Home ಟಾಪ್ ಸುದ್ದಿಗಳು ಪಠ್ಯಪರಿಷ್ಕರಣಾ ವಿರೋಧಿ ಪ್ರತಿಭಟನೆಯಲ್ಲಿದ್ದ ಮಹಿಳೆಯರೊಂದಿಗೆ ಅನುಚಿತ ವರ್ತನೆ : ದೂರು ದಾಖಲು

ಪಠ್ಯಪರಿಷ್ಕರಣಾ ವಿರೋಧಿ ಪ್ರತಿಭಟನೆಯಲ್ಲಿದ್ದ ಮಹಿಳೆಯರೊಂದಿಗೆ ಅನುಚಿತ ವರ್ತನೆ : ದೂರು ದಾಖಲು

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಯ ವಿರುದ್ಧ ಕುವೆಂಪು ಹೋರಾಟ ಸಮಿತಿ ಮತ್ತಿತರ ಸಮಾನ ಮನಸ್ಕರಿಂದ ಇಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ಪ್ರತಿಭಟನಾನಿರತ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆ ನಡೆದಿದೆ.

ಅನುಚಿತವಾಗಿ ವರ್ತಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಕಾರ್ಯಕ್ರಮ ಯೋಜಕರಲ್ಲೊಬ್ಬರಾದ ಬೈರಪ್ಪ ಹರೀಶ್ ಕುಮಾರ್ ಎಂಬುವವರು ದೂರು ದಾಖಲಿಸಿದ್ದಾರೆ. ‘ಅಪರಿಚಿತ ದುಷ್ಕರ್ಮಿಯೊಬ್ಬ ಮಹಿಳೆಯರ ಘನತೆಗೆ ಧಕ್ಕೆ ತರುವ ರೀತಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಪ್ರಶ್ನಿಸಿದ ನನ್ನ ಮೇಲೆ ಹಲ್ಲೆ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮಹಿಳೆಯರ ಅನುಚಿತ ರೂಪದಲ್ಲಿ ಫೋಟೋ, ವಿಡಿಯೋ ಮಾಡುತ್ತಿದ್ದನ್ನು ನಮ್ಮ ಪ್ರತಿಭಟನೆಗೆ ಬಂದಿದ್ದ ಮಹಿಳೆಯರು ಪ್ರಶ್ನಿಸಿದ್ದರು. ಪ್ರಶ್ನಿಸಿದವರ ಜೊತೆಯೂ ಆತ ಅನುಚಿತವಾಗಿ ವರ್ತಿಸಿದ್ದು, ಆತನ ವರ್ತನೆ ಮತ್ತು ಆತ ಬಳಸಿದ ಪದಗಳು ಮಹಿಳೆಯ ಘನತೆಗೆ ಧಕ್ಕೆ ತರುವಂತದ್ದಾಗಿತ್ತು. ಬುದ್ದಿವಾದ ಹೇಳಿ ಹೊರ ಹೋಗುವಂತೆ ಕೇಳಿಕೊಂಡಾಗ, ಆತ ನನ್ನ ಮೇಲೆ ಹಲ್ಲೆ ನಡೆಸಿದ್ದು, ನನ್ನ ಕುತ್ತಿಗೆ ಮತ್ತು ದೇಹದ ಹಲವು ಕಡೆ ಗಾಯ ಮತ್ತು ನೋವು ಉಂಟಾಗಿದೆ. ‘ ಎಂದೂ ಉಲ್ಲೇಖಿಸಿದ್ದಾರೆ.

ಈತನನ್ನು ಪೊಲೀಸರಿಗೆ ಒಪ್ಪಿಸಿದ್ದು, ಈತನ ವಿರುದ್ದ ಹಲ್ಲೆ, ಕಾನೂನು ಸುವ್ಯವಸ್ಥೆಗೆ ಅಡ್ಡಿ, ಮಹಿಳೆಯರ ಘನತೆಗೆ ಧಕ್ಕೆ ಪ್ರಕರಣಗಳನ್ನು ದಾಖಲಿಸಿ ನ್ಯಾಯ ಒದಗಿಸುವಂತೆ ಪೊಲೀಸರೊಂದಿ ಮನವಿ ಮಾಡಿದ್ದೇವೆ ಎಂದರು.

Join Whatsapp
Exit mobile version