► ತೀರ್ಪು ನ್ಯಾಯದ ಅಣಕ
► ಸಿಬಿಐ ನ್ಯಾಯಾಲಯದ ರಾಜಕೀಯ ತೀರ್ಪು
► ಸ್ವತಂತ್ರ ಸಂಸ್ಥೆಗಳ ಮೇಲೆ ಹೆಚ್ಚುತ್ತಿರುವ ಬಿಜೆಪಿ ಹಿಡಿತ
► ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಚೆಯರ್ಮ್ಯಾನ್ ಹೇಳಿಕೆ
ಹೊಸದಿಲ್ಲಿ: ಬಾಬ್ರಿ ಮಸ್ಜಿದ್ ಧ್ವಂಸದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಭಾರತೀಯ ಜನರಿಗೆ ಅಪಮಾನಕರ ಎಂಬುದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ಮ್ಯಾನ್ ಒ.ಎಂ.ಎ ಸಲಾಮ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ ಜಾತ್ಯತೀತ ರಾಷ್ಟ್ರ ಎಂಬ ಕಲ್ಪನೆಗೆ ಈ ತೀರ್ಪು ಸವಾಲಾಗಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಸ್ಜಿದ್ ಧ್ವಂಸವು ಪೂರ್ವಯೋಜಿತವಲ್ಲ. ಆರೋಪಿ ನಾಯಕರು ಮಸೀದಿಗೆ ಹತ್ತಿ ಧ್ವಂಸ ಮಾಡುತ್ತಿದ್ದ ಗುಂಪನ್ನು ತಡೆಯಲು ಪ್ರಯತ್ನಿಸುತ್ತಿದ್ದರು ಎನ್ನುವ ಮೂಲಕ ತೀರ್ಪು ನ್ಯಾಯದ ಅಣಕವನ್ನು ಮಾಡಿದೆ.
ಹಾಡು ಹಗಲೇ ಮಾಧ್ಯಮಗಳ ಮುಂದೆ ನಡೆದ ಕ್ರೂರ ಸಂಘಟಿತ ಅಪರಾಧದ ಕುರಿತು ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಕೆ.ಯಾದವ್ ನೀಡಿದ ತೀರ್ಪು, ಸಾಕ್ಷ್ಯಾಧಾರಗಳ ಕೊರತೆಯಿರುವುದಕ್ಕಾಗಿ ಅಡ್ವಾಣಿ ಒಳಗೊಂಡಂತೆ ಎಲ್ಲಾ 32 ಮಂದಿ ಆರೋಪಿಗಳನ್ನು ನಿರ್ದೋಷಿಗಳೆಂದು ಹೇಳಿದ್ದು, ತೀರ್ಪು ಅತ್ಯಂತ ಕಿವುಡು ಮತ್ತು ಕುರುಡಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ.
ಬಾಬ್ರಿ ಧ್ವಂಸ ಪ್ರಕರಣದಲ್ಲಿ ಸಿಬಿಐ ಕೋರ್ಟು ರಾಜಕೀಯ ತೀರ್ಪೊಂದನ್ನು ಸೃಷ್ಟಿಸಿದ್ದು, ಅಪರಾಧ ಪ್ರಕರಣವಿರಬೇಕಾದಂತೆ ವಾಸ್ತವ ಮತ್ತು ಪುರಾವೆಗಳನ್ನು ಆಧರಿಸಿಲ್ಲ. 2019ರ ನವೆಂಬರ್ 9ರಂದು ರಾಮ ಮಂದಿರವನ್ನು ನಿರ್ಮಿಸಲು ಅನುಮತಿಸಿ ನೀಡಿದ ಸುಪ್ರೀ ಕೋರ್ಟ್ ತೀರ್ಪಿನ ವೇಳೆ ಧ್ವಂಸ ಒಂದು ಅಪರಾಧ ಕೃತ್ಯವೆಂದು ಹೇಳಿರುವುದರಿಂದ ಧ್ವಂಸದ ಕುರಿತು ಇಂತಹ ತೀರ್ಪನ್ನು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಸ್ವತಂತ್ರ ಏಜೆನ್ಸಿಗಳ ಮೇಲೆ ಬಿಜೆಪಿ ನೇತೃತ್ವದ ಸರಕಾರದ ಸಂಪೂರ್ಣ ಪ್ರಭಾವ ಮತ್ತು ನಿಯಂತ್ರಣ ಹೆಚ್ಚುತ್ತಿರುವುದು ದೇಶದ ಮುಂದಿರುವ ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.