ಶ್ರೀನಗರ : ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುವ ನೆಪದಲ್ಲಿ ಜಮ್ಮು-ಕಾಶ್ಮೀರದ ಹಲವು ಸಾಮಾಜಿಕ ಕಾರ್ಯಕರ್ತರು, ಎನ್ ಜಿಒಗಳು ಮತ್ತು ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಇಂದು ದಾಳಿ ನಡೆಸಿದೆ.
ಶ್ರೀನಗರ ಮತ್ತು ಬಂಡಿಪೋರದ 10 ಪ್ರದೇಶಗಳಲ್ಲಿ ಮತ್ತು ಬೆಂಗಳೂರಿನ ಒಂದು ಸ್ಥಳದಲ್ಲಿ ಎನ್ ಐಎ ಇಂದು ದಾಳಿ ನಡೆಸಿದೆ. ಸಮಾಜಸೇವಾ ಚಟುವಟಿಕೆಗಳ ಹೆಸರಲ್ಲಿ ಭಾರತ ಮತ್ತು ವಿದೇಶಗಳಿಂದ ಈ ಎನ್ ಜಿಒ ಮತ್ತು ಟ್ರಸ್ಟ್ ಗಳು ದೇಣಿಗೆ ಸಂಗ್ರಹಿಸುತ್ತಿದ್ದು, ನಂತರ ಅದನ್ನು ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಈ ದಾಳಿ ನಡೆದಿದೆ ಎಂದು ಎನ್ ಐಎ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಜಮ್ಮು-ಕಾಶ್ಮೀರದಲ್ಲಿ ದಾಳಿ ನಡೆಸಲಾಗಿರುವ ಪ್ರದೇಶಗಳಲ್ಲಿ ಇಂಗ್ಲಿಷ್ ಸುದ್ದಿಪತ್ರಿಕೆ ‘ಗ್ರೇಟ್ ಕಾಶ್ಮೀರ್’ ಮತ್ತು ಮಾನವ ಹಕ್ಕು ಹೋರಾಟಗಾರ ಖುರ್ರಮ್ ಪರ್ವೇಜ್ ನಿವಾಸ, ಎನ್ ಜಿಒ ಅಥ್ರುಟ್, ದಾಲ್ ಸರೋವರದಲ್ಲಿನ ಎಚ್ ಬಿ ಹಿಲ್ಟನ್ ಹೌಸ್ ಬೋಟ್ ಸೇರಿವೆ. ಎನ್ ಐಎ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಮತ್ತು ಸಿಆರ್ ಪಿಎಫ್ ಸಿಬ್ಬಂದಿ ದಾಳಿಗೆ ನೆರವು ನೀಡಿದ್ದಾರೆ.
ಬೆಂಗಳೂರು ಮೂಲದ ನಾಪತ್ತೆಯಾದ ವ್ಯಕ್ತಿಗಳ ಹೆತ್ತವರ ಸಂಸ್ಥೆಯ ಅಧ್ಯಕ್ಷೆ ಪರ್ವೀನ ಅಹಂಗರ್, ಸ್ವಾತಿ ಶೇಷಾದ್ರಿ ಅವರಿಗೆ ಸೇರಿದ ಸ್ಥಳಗಳಲ್ಲಿ ತನಿಖೆ ನಡೆದಿದೆ ಎಂದು ‘ಸ್ಕ್ರಾಲ್ ಡಾಟ್ ಇನ್’ ವರದಿ ಮಾಡಿದೆ. ಕೆಲವು ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ ಐಎ ತಿಳಿಸಿದೆ.
ಎನ್ ಐಎ ನಡೆಯನ್ನು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ. ತಮ್ಮ ಪರವಾಗಿರದವರಿಗೆ ಬೆದರಿಸುವ ಬಿಜೆಪಿಯ ಕೈಗೊಂಬೆಯಾಗಿ ಎನ್ ಐಎ ಬದಲಾಗಿದೆ ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ.