ಡ ಸಂಚು ಅಡಗಿದೆ. ರಾಜ್ಯದಲ್ಲಿ ತಾಂಡವಾವಾಡುತ್ತಿದ್ದ “ಕೊರೋನ ಹಗರಣ”, ಆಳುತ್ತಿದ್ದ ಬಿಜೆಪಿಯನ್ನು ರಾಜ್ಯದ ಜನರ ಮುಂದೆ ನಿರುತ್ತರರನ್ನಾಗಿಸಿತ್ತು. ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಜನರು ಸಂತ್ರಸ್ತರರಾಗಿದ್ದು, ಅವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸದ ರಾಜ್ಯ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ಪ್ರಮುಖವಾಗಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೊರೋನ ನಿರ್ವಹಣೆಯಲ್ಲಿನ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರು ಪ್ರಶ್ನಿಸತೊಡಗಿದ್ದು, ಸರಕಾರ ಮೌನ ವಹಿಸಿತ್ತು. ಅದು ಮಾತ್ರವಲ್ಲ “ಅಪರೇಶನ್ ಕಮಲ”ವೆಂಬ ಬಹುದೊಡ್ಡ ಹಗರಣದ ಮೂಲಕವೇ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಹಿರಿಯ ನಾಯಕರುಗಳ ಮಧ್ಯೆ ಯಡಿಯೂರಪ್ಪರ ಸ್ಥಾನಮಾನಗಳ ಕುರಿತಂತೆ ಒಳಜಗಳ ತಾರಕಕ್ಕೇರಿದ್ದು, ಸರಕಾರವೇ ಪತನದ ಹಾದಿ ಹಿಡಿದಿತ್ತು. ಸರ್ಕಾರದ ಎಲ್ಲಾ ವೈಫಲ್ಯಗಳನ್ನು ಮರೆಮಾಚಲು ಈ ದೃಶ್ಯ ಮಾಧ್ಯಮಗಳು ಟೊಂಕ ಕಟ್ಟಿ ನಿಂತಿದ್ದು, ಬೆಂಗಳೂರು ಗಲಭೆಯ ಮೂಲಕ ಅವರಿಗೊಂದು ಟಾನಿಕ್ ದೊರೆತಂತಾಗಿದೆ. ಅದನ್ನು ಯಥಾವತ್ತಾಗಿ ಜನರ ಮುಂದಿಡುತ್ತಿರುವ ಈ ಮಾಧ್ಯಮಗಳು ತಮ್ಮೆಲ್ಲಾ ಪತ್ರಿಕೋಧ್ಯಮದ ನೈತಿಕತೆಯ ಎಲ್ಲಾ ಎಲ್ಲೆಗಳನ್ನು ಮೀರಿ, ಪ್ರಚೋದನಾತ್ಮಕವಾಗಿ ಜನರನ್ನು ಧರ್ಮಗಳ ಆಧಾರದಲ್ಲಿ ವಿಭಜಿಸುವ ಕಾರ್ಯವನ್ನು ಮಾಡುತ್ತಿದೆ ಎನ್ನಬಹುದಾಗಿದೆ.

Join Whatsapp