ಜಲಂಧರ್: ಪಂಜಾಬ್ ನಲ್ಲಿ ವಿವಾದಾಸ್ಪದ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ಒಕ್ಕೂಟಗಳು ಅ.1 ರಂದು ಕಾರ್ಪೊರೇಟ್ ಕುಳಗಳ ವಿರುದ್ಧ ಬಹಿಷ್ಕಾರವನ್ನು ಘೋಷಿಸಿವೆ.
ಈ ಘೋಷಣೆಯ ಒಂದು ವಾರದ ಬಳಿಕ ರಾಜ್ಯಾದ್ಯಂತ ಪೆಟ್ರೋಲ್ ಪಂಪ್ ಗಳ ಮಾರಾಟವು ಸ್ಥಗಿತಗೊಂಡಿದೆ ಅಥವಾ 50% ಕಡಿಮೆಯಾಗಿದೆ. ಕಂಪೆನಿಯು ನಡೆಸುವ ಬಹುತೇಕ ಎಲ್ಲಾ ಪೆಟ್ರೋಲ್ ಪಂಪ್ ಗಳನ್ನು ರೈತ ಒಕ್ಕೂಟಗಳು ಬ್ಯಾರಿಕೇಡ್ ಗಳನ್ನು ಹಾಕಿ ತಡೆದಿವೆ. ಪಂಜಾಬ್ ನಲ್ಲಿ ಸುಮಾರು 85 ರಿಲಯನ್ಸ್ ಪೆಟ್ರೋಲ್ ಪಂಪ್ ಗಳಿವೆ.
ಕಾರ್ಪೊರೇಟ್ ಕುಳಗಳನ್ನು ಬಹಿಷ್ಕರಿಸುವ ಒಕ್ಕೂಟಗಳ ಕರೆಯು ತೀವ್ರ ಆರ್ಥಿಕ ಮತ್ತು ಸಾಮಾಜಿಕ ಆಂದೋಲನಕ್ಕೆ ಕಾರಣವಾಗಿದೆ. ಜನರು ಜಿಯೊ ಸಿಮ್ ಕಾರ್ಡ್ ಗಳನ್ನು ಕೂಡ ತ್ಯಜಿಸುತ್ತಿದ್ದಾರೆ. ರಿಲಯನ್ಸ್ ಶಾಪಿಂಗ್ ಮಾಲ್ ಗಳು, ಮೊಗ ಮತ್ತು ಸಂಗ್ರೂರ್ ನಲ್ಲಿರುವ ಅದಾನಿಯ ಸಿಲೊ ಯೋಜನೆ, ಗುರುಗೋವಿಂದ್ ಸಿಂಗ್ – ಎಚ್.ಪಿ.ಸಿ.ಎಲ್ ಸಂಸ್ಕರಣಾ ಘಟಕ, ವಾಲ್ಮಾರ್ಟ್ ಮತ್ತು ಬೆಸ್ಟ್ ಪ್ರೈಸ್ ಸ್ಟೋರ್ ಗಳು, ಟೋಲ್ ಪ್ಲಾಝಾಗಳ ಮುಂಭಾಗದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಎಸ್ಸಾರ್ ಪೆಟ್ರೋಲ್ ಪಂಪ್ ಗಳಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ.
ಬಥಿಂಡಾದ ತಲ್ವಂಡಿ ಸಾಬೊದಲ್ಲಿ ದಿ ವೈರ್ ನೊಂದಿಗೆ ಮಾತನಾಡಿದ ರಿಲೈನ್ಸ್ ಪೆಟ್ರೋಲ್ ಪಂಪ್ ಪಾಲುದಾರ ಪಂಕಜ್ ಬನ್ಸಾಲ್, “ಭಾರತೀಯ ಕಿಸಾನ್ ಯೂನಿಯನ್” (ಏಕ್ತಾ ಉಗ್ರಹಾನ್)ನ ಸದಸ್ಯರು ಅಕ್ಟೋಬರ್ 1ರಿಂದ ನಮ್ಮ ಪೆಟ್ರೋಲ್ ಪಂಪ್ ಹೊರಗಡೆ ಪ್ರತಿಭಟನೆಗೆ ಕುಳಿತಿದ್ದಾರೆ. ನಮ್ಮ ಮಾರಾಟವು ಶೂನ್ಯವಾಗಿದೆ ಮತ್ತು ಸಿಬ್ಬಂದಿಗಳು ಖಾಲಿ ಕುಳಿತಿದ್ದಾರೆ. ರೈತರು ನಮ್ಮ ಪೆಟ್ರೋಲ್ ಪಂಪ್ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದರೂ ನಾವು ಈಗಾಗಲೇ ಅವರಿಗೆ ನಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದೇವೆ. ನಮ್ಮ 18 ಸಿಬ್ಬಂದಿಗಳಲ್ಲಿ 15 ಮಂದಿ ಸ್ಥಳಿಯ ರೈತರ ಮಕ್ಕಳು”, ಎಂದರು.