ಫಿಫಾ ವಿಶ್ವಕಪ್‌| ಮೆಸ್ಸಿ ಮ್ಯಾಜಿಕ್‌ ಬಲದಲ್ಲಿ ಗೆದ್ದು ಮುನ್ನಡೆದ ಅರ್ಜೆಂಟೀನಾ

Prasthutha|

- Advertisement -

ವೃತ್ತಿ ಜೀವನದ ಅತ್ಯಂತ ಮಹತ್ವದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಲಿಯೋನೆಲ್‌ ಮೆಸ್ಸಿ, ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಜೆಂಟೀನಾಗೆ ಮೊದಲ ಜಯ ತಂದುಕೊಟ್ಟಿದ್ದಾರೆ. ಶನಿವಾರ ಮಧ್ಯರಾತ್ರಿ ಕತಾರ್‌ನ ಲುಸೈಲ್‌ ಸ್ಟೇಡಿಯಂನಲ್ಲಿ ನಡೆದ ʻಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಮೆಕ್ಸಿಕೋ ತಂಡವನ್ನು 2-0 ಅಂತರದಲ್ಲಿ ಮಣಿಸಿದ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಮಹತ್ವದ 3 ಅಂಕ ಕಲೆಹಾಕಿತು.

ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಸೌಧಿ ಅರೇಬಿಯಾಗೆ ಶರಣಾಗಿದ್ದ ಅರ್ಜೆಂಟೀನಾ, ಶನಿವಾರದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಮೊದಲಾರ್ಧದಲ್ಲಿ ಅರ್ಜೆಂಟೀನಾ ಗೋಲು ಗಳಿಸುವ ಎಲ್ಲಾ ಪ್ರಯತ್ನಕ್ಕೆ ಮೆಕ್ಸಕನ್‌ ಪ್ರತಿರೋಧ ವಿಭಾಗ ತಡೆ ಒಡ್ಡಿತ್ತು. ದ್ವಿತಿಯಾರ್ಧದ 64ನೇ ನಿಮಿಷದಲ್ಲಿ ಏಂಜಲ್‌ ಡಿ ಮರಿಯಾ ನೀಡಿದ ಸುಂದರ ಪಾಸ್‌ ಪಡೆದುಕೊಂಡ ಮೆಸ್ಸಿ, ಮೆಕ್ಸಿಕನ್‌ ಡಿಫೆನ್ಸ್‌ ಆಟಗಾರರನ್ನು ವಂಚಿಸಿ 25 ಮೀಟರ್‌ ದೂರದಿಂದ ಗೋಲು ಬಲೆಯ ಎಡಭಾಗದಂಚಿಗೆ ಚೆಂಡನ್ನು ಸೇರಿಸುವಲ್ಲಿ ಯಶಸ್ವಿಯಾದರು.

- Advertisement -

ಇದಾದ 23 ನಿಮಿಷಗಳ ಬಳಿಕ ಮೆಸ್ಸಿಯಿಂದ ಪಾಸ್‌ ಪಡೆದ ಬದಲಿ ಆಟಗಾರ ಎನ್ಝೊ ಫೆರ್ನಾಂಡಿಸ್‌ ಆಕರ್ಷಕ ಗೋಲು ದಾಖಲಿಸಿ ಮುನ್ನಡೆಯನ್ನು ಹೆಚ್ಚಿಸಿದರು. ಮತ್ತೊಂದೆಡೆ ಡಿಫೆನ್ಸ್‌ ವಿಭಾಗಕ್ಕೆ ಹೆಚ್ಚು ಒತ್ತುನೀಡಿದ ಮೆಕ್ಸಿಕೊ, ಖಾತೆ ತರೆಯುವಲ್ಲಿ ವಿಫಲವಾಯಿತು. ಪೋಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದ್ದ ಮೆಕ್ಸಿಕೊ, 2ನೇ ಪಂದ್ಯದಲ್ಲಿ ಸೋಲು ಕಾಣುವುದರೊಂದಿಗೆ ವಿಶ್ವಕಪ್‌ ಟೂರ್ನಿಯಿಂದ ಗ್ರೂಪ್‌ ಹಂತದಲ್ಲೇ ನಿರ್ಗಮಿಸುವ ಸಂಕಷ್ಠಕ್ಕೆ ಸಿಲುಕಿದೆ.

ಇದಕ್ಕೂ ಮೊದಲು ಅಲ್‌ ಜನೌಬ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ, ಟ್ಯುನೀಷಿಯಾ ತಂಡವನ್ನು ಏಕೈಕ ಗೋಲುಗಳಿಂದ ಮಣಿಸುವಲ್ಲಿ ಯಶಸ್ವಿಯಾಯಿತು.

Join Whatsapp