ಮುಂಬೈ : ಹೈದರಾಬಾದ್ ನ ಮಲ್ಕಜ್ ಗಿರಿ ಪೊಲೀಸ್ ಠಾಣೆಯು ಸುಳ್ಳು ಹಾಗೂ ಆಧಾರ ರಹಿತ ವರದಿಯಿಂದಾಗಿ, ವಿಚಾರವಾದಿ ಪ್ರೊ. ಜಿಎನ್ ಸಾಯಿಬಾಬಾರಿಗೆ, ತಮ್ಮ ತಾಯಿಯ ನಿಧನದ ಸಂದರ್ಭ ನಾಗ್ಪುರ ಜೈಲು ವರಿಷ್ಠಾಧಿಕಾರಿ ತುರ್ತು ಪರೋಲ್ ನಿರಾಕರಿಸಿದರು ಎಂದು ಅವರ ಕುಟುಂಬ ಆಪಾದಿಸಿದೆ.
ಸಾಯಿಬಾಬಾರ ತಾಯಿ ಆ.1ರಂದು ನಿಧನರಾಗಿದ್ದರು. ಅವರ ನಿಧನದ ಕುರಿತು ವಿಚಾರಿಸಲು ತಾವು ಸಾಯಿಬಾಬಾರ ಮನೆಗೆ ತೆರಳಿದ್ದೆವು. ಆದರೆ, ಅಲ್ಲಿ ಕುಟುಂಬದ ಯಾರೊಬ್ಬರೂ ಸಾಯಿಬಾಬಾರನ್ನು ಭೇಟಿಯಾಗಲು ಅಥವಾ ಯಾವುದೇ ಪ್ರಾಧಿಕಾರದ ಮುಂದೆ ಹಾಜರು ಪಡಿಸಲು ಸಿದ್ಧರಿರಲಿಲ್ಲ ಎಂದು ಮಲ್ಕಜ್ ಗಿರಿ ಠಾಣೆಯ ಇನ್ಸ್ ಪೆಕ್ಟರ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಸಾಯಿಬಾಬಾರ ಪತ್ನಿ ಮತ್ತು ಮಗಳು ದೆಹಲಿಯಲ್ಲಿ ವಾಸಿಸುತ್ತಾರೆ. ಅವರ ತಾಯಿಯ ಅಂತ್ಯ ಸಂಸ್ಕಾರ ಅವರು ನಿಧನವಾದ ದಿನದಂದೇ ನಡೆಯಲಿದೆ. ಹೀಗಾಗಿ ಸಾಯಿಬಾಬಾ ಪರೋಲ್ ನಲ್ಲಿ ಹೈದರಾಬಾದ್ ಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ನಾಗ್ಪುರ ಜೈಲು ಈ ತನಿಖಾ ವರದಿಯನ್ನು ನಂಬಿ, ಸಾಯಿಬಾಬಾರ ತಾಯಿ ಮರಣವಾದ ಮರುದಿನ ತುರ್ತು ಪರೋಲ್ ಮನವಿಯನ್ನು ತಿರಸ್ಕರಿಸಿತ್ತು.
ಕುಟುಂಬದ ಸದಸ್ಯರು ಯಾರೊಬ್ಬರೂ ಸಾಯಿಬಾಬಾರನ್ನು ಭೇಟಿಯಾಗುವ ಇಚ್ಛೆ ಹೊಂದಿಲ್ಲ ಎಂಬುದು ಸಂಪೂರ್ಣ ಸುಳ್ಳು ಮತ್ತು ಆಧಾರ ರಹಿತವಾದುದು ಹಾಗೂ ಸೃಷ್ಟಿಸಲ್ಪಟ್ಟಿರುವುದು ಎಂದು ಅವರ ಸಹೋದರ ಜಿ. ರಾಮದೇವುಡು ಹೇಳಿದ್ದಾರೆ.
ಸ್ಥಳೀಯ ಠಾಣೆಯ ಇಬ್ಬರು ಕಾನ್ಸ್ ಟೇಬಲ್ ಗಳು ಬಂದಿದ್ದರು. ಅವರು ಸಾಯಿಬಾಬಾರನ್ನು ಭೇಟಿಯಾಗುವ ಇಚ್ಛೆಯಿದೆಯೇ ಎಂದು ಕೇಳಲೇ ಇಲ್ಲ. ಅವರಿಗೆ ಏನು ಭರವಸೆ ಬೇಕಿತ್ತೋ ಅದನ್ನು ನೀಡಲು ಸಿದ್ಧರಿದ್ದೆವು. ನಮ್ಮ ಸಹೋದರ ಓಡುವವನಲ್ಲ, ಅವರಿಗೆ ಚಲಿಸಲೂ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ರಾಮದೇವುಡು ಹೇಳಿದ್ದಾರೆ.
ದೊಡ್ಡ ಮಗನಾಗಿರುವುದರಿಂದ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಸಾಯಿಬಾಬಾ ಭಾಗವಹಿಸಬೇಕೆಂದು ಕುಟುಂಬದ ಸದಸ್ಯರು ಬಯಸಿದ್ದರು. ತನ್ನ ಅಂತ್ಯ ಸಂಸ್ಕಾರ ಸಾಯಿಬಾಬಾನೇ ಮಾಡಬೇಕೆಂಬುದು ನಮ್ಮ ತಾಯಿಯ ಕೊನೆಯ ಆಸೆಯೂ ಆಗಿತ್ತು ಎಂದು ರಾಮದೇವುಡು ತಿಳಿಸಿದ್ದಾರೆ. ಸಾಯಿಬಾಬಾರ ತಾಯಿ 74 ವರ್ಷದ ಸೂರ್ಯವತಿ ಗೋಕರಕೊಂಡ ಆ.1ರಂದು ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು.
ಆದಿವಾಸಿ, ದಲಿತರ ಹಕ್ಕುಗಳಿಗಾಗಿ ಹೋರಾಡುವ ಸಾಮಾಜಿಕ ಕಾರ್ಯಕರ್ತ ಪ್ರೊ. ಸಾಯಿಬಾಬಾ ಶೇ.90ರಷ್ಟು ವಿಕಲಚೇತನರಾಗಿದ್ದಾರೆ. ಅವರು ವೀಲ್ ಚೇರ್ ನಲ್ಲೇ ಓಡಾಡುತ್ತಾರೆ. ಯುಎಪಿಎಯಡಿ ದೇಶದ್ರೋಹ ಮತ್ತು ಮಾವೊವಾದಿ ಸಂಪರ್ಕದ ಪ್ರಕರಣದಲ್ಲಿ ಅವರು ಶಿಕ್ಷಿತರಾಗಿದ್ದು, ನಾಗ್ಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.