ಸುಭಾಸ್ ಚಂದ್ರ ಬೋಸ್ ಅವರನ್ನು ಕಾಂಗ್ರೆಸ್ ಹತ್ಯೆ ಮಾಡಿಸಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದ ಉನ್ನಾವೊದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸುಭಾಸ್ ಚಂದ್ರ ಬೋಸ್ ಅವರನ್ನು ಕೊಲ್ಲಿಸಿದೆ ಎಂಬುದು ನನ್ನ ಆರೋಪ, ಮಹಾತ್ಮ ಗಾಂಧೀಜಿಯಾಗಲಿ ಅಥವಾ ಪಂಡಿತ್ ನೆಹರೂ ಆಗಲಿ ಸುಭಾಷ್ ಚಂದ್ರ ಅವರ ಜನಪ್ರಿಯತೆಯ ಮುಂದೆ ಏನೂ ಅಲ್ಲ ಎಂದು ಹೇಳಿದರು.
ಬೋಸ್ ಅವರ 125 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜರು ಈ ಹೇಳಿಕೆ ನೀಡಿದ್ದಾರೆ.
ಜನವರಿ 23, 1897 ರಂದು ಒಡಿಶಾದ ಕಟಕ್ ನಲ್ಲಿ ವಕೀಲ ಜಾನಕಿನಾಥ್ ಬೋಸ್ ಅವರ ಪುತ್ರನಾಗಿ ಜನಿಸಿದ ನೇತಾಜಿ ಬೋಷ್ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆಜಾದ್ ಹಿಂದ್ ಫೌಜ್ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದ ಅವರು ಆಗಸ್ಟ್ 18, 1945 ರಂದು ತೈಪೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿನ ಬಗ್ಗೆ ವಿವಾದವಿದ್ದರೂ, ಕೇಂದ್ರ ಸರ್ಕಾರವು 2017 ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಬೋಸ್ ಅವರು ವಿಮಾನಾಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿತ್ತು.
ಈ ಹಿಂದೆಯೂ ಜನವರಿ 20 ರಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು “ಹುಚ್ಚ” ಎಂದು ಕರೆದು ವಿವಾದ ಎಬ್ಬಿಸಿದ್ದರು.