Home ಟಾಪ್ ಸುದ್ದಿಗಳು ಪ್ರಜಾಕೀಯ ಮುಖಂಡರು ಆಮ್ ಆದ್ಮಿ ಪಾರ್ಟಿ ಸೇರ್ಪಡೆ

ಪ್ರಜಾಕೀಯ ಮುಖಂಡರು ಆಮ್ ಆದ್ಮಿ ಪಾರ್ಟಿ ಸೇರ್ಪಡೆ

ಬೆಂಗಳೂರು: ಪ್ರಜಾಕೀಯ ಪಕ್ಷದ ಮುಖಂಡರಾದ ಮೋಹನ್ ಕುಮಾರ್ ಮತ್ತು ಅಮೃತಾ ಸುನಿ, ಹಾಗೂ ಗಾಯಕಿ, ನಿರೂಪಕಿ ಮಿಷೆಲ್ ನೊರೊನ್ಹಾರವರು ಗುರುವಾರ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇಬ್ಬರು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಬೆಂಗಳೂರು ಎಎಪಿ ಅಧ್ಯಕ್ಷ ಮೋಹನ್ ದಾಸರಿ, “ಸ್ನೇಹಜೀವಿ ಗೆಳೆಯರ ಬಳಗದ ಅಧ್ಯಕ್ಷರಾಗಿ ಮೋಹನ್ ಕುಮಾರ್ ಅನೇಕ ಸಮಾಜಸೇವೆಗಳನ್ನು ಮಾಡಿದ್ದಾರೆ.

ಅನಾಥಾಶ್ರಮಗಳಿಗೆ ನೆರವಾಗುವುದು, ನೆರೆ ಪರಿಹಾರ, ರೋಗಿಗಳಿಗೆ ಹೂವು-ಹಣ್ಣು ವಿತರಣೆ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ ಕೆಂಗೇರಿ ಸುತ್ತಮುತ್ತ ಪ್ರಜಾಕೀಯ ಪಕ್ಷವನ್ನು ಸಂಘಟಿಸಿದ ಅನುಭವ ಹೊಂದಿದ್ದಾರೆ. ಅಪಾರ ಜನಪರ ಕಾಳಜಿ ಹೊಂದಿರುವ ಇವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಸಂತೋಷವಾಗುತ್ತದೆ” ಎಂದು ಹೇಳಿದರು.


“ಅಮೃತಾ ಸುನಿಯವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಭ್ರಷ್ಟಾಚಾರ ನಿಯಂತ್ರಣ ಮಂಡಳಿಯ ರಾಜ್ಯಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಪ್ರಜಾಕೀಯ ಪಕ್ಷವು ಆರಂಭವಾದಾಗಿನಿಂಗಲೂ ಅದರಲ್ಲಿ ತೊಡಗಿಕೊಂಡಿದ್ದರು. ಈಗ ಆಮ್ ಆದ್ಮಿ ಪಾರ್ಟಿಯೊಂದೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಬದಿಗೊತ್ತಬಹುದು ಎಂಬುದನ್ನು ಅರಿತು ಎಎಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ಆಸಕ್ತಿ ಹೊಂದಿರುವ ಇವರ ಸೇರ್ಪಡೆಯು ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ” ಎಂದು ಮೋಹನ್ ದಾಸರಿ ಹೇಳಿದರು.


“ನಿರೂಪಕಿ ಹಾಗೂ ಗಾಯಕಿ ಮಿಷೆಲ್ ನೊರೊನ್ಹಾರವರು ದುಬೈನಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿನ ಮೂಲಸೌಕರ್ಯಗಳು, ಸರ್ಕಾರಿ ವ್ಯವಸ್ಥೆ ಹಾಗೂ ಆಡಳಿತವನ್ನು ಮೆಚ್ಚಿ, ಕರ್ನಾಟಕದ ಜನರಿಗೂ ಅವು ಸಿಗಬೇಕೆಂಬ ಬಯಸುತ್ತಿದ್ದಾರೆ. ಬೊಂಬಾಟ್ ಕರ್ನಾಟಕ ಎಂಬ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೂಟ್ಯೂಬ್ ಚಾನೆಲ್ನ ಇವರು ಮುನ್ನಡೆಸುತ್ತಿದ್ದಾರೆ” ಎಂದು ಮೋಹನ್ ದಾಸರಿ ಹೇಳಿದರು.


ಆಮ್ ಆದ್ಮಿ ಪಾರ್ಟಿಯ ಸಿದ್ಧಾಂತಗಳು, ದೆಹಲಿ ಹಾಗೂ ಪಂಜಾಬ್‌ನಲ್ಲಿನ ಪಾರದರ್ಶಕ ಹಾಗೂ ಜನಪರ ಆಡಳಿತ, ಹಾಗೂ ಅರವಿಂದ್ ಕೇಜ್ರಿವಾಲ್ರವರ ಸಮರ್ಥ ನಾಯಕತ್ವವನ್ನು ಮೆಚ್ಚಿ ಸೇರ್ಪಡೆಯಾಗುತ್ತಿರುವುದಾಗಿ ಮೋಹನ್ ಕುಮಾರ್, ಅಮೃತಾ ಸುನಿ ಹಾಗೂ ಮಿಷೆಲ್ ನೊರೊನ್ಹಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ , ಚನ್ನಪ್ಪಗೌಡ ನೆಲ್ಲೂರು ಲೋಕೇಶ್ ಮತ್ತಿತರ ಮುಖಂಡರು, ಪಕ್ಷ ಸೇರ್ಪಡೆಯಾದ ಪ್ರಜಾಕೀಯ ಮುಖಂಡರ ಆಪ್ತರು, ಬೆಂಬಲಿಗರು ಭಾಗವಹಿಸಿದ್ದರು.

Join Whatsapp
Exit mobile version