ಪ್ರಸ್ತುತ ಪಾಕ್ಷಿಕದ ಆನ್ ಲೈನ್ ನ್ಯೂಸ್ ಪೋರ್ಟಲ್ www.prasthutha.comಗೆ ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಕೆ.ಎಂ.ಶರೀಫ್ ರವರು 74ನೇ ಸ್ವಾತಂತ್ರ್ಯೋತ್ಸವದ ವಿಶೇಷ ಸಂದರ್ಭದಲ್ಲಿಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ.ಶರೀಫ್, ಕಳೆದ 14 ವರ್ಷಗಳಿಂದ ಮಾಧ್ಯಮ ರಂಗದಲ್ಲಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ಜನಸಾಮಾನ್ಯರ ಧ್ವನಿಯಾಗಲು ಸಾಧ್ಯವಾಗಿದೆ. ಅವರ ಸಮಸ್ಯೆಗಳನ್ನು ಪ್ರಸ್ತುತಪಡಿಸಲು, ಅವರಲ್ಲಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಇದಕ್ಕೆ ಸಾಧ್ಯವಾಗಿದೆ. ಹಕ್ಕುಗಳಿಂದ ವಂಚಿತವಾದ ದೇಶದ ತಳ ಸಮುದಾಯದ ಪರವಾದ ತನ್ನ ಧ್ಯೇಯೋದ್ದೇಶದಿಂದ ಪ್ರಸ್ತುತವು ಎಂದೂ ವ್ಯತಿ ಚಲಿಸದೇ, ತನ್ನ ನಿಲುವಿನಲ್ಲಿ ಅಚಲವಾಗಿ ನಿಂತಿದೆ. ದೇಶವು ಇಂದು 74ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದರೂ, ಜನರಿಗೆ ಸ್ವಾತಂತ್ರ್ಯವು ಮರೀಚಿಕೆಯಾಗಿಯೇ ಉಳಿದಿದೆ. ಭಾರತೀಯರಿಗೆ ಬ್ರಿಟಿಷರ ದಾಸ್ಯತನದಿಂದ ಸ್ವಾತಂತ್ರ್ಯ ದೊರಕಿದೆ. ಆದರೆ ಅವರ ಬದುಕಿನ ನೈಜ ಸಮಸ್ಯೆಗಳು ಇನ್ನೂ ಜ್ವಲಂತವಾಗಿವೆ. ಭಾರತದ ಎಲ್ಲಾ ದಮನಿತ ಸಮುದಾಯಗಳ ವರ್ಗಗಳ ಸಮಸ್ಯೆಗಳಿಗೂ ಧ್ವನಿಯಾಗುತ್ತಾ, ಪ್ರಸ್ತುತವು ಡಿಜಿಟಲ್ ಮಾಧ್ಯಮದ ಮೂಲಕ ಅವರಿಗೆ ಮತ್ತಷ್ಟು ನಿಕಟವಾಗಲಿದೆ ಎಂದು ಹೇಳಿದರು.
ಪ್ರಸ್ತುತ ನ್ಯೂಸ್ ಪೋರ್ಟಲ್ ನ ಸಂಪಾದಕ ಝಿಯಾವುಲ್ ಹಖ್, ಪ್ರಸ್ತುತ ಪಾಕ್ಷಿಕ ಸಂಪಾದಕೀಯ ಮಂಡಳಿ ಸದಸ್ಯ ಅಬ್ದುಲ್ ರಝಾಕ್ ಕೆಮ್ಮಾರ ಈ ಸಂದರ್ಭದಲ್ಲಿ ಹಾಜರಿದ್ದರು.