ನವದೆಹಲಿ : ತಮ್ಮ ಎರಡು ಟ್ವೀಟ್ ಗಳಿಗಾಗಿ ನ್ಯಾಯಾಂಗ ನಿಂದನೆ ಆರೋಪ ಎದುರಿಸುತಿದ್ದ ಖ್ಯಾತ ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ಪ್ರಮುಖ ನ್ಯಾಯವಾದಿಗಳ ಒಕ್ಕೂಟ ತೀವ್ರ ಕಳವಳ ಹಾಗೂ ಆಕ್ರೋಶ ವ್ಯಕ್ತಪಡಿಸಿದೆ. ಈ ತೀರ್ಪು ಕೆಟ್ಟ ಪರಂಪರೆಯನ್ನು ಹುಟ್ಟು ಹಾಕಲಿದೆ ಮತ್ತು ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾಂಗದ ಔಚಿತ್ಯದ ಟೀಕೆ ಮತ್ತು ಅಭಿವ್ಯಕ್ತಿಯ ಮೇಲೆ ಪರಿಣಾಮ ಬೀರಲಿದೆ ಎಂದು ಅಖಿಲ ಭಾರತ ನ್ಯಾಯವಾದಿಗಳ ಸಂಘ (ಎಐಎಲ್ ಯು) ಅಭಿಪ್ರಾಯ ಪಟ್ಟಿದೆ.
ಸುಪ್ರೀಂ ಕೋರ್ಟ್ ನ ಈ ತೀರ್ಪು ಎಚ್ಚರಿಕೆ ಗಂಟೆಯಾಗಿದ್ದು, ಇದು ಸುಪ್ರೀಂ ಕೋರ್ಟ್ ನ ಮತ್ತೊಂದು ಸ್ವಯಂ ಘಾಸಿತನ ಎಂದು ಎಐಎಲ್ ಯು ಪ್ರಧಾನ ಕಾರ್ಯದರ್ಶಿ ಪಿ.ವಿ. ಸುರೇಂದ್ರನಾಥ್ ಹೇಳಿದ್ದಾರೆ. ಈ ತೀರ್ಪಿನಿಂದಾಗಿ ನ್ಯಾಯಾಂಗ ನಿಂದನೆ ಕಾಯ್ದೆಯಡಿ ಕ್ರಿಮಿನಲ್ ನಿಂದನೆ ಕುರಿತ ಅಂಶಗಳು ರದ್ದುಗೊಳಿಸಬೇಕಾದ ಬಗ್ಗೆ ಚರ್ಚೆಗಳನ್ನು ಹುಟ್ಟು ಹಾಕಲಿದೆ ಎಂದು ಅವರು ಹೇಳಿದ್ದಾರೆ.
ನ್ಯಾಯವಾದಿಗಳ ಮತ್ತೊಂದು ಪ್ರಮುಖ ಒಕ್ಕೂಟ ಅಖಿಲ ಭಾರತ ನ್ಯಾಯವಾದಿಗಳ ಮಂಡಳಿ (ಎಐಎಲ್ ಸಿ) ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ. ಸ್ವಯಂ ಘೋಷಿತ ಜಾತ್ಯತೀತ ಪಕ್ಷಗಳು ವಿಫಲವಾದಾಗ, ಸತ್ಯವನ್ನು ಹೇಳುವಲ್ಲಿ ಭೂಷನ್ ಧೈರ್ಯ ತೋರಿದ್ದರು ಎಂದು ಎಐಎಲ್ ಸಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶರ್ಫುದ್ದೀನ್ ಅಹ್ಮದ್ ಹೇಳಿದ್ದಾರೆ. ಭೂಷಣ್ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಹ್ಮದ್, ದೇಶದ ಪ್ರಜಾಪ್ರಭುತ್ವ ರಕ್ಷಿಸುವಲ್ಲಿ ಸತ್ಯವನ್ನು ಹೇಳುವ ಧೈರ್ಯ ತೋರುತ್ತಿರುವ ಅಪರೂಪದ ಧ್ವನಿಗಳಲ್ಲಿ ಅವರೂ ಒಬ್ಬರು, ಅವರು ಜಯಪ್ರಕಾಶ್ ರ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಮೂರ್ತಿಗಳ ಕುರಿತಂತೆ ಪ್ರಶಾಂತ್ ಭೂಷಣ್ ಮಾಡಿದ್ದ ಎರಡು ಟ್ವೀಟ್ ಗಳು ವಿವಾದದ ಕೇಂದ್ರ ಬಿಂದುವಾಗಿದೆ. ಕಳೆದ ಆರು ವರ್ಷಗಳಿಂದ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಹಾನಿಯಾಗುತ್ತಿದೆ. ಇದರಲ್ಲಿ ಸುಪ್ರೀಂ ಕೋರ್ಟ್ ಮತ್ತು ಸಿಜೆಐಗಳ ಪಾತ್ರವೂ ಇದೆ ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿದ್ದರು. ಇದು ನ್ಯಾಯಾಂಗ ನಿಂದನೆಯಾಗಿದ್ದು, ಇದೀಗ ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದಿದೆ.