ಬಿಜೆಪಿ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಎಸ್ ಡಿಪಿಐನಿಂದ ದೂರು

Prasthutha|

ಮೋದಿ ಸರ್ಕಾರಕ್ಕೆ 7 ವರ್ಷ ತುಂಬಿದ ಸಂದರ್ಭದಲ್ಲಿ ಭಟ್ಕಳದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಶಾಸಕ ಸುನೀಲ್ ನಾಯ್ಕ್ ಸೇರಿದಂತೆ ಎಲ್ಲಾ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಎಂದು ಒತ್ತಾಯಿಸಿ ಭಟ್ಕಳ ಎಸ್ ಡಿಪಿಐ ಘಟಕ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿದೆ.

- Advertisement -


ಭಟ್ಕಳ ತಾಲೂಕು ಅಧ್ಯಕ್ಷ ವಸೀಮ್ ಮನಗಾರ್ ನೇತೃತ್ವದ ನಿಯೋಗ ಸಹಾಯಕ ಆಯುಕ್ತರನ್ನು ಭೇಟಿ ಮಾಡಿ, ಕೋವಿಡ್ ಎರಡನೇ ಅಲೆ ತೀವ್ರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರವನ್ನು ಪಾಲಿಸದೆ ಭಾರತೀಯ ಜನತಾ ಪಕ್ಷ ಭಟ್ಕಳ ಇದರ ವತಿಯಿಂದ ಜೂನ್ 1ರಂದು ಮೋದಿ ಸರ್ಕಾರಕ್ಕೆ 7 ವರ್ಷ ತುಂಬಿರುವ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಭಟ್ಕಳ ಶಾಸಕ ಸುನೀಲ್ ನಾಯ್ಕ್ ನೇತೃತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಸರ್ಕಾರ ಘೋಷಿಸಿದ ಕೋವಿಡ್ ನಿರ್ದೇಶನಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗಿದೆ. ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲೂ ಹೆಚ್ಚಿನ ಜನರು ಒಟ್ಟು ಸೇರುವುದಕ್ಕೂ ಸಂಪೂರ್ಣ ನಿಷೇಧ ವಿಧಿಸಿರುವ ಈ ಸಮಯದಲ್ಲಿ ಶಾಸಕರ ಈ ನಡೆಯಿಂದ ನಿಯಮ ಜನ ಸಾಮಾನ್ಯರಿಗೆ ಮಾತ್ರವೇ ಎಂಬ ಪ್ರಶ್ನೆ ಜನರು ಕೇಳುವಂತಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

- Advertisement -


ಬಿಜೆಪಿಯ ಕಾರ್ಯಕ್ರಮದಲ್ಲಿ ಶಾಸಕರು ಸಾಮಾಜಿಕ ಅಂತರ ಕೂಡ ಪಾಲಿಸದೆ ಇರುವ ವೀಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಸಕರು ತಾವೇ ಖುದ್ದು ಸಾಮಾಜಿಕ ಅಂತರ ಪಾಲಿಸದೆ ಫೋಟೋ ಕ್ಲಿಕ್ಕಿಸಿಕೊಂಡಿರುವುದು ಸಮಾಜದಲ್ಲಿ ಯಾವ ಸಂದೇಶವನ್ನು ನೀಡುತ್ತದೆ. ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರೇ ಹೀಗೆ ಮಾಡಿದರೆ ಇನ್ನು ಜನಸಾಮಾನ್ಯರ ಪಾಡೇನು? ಆದ್ದರಿಂದ ತಾವು ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಮನವಿಯಲ್ಲಿ ಒತ್ತಾಯಿಸಲಾಗಿದೆ.

Join Whatsapp