-ರಮೇಶ್ ಎಸ್.ಪೆರ್ಲ
ಮೂರನೇ ಒಂದರಷ್ಟು ಮುಸ್ಲಿಮ್ ಜನಸಂಖ್ಯೆ ಇರುವ ಪಶ್ಚಿಮ ಬಂಗಾಳ ಭಾರತೀಯ ಜನತಾ ಪಕ್ಷದ ದ್ವೇಷರಾಜಕಾರಣಕ್ಕೆ ಹೇಳಿ ಮಾಡಿಸಿದ ರಾಜ್ಯ. ಬಂಗಾಳದ ಈ ಚುನಾವಣೆಯಲ್ಲಿ ಬಿಜೆಪಿ ಕೂಡ ಧರ್ಮದ ಹೆಸರಿನಲ್ಲೇ ಓಟು ಪಡೆಯುವ ಯತ್ನ ನಡೆಸಿತ್ತು. ಅದರೊಂದಿಗೆ ಆಪರೇಷನ್ ಕಮಲ. 3 ಮಂದಿ ಶಾಸಕರು ಸೇರಿ 148 ಮಂದಿ ತೃಣಮೂಲ ಕಾಂಗ್ರೆಸ್ ಮುಖಂಡರು ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸೇರಿದ್ದರು. ಅಂದರೆ ಕಳೆದ ನಾಲ್ಕೆೃದು ವರ್ಷಗಳಿಂದಲೇ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಿದ್ಧತೆಯನ್ನು ಬಿಜೆಪಿ ಮಾಡಿಕೊಂಡಿತ್ತು. ಆದರೆ, ಅಂತಿಮವಾಗಿ ಯಾವ ತಂತ್ರಗಳೂ ಫಲಿಸಲಿಲ್ಲ. ಇಡೀ ದೇಶದ ರಾಜಕೀಯಕ್ಕೆ ಹೊಸ ದಿಕ್ಕು ತೋರಿಸಬಲ್ಲ ಫಲಿತಾಂಶವನ್ನು ಪಶ್ಚಿಮಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಜನತೆ ನೀಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಪಂಚರಾಜ್ಯಗಳ ವಿಧಾನಸಭಾ ಚುನವಣಾ ಫಲಿತಾಂಶ ಪ್ರತಿಪಕ್ಷಗಳಿಗೆ ಆಕ್ಸಿಜನ್ ನೀಡಿದಂತಾಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ನರೇಂದ್ರ ಮೋದಿ–ಅಮಿತ್ ಶಾ ಜೋಡಿ ಎದುರಿಸದ ಬಹುದೊಡ್ಡ ಚುನಾವಣಾ ಹಿನ್ನಡೆ ಇದಾಗಿದೆ. ಒಂದೆಡೆ ಮೋದಿ ಅಲೆಯೂ ಮಾಯವಾಗುತ್ತಿದೆ, ಇನ್ನೊಂದೆಡೆ ಅಮಿತ್ ಶಾ ಚಾಣಾಕ್ಷ ತಂತ್ರಗಾರಿಕೆ ಕೂಡ ಫಲ ನೀಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ರಾಜ್ಯಗಳ ಪ್ರಾದೇಶಿಕ ಅಸ್ಮಿತೆ, ಸರಿಯಾದ ಚುನಾವಣಾ ಪ್ರತಿತಂತ್ರ, ಪ್ರಾಮಾಣಿಕ ಪರಿಶ್ರಮ, ಪಕ್ಷದ ಸಂಘಟನಾ ಬಲದಿಂದ ಚುನಾವಣೆ ಗೆಲ್ಲಲು ಸಾಧ್ಯ ಎಂಬುದನ್ನು ಈ ಬಾರಿಯ ಪಂಚರಾಜ್ಯ ಫಲಿತಾಂಶ ತೋರಿಸಿದೆ. ಬಂಗಾಳ ಮತ್ತು ಕೇರಳದಲ್ಲಿ ಆಡಳಿತ ಪಕ್ಷಗಳ ಸಂಘಟನಾ ಸಾಮರ್ಥ್ಯ ಮತ್ತು ಪ್ರಾದೇಶಿಕ ಅಸ್ಮಿತೆ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಶಕ್ತಿ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಸೋಲಿಸಿಯೇ ತೀರುತ್ತೇವೆ, ಬಂಗಾಳದ ಅಧಿಕಾರ ಹಿಡಿಯುತ್ತೇವೆ ಎಂಬ ಧೋರಣೆಗೆ ಸೋಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗಹ ಸಚಿವ ಅಮಿತ್ ಶಾ ಅವರ ಚುನಾವಣಾ ತಂತ್ರಗಾರಿಕೆ, ಮಾರ್ಕೆಟಿಂಗ್ ಗಿಮಿಕ್, ದ್ವೇಷ ರಾಜಕಾರಣ ಎಲ್ಲ ಕಾಲಕ್ಕೂ ನಡೆಯುವುದಿಲ್ಲ ಎಂಬುದು ಸಾಬೀತಾಗಿದೆ. ಮೊದಲಾಗಿ ಕೊರೊನಾ ಸೋಂಕು ಬಿಜೆಪಿಯನ್ನು ಸೋಲಿಸಿದರೇ ಎರಡನೇಯದಾಗಿ ಅವರ ಚುನಾವಣಾ ತಂತ್ರಗಾರಿಕೆಯೇ ಅವರಿಗೆ ಮುಳುವಾಯಿತು.
2017ರಿಂದಲೇ ಆಪರೇಷನ್ ಕಮಲ ಮೂಲಕ ಆಡಳಿತರೂಢ ಟಿಎಂಸಿ ಶಾಸಕರನ್ನು, ಮುಖಂಡರನ್ನು ಖರೀದಿಸುವ ಕೆಲಸ ಆರಂಭಿಸಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಲಗೈ ಬಂಟರಂತಿದ್ದ ಮುಕುಲ್ ರಾಯ್, ಸುವೇಂದು ಅಧಿಕಾರಿಯನ್ನು ಸೆಳೆದುಕೊಂಡಿತ್ತು. ಇವರಿಬ್ಬರೊಂದಿಗೆ ಅನೇಕರು ಹಣಕಾಸು ಹಗರಣದಲ್ಲಿ ಸಿಲುಕಿದ್ದ ಭ್ರಷ್ಟ ಮುಖಂಡರು ಬಿಜೆಪಿಗೆ ಬಂದು ಸ್ವಚ್ಛವಾದರು. ವಿಧಾನಸಭಾ ಚುನಾವಣೆ ಘೋಷಣೆ ಆಗುವ ವೇಳೆಗೆ ಮತ್ತಷ್ಟು ಟಿಎಂಸಿ ಶಾಸಕರು ಬಿಜೆಪಿ ಸೇರಿದ್ದರು. ಒಟ್ಟು 37 ಶಾಸಕರಲ್ಲಿ 13 ಮಂದಿ ಶಾಸಕರು ಸೇರಿದಂತೆ 148 ಮಂದಿ ಪಕ್ಷಾಂತರಿಗಳಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಗೆದ್ದದ್ದು ಆರು ಮಂದಿ (ಶೇ.4) ಮಾತ್ರ.
ಕೇವಲ ಟಿಕೆಟ್ ಕೊಟ್ಟಿರುವುದು ಮಾತ್ರವಲ್ಲದೆ ಹೆಚ್ಚಿನ ಮಹತ್ವ ಈ ಪಕ್ಷಾಂತರಿಗಳಿಗೆ ನೀಡಲಾಗಿತ್ತು. ಇದರಿಂದ ಸಹಜವಾಗಿ ಮೂಲ ಬಿಜೆಪಿ ಕಾರ್ಯಕರ್ತರಿಗೆ ಇರಿಸುಮುರುಸು ಉಂಟಾಗಿತ್ತು. ಚುನಾವಣಾ ತಂತ್ರಗಾರಿಕೆಯನ್ನು ಇದೇ ಪಕ್ಷಾಂತರಿಗಳ ಮೂಲಕ ಮಾಡುವಾಗ ಮೂಲ ಬಿಜೆಪಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿರಲಿಲ್ಲ. ಹೇಗಾದರೂ ಗೆಲ್ಲಬೇಕೆಂದಿದ್ದ ಬಿಜೆಪಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಸಹಿತ ಐದು ಮಂದಿ ಎಂಪಿಗಳನ್ನು ಕಣಕ್ಕಿಳಿಸಿತ್ತು. ಕೇಂದ್ರ ಸಚಿವ ವಿಧಾನಸಭಾ ಚುನಾವಣೆಯಲ್ಲಿ 50 ಸಾವಿರ ಮತಗಳಿಂದ ಸೋತರೆ ಗೆದ್ದದ್ದು ಇಬ್ಬರು ಮಾತ್ರ.
ತಮಿಳುನಾಡು ರಾಜ್ಯದಲ್ಲಿ ಎಂ.ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತು ಬಂಗಾಳದಲ್ಲಿ ದೀದಿ ಅಧಿಕಾರಕ್ಕೆ ಬರುವಲ್ಲಿ ಐ-ಪ್ಯಾಕ್ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಾರಿಕೆ ಕೂಡ ಇದೆ. ಪ್ರಶಾಂತ್ ಕಿಶೋರ್ ಇವೆರಡು ರಾಜ್ಯಗಳ ಗೆಲುವಿನೊಂದಿಗೆ ಅಮಿತ್ ಶಾಗೆ ಪ್ರತ್ಯುತ್ತರ ನೀಡಿದಂತಾಗಿದೆ. ಈ ಹಿಂದೆ ಗುಜರಾತ್ ಚುನಾವಣೆಯಲ್ಲಿ ಅನಂತರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಕೆಲಸ ಮಾಡಿದ್ದ ಕಿಶೋರ್ ಅನಂತರ ಶಾ ಕಾರಣಕ್ಕಾಗಿ ಹೊರಬಂದಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಬಹು ಸಂವಹನ ಮಾಧ್ಯಮಗಳು ಚುನಾವಣೆಯ ಮೇಲೆ ಪರಿಣಾಮ ಬೀರುವುದರಿಂದ ರಾಜಕೀಯ ಪಕ್ಷವೊಂದಕ್ಕೆ ಇಂತಹ ಚುನಾವಣಾ ತಂತ್ರಗಾರಿಕಾ ಸಂಸ್ಥೆಗಳ ಸಹಕಾರದ ಅನಿವಾರ್ಯತೆ ಉಂಟಾಗಿದೆ.
2019ರಲ್ಲಿ ಬಂಗಾಳದಲ್ಲಿ ಕೆಲಸ ಆರಂಭಿಸಿದ ಐ-ಪ್ಯಾಕ್ ಟಿಎಂಸಿ ಸರಕಾರದ ಕಾರ್ಯಕ್ರಮಗಳನ್ನು ಜನಪ್ರಿಯತೆಯನ್ನು ಗೆಲ್ಲಿಸಲು ಸಹಕರಿಸಿದ್ದರು. ಬಂಗಾಳದಲ್ಲಿ ಟಿಎಂಸಿಯ ಸಂಘಟನೆ ಬೂತ್ ಮಟ್ಟದಿಂದಲೇ ಸದಢವಾಗಿದೆ. ಇದು ಕಿಶೋರ್ ಕೆಲಸವನ್ನು ಸುಲಭ ಮಾಡಿತ್ತು. ಆದರೆ, ಆಪರೇಷನ್ ಕಮಲ, ಬಾಂಬ್ ಸ್ಫೋಟ, ಅರೆ ಸೇನಾ ಪಡೆಗಳ ಮೇಲೆ ದಾಳಿ, ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇತ್ಯಾದಿ ಬಿಜೆಪಿಯ ಕುತಂತ್ರಗಳನ್ನು ಶಕ್ತವಾಗಿ ಎದುರಿಸಲು ಅಷ್ಟೇ ಶಕ್ತವಾದ ಥಿಂಕ್ ಟ್ಯಾಂಕ್, ಮಾಧ್ಯಮ ಸಂಪರ್ಕ ಮತ್ತು ಸೋಶಿಯಲ್ ಮೀಡಿಯಾ ನಿರ್ವಹಣೆ ಅಗತ್ಯವಾಗುತ್ತದೆ.
ಮಮತಾ ಬ್ಯಾನರ್ಜಿ ಕಾಲಿಗೆ ಏಟು ಬಿದ್ದು ಬ್ಯಾಂಡೇಜ್ ಹಾಕಿದ ಅನಂತರ ‘ಖೇಲ್ ಹೊಬೆ’ ಅರ್ಥಾತ್ ಆಟ ಆರಂಭವಾಗಿದ್ದು. ಈ ಘಟನೆಯ ಅನಂತರ ಬಿಜೆಪಿಯ ಪ್ರಾದೇಶಿಕ ಮುಖಂಡರ ಉತ್ಸಾಹ ಇಳಿದುಹೋಗಿತ್ತು. ದೀದಿಗೆ ಅನುಕಂಪ ಅಲೆ ದೊರೆಯತೊಡಗಿತ್ತು. ಕೊನೆಗೆ ಕೊರೊನಾ ಸೋಂಕಿನ ನಡುವೆಯೂ ಎಂಟು ಹಂತಗಳ ಚುನಾವಣಾ ಆಯೋಗದ ಮತದಾನ ಬಿಜೆಪಿಯ ಸೋಲನ್ನು ಖಾತ್ರಿ ಮಾಡಿತ್ತು. ಕೊನೆಗೂ, ಮುಸ್ಲಿಮ್ ಮತಗಳನ್ನು ಒಡೆಯಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಹಿಂದೂ ಮತಗಳ ಧ್ರುವೀಕರಣವೂ ಆಗಲಿಲ್ಲ. ದಲಿತರು, ಮೇಲ್ಜಾತಿಯವರು ಕೂಡ ಬಿಜೆಪಿಯ ಪರವಾಗಿ ನಿಲ್ಲಲಿಲ್ಲ. ಕಾಂಗ್ರೆಸ್, ಎಡಪಕ್ಷಗಳು ಮಾತ್ರವಲ್ಲದೆ ಮುಸ್ಲಿಮ್ ಮುಖಂಡರ ಪಕ್ಷಗಳು ಕೂಡ ಮುಸ್ಲಿಮ್ ಮತಗಳನ್ನು ಒಡೆಯುವಲ್ಲಿ ವಿಫಲವಾದವು. ದೀದಿಯನ್ನು ವಿರೋಧಿಸಿ ಕಮ್ಯುನಿಸ್ಟರು ಬಿಜೆಪಿಗೆ ಮತ ಹಾಕಿ ಸರ್ವ ನಾಶವಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 34 ವರ್ಷಗಳ ಕಾಲ ಆಡಳಿತ ನಡೆಸಿದ ಪಕ್ಷ ಹೇಳಹೆಸರಿಲ್ಲದಂತಾಗಿದೆ. ತೃಣಮೂಲ ಕಾಂಗ್ರೆಸ್ಸಿನ ಹುಟ್ಟಿಗೆ ಕಾರಣವಾದ ಮೂಲಕಾಂಗ್ರೆಸ್ ಕೂಡ ನಾಮಾವಶೇಷವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ಭಾರತೀಯ ಜನತಾ ಪಾರ್ಟಿಯ ಅಂಗಸಂಸ್ಥೆಯಾಗಿ ಕೆಲಸ ಮಾಡಿದೆ ಎಂದು ಮಮತಾ ಬ್ಯಾನರ್ಜಿಯವರ ಚುನಾವಣಾ ಸೂತ್ರದಾರ ಪ್ರಶಾಂತ್ ಕಿಶೋರ್ ಆರೋಪ ಮಾಡಿದ್ದಾರೆ. ಮೇಲ್ನೋಟಕ್ಕೆ ಇಂತಹ ಆರೋಪದಲ್ಲಿ ವಾಸ್ತವಾಂಶವಿದೆ. ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳ ಮತದಾನ ನಡೆಸಲಾಗಿದೆ. ಬಿಜೆಪಿ ಪರವಾಗಿ ಇರುವ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲೇ ಮತದಾನ ನಿಗದಿ ಮಾಡಲಾಗಿತ್ತು. ಟಿಎಂಸಿ ಪ್ರಭಾವದ ಪ್ರದೇಶಗಳಲ್ಲಿ ಕೊನೆಯ ಹಂತಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಒಂದು ಜಿಲ್ಲೆಯಲ್ಲಿ ನಾಲ್ಕು ಹಂತದ ಚುನಾವಣೆ ನಡೆದಿತ್ತು. ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಬಾವುಟ, ಚಿಹ್ನೆಗಳಿಗಿಂತಲೂ ಹೆಚ್ಚಾಗಿ ಧರ್ಮದ ಬಾವುಟ ,ಚಿಹ್ನೆ, ಘೋಷಣೆಗಳ ಹಾರಾಟ ಹೆಚ್ಚಾಗಿತ್ತು. ಬಿಜೆಪಿಯ ಚುನಾವಣಾ ನಿಯಮಗಳ ಉಲ್ಲಂಘನೆಯ ಹೊರತಾಗಿಯೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇವೆಲ್ಲದರ ಹೊರತಾಗಿಯೂ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಬದಲಾಗುತ್ತಿರುವ ದೇಶದ ರಾಜಕೀಯ ಚಿತ್ರಣದ ಸುಳಿವು.
ಇದೇ ರೀತಿಯಲ್ಲಿ ತಮಿಳುನಾಡಿನಲ್ಲಿ ಗಮನಾರ್ಹ ಮುನ್ನಡೆ ಪಡೆಯಲು ಭಾರತೀಯ ಜನತಾ ಪಾರ್ಟಿಗೆ ಸಾಧ್ಯವಾಗಲಿಲ್ಲ. ಇದೇ ಮೊದಲ ಬಾರಿಗೆ ಮೂರು ಮಂದಿ ಶಾಸಕರನ್ನು ಮಾತ್ರ ಬಿಜೆಪಿ ಗೆದ್ದುಕೊಂಡಿದೆ. ಹತ್ತು ವರ್ಷಗಳಿಂದ ಅಧಿಕಾರದಲ್ಲಿ ಇರುವ ಅಣ್ಣಾ ಡಿಎಂಕೆ ಪಕ್ಷವು ಬಿಜೆಪಿ ಸಖ್ಯ ಮಾಡಿದ ಪರಿಣಾಮ ತಮಿಳುನಾಡಿನಲ್ಲಿ ಅಧಿಕಾರ ಕಳಕೊಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮಾಜಿ ದಿವಂಗತ ಮುತ್ತುವೆಲ್ ಕರುಣಾನಿಧಿ ಸುಪುತ್ರ ಸ್ಟಾಲಿನ್ ತಮಿಳುನಾಡಿನ ಹೊಸ ಮುಖ್ಯಮಂತ್ರಿ ಆಗಿದ್ದಾರೆ. ಅಣ್ಣಾಡಿಎಂಕೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿರುವುದು ಸ್ಟಾಲಿನ್ ನೇತೃತ್ವದ ಮೈತ್ರಿ ಕೂಟಕ್ಕೆ ಹೆಚ್ಚಿನ ಪ್ರಯೋಜನ ಆಗಿದೆ ಎಂಬುದು ವಾಸ್ತವ ಆಗಿರಬಹುದು.
ತಮಿಳುನಾಡು ಜನತೆ ತಮ್ಮ ದ್ರಾವಿಡ ಅಸ್ಮಿತೆಯನ್ನು ಬಿಟ್ಟುಕೊಡುವವರಲ್ಲ. ಅಲ್ಲಿನ ಮತದಾರರು ವಿರೋಧಿಸುವ ಎರಡು ವಿಚಾರದಲ್ಲಿ ಒಂದು ಹಿಂದಿ ಭಾಷೆಯಾದರೆ ಇನ್ನೊಂದು ನರೇಂದ್ರ ಮೋದಿ. ಚುನಾವಣೆ ನಡೆಯುತ್ತಿರುವ ಹಂತಗಳಲ್ಲೇ ತಮಿಳುನಾಡು ರಾಜ್ಯದಲ್ಲಿ ರಾಜಕೀಯ ನಡೆಸುವ ಆಸೆಯನ್ನು ಬಿಜೆಪಿ ಕೈಬಿಟ್ಟಿತ್ತು. ಪಶ್ಚಿಮ ಬಂಗಾಳ ರಾಜ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಕೊರೊನೊ ಸೋಂಕಿನ ಅಪಾಯದ ನಡುವೆ ಕೂಡ ದೇಶದ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಹಲವಾರು ಚುನಾವಣಾ ಸಮಾವೇಶಗಳನ್ನು ನಡೆಸಿದರು
ತಮಿಳುನಾಡು ಮತ್ತು ಕೇರಳದ ಜನತೆ ನಖಶಿಖಾಂತವಾಗಿ ಭಾರತೀಯ ಜನತಾ ಪಾರ್ಟಿಯ ದ್ವೇಷ ಮತ್ತು ಧರ್ಮ ಆಧಾರಿತ ರಾಜಕೀಯವನ್ನು ವಿರೋಧಿಸಿದ್ದಾರೆ. ಇಂತಹ ರಾಜಕೀಯ ಸಿದ್ಧಾಂತಕ್ಕೆ ಪಶ್ಚಿಮ ಬಂಗಾಳದ ಕೂಡ ವಿರೋಧ ವ್ಯಕ್ತಪಡಿಸಿದೆ. ಪಶ್ಚಿಮ ಬಂಗಾಳದಲ್ಲಿ ಹೆಸರಿನಲ್ಲೇ ಚುನಾವಣೆ ನಡೆಸಲಾಗಿತ್ತು. ಫಲಿತಾಂಶ ಹೊರಬಿದ್ದಾಗ ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಸೋಲಾಗಿದೆ. ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಪಾರ್ಟಿ ಹಿಂದಿಕ್ಕಿಂತಲೂ ಹೆಚ್ಚಿನ ಸ್ಥಾನ ಮತ್ತು ಜನಬೆಂಬಲದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದೆ.
ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸುವಲ್ಲಿ ದೇಶಾದ್ಯಂತ ನಡೆಯುತ್ತಿರುವ ರೈತ ಚಳವಳಿ ಕೂಡ ತನ್ನದೇ ಆದ ಕೊಡುಗೆ ನೀಡಿದೆ. ರೈತ ಮುಖಂಡರು ಬಂಗಾಳಕ್ಕೆ ಹೋಗಿ ಬಿಜೆಪಿಯನ್ನು ಸೋಲಿಸುವಂತೆ ಕರೆ ನೀಡಿದ್ದರು.
ಕೇರಳ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಒಂದು ಸೀಟು ಕೂಡ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಉಲ್ಲೇಖನೀಯ. ಐದು ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಕನಿಷ್ಠ ಮೂರು ಕಡೆ ಗೆಲ್ಲುವ ನಿರೀಕ್ಷೆ ಹೊಂದಿತ್ತು. ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್, ಮೆಟ್ರೋಮ್ಯಾನ್ ಇ.ಶ್ರೀಧರನ್, ಕೊನೆಗೆ ಸಿನಿಮಾ ನಟ ಸುರೇಶ್ ಗೋಪಿ ಕೂಡ ಗೆಲ್ಲಲು ವಿಫಲರಾದರು. ಎರಡು ಕಡೆ ಸ್ಪರ್ಧಿಸಿದ್ದ ಸುರೇಂದ್ರನ್ ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರ್ ಉಪಯೋಗ ಮಾಡಿದ್ದು ಕೂಡ ಸೋಲಲು ಒಂದು ಕಾರಣ ಎಂದು ಹೇಳಲಾಗುತ್ತಿದೆ.
ಕೇರಳದಲ್ಲಿ ಅಂತಿಮವಾಗಿ ಉತ್ತಮ ಆಡಳಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದೆ ಎಂಬುದು ಸ್ಪಷ್ಟವಾಗಿದೆ. ಕೇರಳದಲ್ಲಿ 2017ರಲ್ಲಿ ಸೈಕ್ಲೋನ್, 2018ರಲ್ಲಿ ನಿಫಾ ವೈರಸ್ ಹಾಗೂ ಪ್ರವಾಹ, 2019ರಲ್ಲಿ ಮತ್ತೊಮ್ಮೆ ಪ್ರವಾಹ ಮತ್ತು ಕಳೆದೆರಡು ವರ್ಷಗಳಲ್ಲಿ ಕೊರೊನಾ ವಿಪತ್ತುಗಳನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ ಆಡಳಿತಕ್ಕಾಗಿ ಜನರು ಎಡರಂಗ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ.
ಕೊರೊನಾ ಸಂದರ್ಭದಲ್ಲಿ ನಿರಂತರವಾಗಿ ಜನರಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ಸರಕಾರದ ವತಿಯಿಂದ ನೀಡಲಾಯಿತು. ಈಗಲೂ ಅದು ಮುಂದುವರಿಯುತ್ತಿದೆ. ಉತ್ತಮ ಆಡಳಿತ ಕಾರಣಕ್ಕಾಗಿಯೇ ಎಡರಂಗ ಈ ಬಾರಿ 120ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇತ್ತು. ಆದರೆ, ಸಂಘಪರಿವಾರದ ಶೇಕಡವಾರು 2ರಷ್ಟು ಮತಗಳು ಕಾಂಗ್ರೆಸ್ ನೇತೃತ್ವದ ಐಕ್ಯ ರಂಗದ ಪಾಲಾದ ಕಾರಣ ಎಡರಂಗದ ಸ್ಥಾನಗಳ ಸಂಖ್ಯೆ ನೂರರ ಗಡಿ ದಾಟಲು ಸಾಧ್ಯಆಗಿಲ್ಲ. ಕೇರಳದಲ್ಲಿ ಬಿಜೆಪಿಯ ಮತ ಗಳಿಕೆ ಪ್ರಮಾಣ ಕಡಿಮೆಯಾಗಿದ್ದು, ಶೇಕಡ 15ರಿಂದ 13ಕ್ಕೆ ಇಳಿಕೆಯಾಗಿದೆ.
ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಬಿಜೆಪಿಗಿಂತಲೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಘಟನೆಗಳು ತಮಿಳುನಾಡಿಗಿಂತಲೂ ಹೆಚ್ಚು ಸಕ್ರಿಯವಾಗಿವೆ. ಕೇರಳದಲ್ಲಿ ಅತೀ ಹೆಚ್ಚು ಶಾಖೆಗಳನ್ನು ಹೊಂದಿರುವ ಆರೆಸ್ಸೆಸ್ ಧಾರ್ಮಿಕ ಕೇಂದ್ರಗಳ ಮೂಲಕ ಹಿಂದೂ ಮತಗಳ ಧ್ರುವೀಕರಣಕ್ಕೆ ಹರ ಸಾಹಸ ಮಾಡುತ್ತಲೇ ಇದೆ. ಶಬರಿಮಲೆ ವಿವಾದ ಕೂಡ ಬಿಜೆಪಿ ಸಹಾಯ ಮಾಡಲಿಲ್ಲ. ಬಂಗಾಳದಲ್ಲಿ 2009ರಿಂದ ಲೋಕಸಭಾ ಚುನಾವಣೆಯಲ್ಲಿ ಎಡರಂಗ ಪತನಗೊಂಡ ಅನಂತರ ತನ್ನ ಸಂಘಟನಾ ಕಾರ್ಯವನ್ನು ವಿಸ್ತರಿಸಿದೆ. ಬಂಗಾಳದಲ್ಲಿ ಬಿಜೆಪಿಗಿಂತಲೂ ಹೆಚ್ಚು ಸಂಘಟನಾತ್ಮಕ ವ್ಯಾಪ್ತಿ ಹೊಂದಿರುವ ಪರಿವಾರದ ಸಂಘಟನೆಗಳು, ಅಮಿತ್ ಶಾ ನಡೆಸಿದ ಆಪರೇಷನ್ ಕಮಲದಿಂದಾಗಿ ಸಂಘಟನೆ ಕೆಲಸ ಕೂಡ ಹೆಚ್ಚಿನ ಪರಿಣಾಮ ಬೀರಲಿಲ್ಲ. ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು ನೀಡಿದ ಮತಗಳಿಂದ 77 ಸ್ಥಾನಗಳನ್ನು ಬಿಜೆಪಿಗೆ ಗೆಲ್ಲಲು ಸಾಧ್ಯವಾಯಿತು.
ದೇಶದ ಜನತೆ ಕೇಂದ್ರ ಸರಕಾರ ಜನವಿರೋಧಿ ಆಡಳಿತ, ಭಾರತೀಯ ಜನತಾ ಪಾರ್ಟಿಯ ದ್ವೇಷದ ರಾಜಕಾರಣಕ್ಕೆ ವಿರೋಧ ಹೊಂದಿರುವುದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ವ್ಯಕ್ತವಾಗುತ್ತದೆ. ತಮಿಳುನಾಡು, ಪುದುಚೇರಿ, ಅಸ್ಸಾಂ ಮತ್ತು ಕೇರಳ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣಾ ಫಲಿತಾಂಶ ಎರಡೂ ರಾಜಕೀಯ ಪಕ್ಷಗಳಾದ ಭಾರತೀಯ ಜನತಾ ಪಾರ್ಟಿ ಮತ್ತು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಗೆಲ್ಲಲು ಅವಕಾಶವಿದ್ದ ಅಸ್ಸಾಂ, ಪುದುಚೇರಿ ಮತ್ತು ಕೇರಳ ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ. ಅದೇ ರೀತಿ ದೇಶದ ಜನರ ಪ್ರಾಣ ಪಣಕ್ಕಿಟ್ಟು ಚುನಾವಣಾ ಪ್ರಚಾರ ನಡೆಸಿದ ಬಿಜೆಪಿಗೆ ಹೇಳಿಕೊಳ್ಳುವಂತಹ ಪ್ರಯೋಜನ ಆಗಿಲ್ಲ. ಅಸ್ಸಾಂ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಂಡು ಪುದುಚೇರಿಯಲ್ಲಿ ಸರಕಾರದ ಭಾಗವಾಗಲಿದೆ.
ಅಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದ ಅಧಃಪತನ ಮತ್ತು ಪಕ್ಷದ ಸಂಘಟನಾತ್ಮಕ ಕೊರತೆ ಬಿಜೆಪಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸಿದೆ. ಚುನಾವಣೆಗೆ ಮುನ್ನ ಅಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ ಜಿದ್ದಾಜಿದ್ದಿನ ಹೋರಾಟ ನೀಡಬಹುದು ಎಂಬ ನಿರೀಕ್ಷೆ ಇತ್ತು. ಅದು ಸಾಧ್ಯವಾಗದಿರುವುದಕ್ಕೆ ಕಾಂಗ್ರೆಸ್ ನಾಯಕತ್ವ ಕಾರಣವಾಗಿದೆ.
ಅದೇ ರೀತಿ ಪುದುಚೇರಿಯಂತಹ ಸಣ್ಣ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎನ್ ಡಿಎ ಅಧಿಕಾರಕ್ಕೆ ಬಂದಿದೆ. ಚುನಾವಣೆಗೆ ಪೂರ್ವಬಾವಿಯಾಗಿಯೇ ಪುದುಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಪತನ ಮಾಡಲಾಗಿತ್ತು.
ಇಲ್ಲೂ ಕೂಡ ಕಾಂಗ್ರೆಸ್ ನಾಯಕತ್ವದ ವೈಫಲ್ಯ, ದೂರದೃಷ್ಟಿಯ ಕೊರತೆ, ರಾಜಕೀಯ ಅಪ್ರಬುದ್ಧತೆ ಕಾಂಗ್ರೆಸ್ ಹಿನ್ನಡೆಗೆ ಕಾರಣವಾಗಿದೆ ಕರ್ನಾಟಕ, ಗೋವಾ, ಮಧ್ಯಪ್ರದೇಶ, ರಾಜಸ್ತಾನ ರಾಜ್ಯಗಳಲ್ಲಿ ಅಧಿಕಾರ ಬಂದಿದ್ದರೂ ಕಾಂಗ್ರೆಸ್ ಪಕ್ಷದ ಅವಸ್ಥೆ ನೋಡಿದಾಗ ದೇಶದಲ್ಲಿ ಪ್ರಬಲ ಪ್ರತಿಪಕ್ಷ ಎಂಬುದು ದೂರದ ಕನಸಾಗಿತ್ತು. ಇಂತಹ ಸಂದರ್ಭದಲ್ಲಿ ಪಂಚ ರಾಜ್ಯಗಳ ಚುನಾವಣೆ ಪ್ರತಿಪಕ್ಷಗಳಿಗೆ ಹೊಸ ನಿರೀಕ್ಷೆಯನ್ನು ಮೂಡಿಸಿದೆ. ಕಾಂಗ್ರೆಸ್ಸಿನಂತಹ ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷಗಳ ತಂಟೆಗೆ ಹೋಗದೆ ಇದ್ದರೆ ರಾಷ್ಟ್ರೀಯವಾಗಿ ಶಕ್ತ ಪ್ರತಿಪಕ್ಷವನ್ನು ಜೋಡಿಸಲು ಸಾಧ್ಯವಿದೆ. ಕೇರಳದಲ್ಲಿ ಎರಡರಂಗ, ತಮಿಳುನಾಡಿನ ಡಿಎಂಕೆ, ಪಶ್ಚಿಮ ಬಂಗಾಳದ ಮಮತಾ ದೀದಿಯೊಂದಿಗೆ ಪ್ರಾದೇಶಿಕ ಪ್ರಭಾವ ಹೊಂದಿರುವ ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಉತ್ತರಪ್ರದೇಶ, ಜಮ್ಮು ಕಾಶ್ಮೀರ ಮುಂತಾದ ರಾಜ್ಯಗಳ ನಾಯಕರು ಸ್ವತಂತ್ರ ರಾಜಕೀಯ ವೇದಿಕೆಯೊಂದನ್ನು ರೂಪಿಸಿಕೊಳ್ಳಬೇಕಾಗಿದೆ.
ಚುನಾವಣಾ ದೃಷ್ಟಿಯಿಂದ ಅಲ್ಲದಿದ್ದರೂ ಪ್ರಾದೇಶಿಕ ಅಭಿವೃದ್ಧಿ, ನೀತಿ ನಿರೂಪಣೆ, ಅನುದಾನ ಇತ್ಯಾದಿಗಳಿಗೆ ಶಕ್ತಿಶಾಲಿ ಪರ್ಯಾಯ ರಾಜಕೀಯ ವೇದಿಕೆ ರೂಪಿಸಲು ಸಾಧ್ಯವಿದೆ. ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಬಹುತೇಕ ಈ ರಾಜ್ಯಗಳ ಮುಖಂಡರಾದ ನವೀನ್ ಪಟ್ನಾಯಕ್, ಚಂದ್ರಶೇಖರ್, ಜಗನ್ ಮೋಹನ್ ರೆಡ್ಡಿ ಮುಂತಾದವರು ನರೇಂದ್ರ ಮೋದಿಯೊಂದಿಗೆ ಸಾಕಷ್ಟು ಅಂತರ ಕಾಯ್ದುಕೊಂಡರೂ ರಾಜಕೀಯ ಭೀತಿಯಿಂದ ಸಖ್ಯದಲ್ಲಿ ಇದ್ದಾರೆ. ಈಗ ಅಂತಹ ರಾಜಕೀಯ ಅಪಾಯವನ್ನು ಎದುರಿಸಬಹುದು ಎಂಬುದನ್ನು ಈ ರಾಜ್ಯಗಳ ಮುಖಂಡರು ತೋರಿಸಿಕೊಟ್ಟಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಸೋಲಿಸುವಲ್ಲಿ ಬಿಜೆಪಿ ಸಿದ್ಧಹಸ್ತವಾಗಿದೆ. ಆದರೆ, ಪ್ರಾದೇಶಿಕ ಪಕ್ಷಗಳನ್ನು ಸೋಲಿಸಲು ಬಿಜೆಪಿಗೆ ಸಾಧ್ಯ ಆಗುತ್ತಿಲ್ಲ.
ಇದು ಬಿಜೆಪಿಯ ಬಹುದೊಡ್ಡ ಕೊರತೆ. ಮುಂದಿನ ಮಾರ್ಚ್ ನಲ್ಲಿ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ಹಾಗೂ 2022ರಲ್ಲಿ ಗುಜರಾತ್ ಮತ್ತು ಹಿಮಾಚಲ ರಾಜ್ಯಗಳ ವಿಧಾನಸಭಾ ಚುನಾವಣೆ ಇದೆ. ಪಂಜಾಬ್ ಹೊರತು ಪಡಿಸಿ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇದೆ. ಮುಂಬರುವ ಚುನಾವಣೆಗಳಲ್ಲಿ ಅಮಿತ್ ಶಾ ನರೇಂದ್ರ ಮೋದಿ ಚುನಾವಣಾ ತಂತ್ರಗಾರಿಕೆ ಮಾತ್ರ ಬದಲಾಗುವುದೊ, ಅಥವಾ ವಿಕಾಸ ಪುರುಷ ಪ್ರತ್ಯಕ್ಷ ಆಗಬಹುದೇ ಎಂಬುದನ್ನು ಕಾದುನೋಡಬೇಕಾಗಿದೆ.