Home ಟಾಪ್ ಸುದ್ದಿಗಳು ಬಾಬ್ರಿಯನ್ನು ನಾವೇ ಉರುಳಿಸಿದೆವು: ಧ್ವಂಸ ಆರೋಪಿ ಜಯ್ ಭಗವಾನ್ ಹೇಳಿಕೆ

ಬಾಬ್ರಿಯನ್ನು ನಾವೇ ಉರುಳಿಸಿದೆವು: ಧ್ವಂಸ ಆರೋಪಿ ಜಯ್ ಭಗವಾನ್ ಹೇಳಿಕೆ

ಉರುಳಿಸುವುದು ಕರಸೇವೆಯ ಮುಖ್ಯ ಅಜೆಂಡಾವಾಗಿತ್ತು

ಕಾಶಿ ಮತ್ತು ಮಥುರಾ ಮುಂದಿನ ಅಜೆಂಡ

ಲಕ್ನೊ: ಅಯೋಧ್ಯೆಯಲ್ಲಿ ಬಾಬ್ರಿ ಮಸ್ಜಿದ್ ಧ್ವಂಸ ಪ್ರಕರಣದಲ್ಲಿ 28 ವರ್ಷಗಳ ವಿಚಾರಣೆಗಳ ಬಳಿಕ ಸಿ.ಬಿ.ಐ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಮಸ್ಜಿದ್ ಧ್ವಂಸವು ಪೂರ್ವಯೋಜಿತವೆಂದು ಸಾಬೀತಾಗಿಲ್ಲ ಮತ್ತು ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಅದೇ ಪ್ರಕರಣದಲ್ಲಿ ಖುಲಾಸೆಯಾಗಿರುವ ಆರೋಪಿಗಳಲ್ಲೊಬ್ಬ ಜಯ್ ಭಗವಾನ್ ಗೋಯಲ್, ಕಟ್ಟಡವನ್ನು ನಾನು ಧ್ವಂಸಗೊಳಿಸಿದ್ದೇನೆ. ಹಿಂದೂ ಗೆದ್ದಿದ್ದಾನೆ. ಈಗ ಕಾಶಿ ಮತ್ತು ಮಥುರಾ ನಮ್ಮ ಅಜೆಂಡಾ” ಎಂಬುದಾಗಿ ಹೇಳಿದ್ದಾರೆ.

ಎ.ಬಿ.ಪಿ ನ್ಯೂಸ್ ಜೊತೆ ಮಾತನಾಡಿದ ಜಯ್ ಭಗವಾನ್ ಗೋಯಲ್, “ಹೌದು ನಾನು ಕಟ್ಟಡವನ್ನು ಮುರಿದಿದ್ದೆ ಮತ್ತು ನನಗೆ ಹೆಮ್ಮೆ ಇದೆ. ಸಿ.ಬಿ.ಐ ಕೋರ್ಟ್ ನನ್ನನ್ನು ದೋಷಮುಕ್ತಗೊಳಿಸಿದೆ. ಅದಕ್ಕಾಗಿ ಧ್ಯನ್ಯವಾದಗಳು. ಸಿ.ಬಿ.ಐ ಕೋರ್ಟ್ ನಮಗೆ ಸಜೆಯನ್ನು ನೀಡಿದ್ದರೆ ನಾವು ಅದನ್ನೂ ಸ್ವೀಕರಿಸುತ್ತಿದ್ದೆವು. ಖಂಡಿತವಾಗಿಯೂ ನಾವು ಕಟ್ಟಡವನ್ನು ಉರುಳಿಸಿದ್ದೆವು. ಹಾಗಾಗಿಯೇ ಇಂದು ರಾಮಮಂದಿರ ನಿರ್ಮಾಣವಾಗುತ್ತಿದೆ. 1992ರ ಡಿಸೆಂಬರ್ 6 ರಂದು ಮಸೀದಿ ಉರುಳದಿದ್ದರೆ ಮಂದಿರ ಹೇಗೆ ರಚನೆಯಾಗುತ್ತಿತ್ತು. ಹಿಂದೂ ಗೆದ್ದಿದ್ದಾನೆ. ನಮ್ಮ ಮುಂದಿನ ಅಜೆಂಡಾ ಕಾಶಿ ಮತ್ತು ಮಥುರಾ” ಎಂದು ಅವರು ಹೇಳಿದ್ದಾರೆ.

ಬಾಬ್ರಿ ಮಸ್ಜಿದ್ ಧ್ವಂಸವು ಪೂರ್ವನಿಯೋಜಿತ ಸಂಚಾಗಿತ್ತೇ ಎಂಬ ಪ್ರಶ್ನೆಗೆ, “ನಾವೇ ಕಟ್ಟಡವನ್ನು ಉರುಳಿಸಿದೆವೆಂದು ಕೋರ್ಟ್ ಗೆ ನಾವು ಈಗಾಗಲೇ ಹೇಳಿದ್ದೆವು. 90ರಲ್ಲಿ ಕರಸೇವಕರನ್ನು ಗೋಲಿಗಳಿಂದ ಹುರಿಯಲಾಗಿತ್ತು. ನಮ್ಮ ನಾಯಕ ಅಶೋಕ್ ಸಿಂಘಲ್ ರ ತಲೆ ಒಡೆದಿತ್ತು. ಇದೆಲ್ಲವನ್ನು ನಾವು ನೋಡಿದ್ದೆವು. ಕರಸೇವೆಯಲ್ಲಿ ಕಟ್ಟಡವು ಉರುಳಲೇಬೇಕೆಂಬ ಆಕ್ರೋಶ ನಮ್ಮಲ್ಲಿತ್ತು” ಎಂದು ಉತ್ತರಿಸಿದರು. ಮುಂದಕ್ಕೆ ಮಾತನಾಡುತ್ತಾ, ‘ಕಟ್ಟಡವು ಉಳಿಯಬಾರದೆಂಬುದು ನಮ್ಮ ಸಂಪೂರ್ಣ ಅಜೆಂಡಾವಾಗಿತ್ತು. ಕಟ್ಟಡವು ಉರುಳಲೇಬೇಕು. ಇದು ನಮ್ಮ ಪ್ರಜ್ನೆಯಾಗಿತ್ತು. ಅದರೊಂದಿಗೆ ಹನುಮಾನ್ ನ ಕೃಪೆಯೂ ಇತ್ತು. ಸಾವಿರಾರು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಅಲ್ಲಿ ಸೇರಿದ್ದೆವು ಮತ್ತು ಎಲ್ಲಾ ಕರಸೇವಕರೊಳಗೆ ಹನುಮಾನ್ ಪ್ರವೇಶಿಸಿದ್ದ’ಎಂದರು.

Join Whatsapp
Exit mobile version