ಬಿಜೆಪಿ, ಸಂಘಪರಿವಾರದ ಕ್ರಿಮಿನಲ್ ಕೇಸ್ ವಾಪಸ್: ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೌನ ಅಪಾಯಕಾರಿ; ಪಾಪ್ಯುಲರ್ ಫ್ರಂಟ್

Prasthutha|

ಬೆಂಗಳೂರು: ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರ ಮೇಲಿನ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಬಿಜೆಪಿ ಸರಕಾರವು ಸಾಲು ಸಾಲಾಗಿ ವಾಪಸ್ ಪಡೆಯುತ್ತಿದ್ದರೂ, ಈ ಬಗ್ಗೆ ಕಾಂಗ್ರೆಸ್-ಜೆಡಿಎಸ್ ನಂತಹ ಜಾತ್ಯತೀತ ಪಕ್ಷಗಳ ಮೌನವು ಅಪಾಯಕಾರಿಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ಹೇಳಿದ್ದಾರೆ.

- Advertisement -

ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ತನ್ನ ಕಾರ್ಯಕರ್ತರು ಮತ್ತು ನಾಯಕರ ಮೇಲಿನ ನೂರಾರು ಗಂಭೀರ ಪ್ರಕರಣಗಳನ್ನು ನಿರಂತರವಾಗಿ ವಾಪಸ್ ಪಡೆದುಕೊಳ್ಳುತ್ತಾ ಬರುತ್ತಿದೆ. 2020ರ ಒಂದೇ ವರ್ಷದಲ್ಲಿ ಅದು 330 ಪ್ರಕರಣಗಳನ್ನು ಹಿಂಪಡೆದಿದೆ.

ಇದರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ, ಕೋಮು ವೈಷಮ್ಯ ಬಿತ್ತಿದ, ಸಾರ್ವಜನಿಕರ ಆಸ್ತಿಪಾಸ್ತಿ ನಾಶ-ನಷ್ಟ ಉಂಟು ಮಾಡಿದ, ಮುಸ್ಲಿಮ್ ಸಮುದಾಯ ವಿರುದ್ಧ ಅಪಪ್ರಚಾರ ನಡೆಸಿ ಗಲಭೆ ಸೃಷ್ಟಿಸಿದಂತಹ ಗುರುತರವಾದ ಆರೋಪಗಳು ಮತ್ತು ಹಲವು ಗಂಭೀರ ಅಪರಾಧಗಳನ್ನು ಎಸಗಿರುವುದು ಸಾಬೀತಾಗಿರುವ ಪ್ರಕರಣಗಳೂ ಒಳಗೊಂಡಿದೆ. ಅದಕ್ಕೂ ಮಿಗಿಲಾಗಿ ಕಾನೂನು ಇಲಾಖೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಆಕ್ಷೇಪಣೆಯ ಹೊರತಾಗಿಯೂ ಕೇಸ್ ವಾಪಸ್ ಪಡೆದಿರುವುದು ಗಮನಾರ್ಹವಾಗಿದೆ.

- Advertisement -

ಕಾನೂನು ಸುವ್ಯಸ್ಥೆಗೆ ಸವಾಲೊಡ್ಡುವ ಮತ್ತು ಸಂಘಪರಿವಾರದ ಕ್ರಿಮಿನಲ್ ಗಳಿಗೆ ಹಾಗೂ ಗೂಂಡಾಗಳಿಗೆ ಉತ್ತೇಜನ ನೀಡುತ್ತಿರುವ ಬಿಜೆಪಿ ಸರಕಾರದ ನಡೆಯ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಮತ್ತಿತರ ಜಾತ್ಯತೀತ ಪಕ್ಷಗಳ ಮೌನ ಅಕ್ಷಮ್ಯ.

ಮುಸ್ಲಿಮರನ್ನು ಓಟ್ ಬ್ಯಾಂಕನ್ನಾಗಿ ಮಾಡಿಕೊಂಡ ಈ ತಥಾತಥಿತ ಜಾತ್ಯತೀತ ಪಕ್ಷಗಳು, ಮುಸ್ಲಿಮ್ ಸಮುದಾಯಕ್ಕೆ ಭಾರೀ ಪ್ರಮಾಣದಲ್ಲಿ ನಾಶ-ನಷ್ಟ ಉಂಟು ಮಾಡಿದ ಪ್ರಕರಣಗಳನ್ನು ಹಿಂಪಡೆದುಕೊಳ್ಳುತ್ತಿರುವಾಗ ಅದರ ಬಗ್ಗೆ ಯಾವುದೇ ಜನಾಭಿಪ್ರಾಯ ಮೂಡಿಸುವುದಾಗಲೀ ಅಥವಾ ಕಾನೂನು ಹೋರಾಟ ನಡೆಸುವುದಾಗಲೀ ಮಾಡದಿರುವುದು ದುರಂತವಾಗಿದೆ. ಒಂದೋ ಈ ಪಕ್ಷಗಳು ಅದರ ವಿರುದ್ದ ಧ್ವನಿ ಎತ್ತುವ ಯಾವುದೇ ಇಚ್ಛಾಶಕ್ತಿ ಹೊಂದಿಲ್ಲ, ಇಲ್ಲವೇ ಅವು ಬಿಜೆಪಿಯ ಈ ನಡೆಗೆ ಬೆಂಬಲ ವ್ಯಕ್ತಪಡಿಸುತ್ತದೆ ಎಂದೇ ಭಾವಿಸಬೇಕಾಗುತ್ತದೆ.

ಮುಸ್ಲಿಮರ ವಿರುದ್ಧ ದೌರ್ಜನ್ಯ ನಡೆದಷ್ಟೂ ತಮ್ಮ ಓಟ್ ಬ್ಯಾಂಕ್ ಬಲಿಷ್ಠವಾಗುತ್ತದೆ ಎಂದು ಭಾವಿಸುವ ಕಾಂಗ್ರೆಸ್ ನಂತಹ ಪಕ್ಷಗಳು ಉದ್ದೇಶಪೂರ್ವಕವಾಗಿಯೇ ಇದರ ಬಗ್ಗೆ ಮೌನ ವಹಿಸುತ್ತಿದೆಯೇ ಎಂಬ ಸಹಜ ಸಂಶಯವೂ ಮೂಡುತ್ತಿದೆ.

ಬಿಜೆಪಿ-ಸಂಘಪರಿವಾರದ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದು ಸರಕಾರವು ಕ್ರಿಮಿನಲ್ ಗಳಿಗೆ ಅಭಯಾಶ್ರಯ ನೀಡಿ ರಾಜ್ಯವನ್ನು ಅರಾಜಕತೆಗೆ ತಳ್ಳುತ್ತಿರುವಾಗ ಅದರ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟ ಸಂಘಟಿಸಬೇಕಾಗಿರುವುದು ಕಾಂಗ್ರೆಸ್-ಜೆಡಿಎಸ್ ನಂತಹ ಪ್ರಮುಖ ವಿಪಕ್ಷಗಳ ಜವಾಬ್ದಾರಿಯಾಗಿರುತ್ತದೆ.

ಮುಖ್ಯವಾಗಿ ಮುಸ್ಲಿಮರನ್ನೇ ಗುರಿಪಡಿಸಿಕೊಂಡು ನಡೆಸಲಾದ ದುಷ್ಕೃತ್ಯಗಳಿಗೆ ಸಂಬಂಧಿಸಿ ದಾಖಲಿಸಲಾದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಬಲವಾಗಿ ಧ್ವನಿ ಎತ್ತಿ ಅವು ಮುಸ್ಲಿಮರ ಮತಗಳ ಋಣವನ್ನು ತೀರಿಸಬೇಕಾಗಿದೆ. ಇಂತಹ ನಿರ್ಣಾಯಕ ಸನ್ನಿವೇಶದಲ್ಲಿ ವಿರೋಧ ಪಕ್ಷಗಳು ತಮ್ಮ ಮೌನ ಮುರಿಯಬೇಕು. ಹಾಗೆಯೇ ಕೇಸ್ ವಾಪಸ್ ಪಡೆಯುವ ಮೂಲಕ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಬಿಜೆಪಿ ಸರಕಾರದ ದುಷ್ಟ ಪ್ರಯತ್ನಗಳನ್ನು ತಡೆಯಲು ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ನಾಸಿರ್ ಪಾಶ ಒತ್ತಾಯಿಸಿದ್ದಾರೆ.

Join Whatsapp