ನವದೆಹಲಿ : ಕಳೆದ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಜಾಮಿಯಾ ಮಿಲ್ಲಿಯಾ ಆಸಿಫ್ ಇಕ್ಬಾಲ್ ತನ್ಹಾ ಅವರು ನೀಡಿದ್ದೆನ್ನಲಾದ ತಪ್ಪೊಪ್ಪಿಗೆ ಹೇಳಿಕೆಯ ಪ್ರಸಾರ ಮಾಡಿದ್ದಕ್ಕಾಗಿ ದೆಹಲಿ ಹೈಕೋರ್ಟ್ ‘ಜೀ ನ್ಯೂಸ್’ ವಾಹಿನಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. “ನೀವು ತನಿಖಾ ಸಂಸ್ಥೆಯಲ್ಲ’’ ಎಂಬುದನ್ನು ವಾಹಿನಿಗೆ ಹೈಕೋರ್ಟ್ ನೆನಪಿಸಿದೆ.
ತನ್ಹಾರ ತಪ್ಪೊಪ್ಪಿಗೆ ಹೇಳಿಕೆಯ ಮೂಲ ಯಾವುದೆಂದು ಅಫಿಡವಿಟ್ ಸಲ್ಲಿಸುವಂತೆ ಕಳೆದ ವಾರ ಸೂಚಿಸಿದ್ದ ಕೋರ್ಟ್, ತನ್ನ ಮಿತಿ ದಾಟುತ್ತಿರುವ ಸುದ್ದಿ ವಾಹಿನಿಗೆ ಖಡಕ್ ಎಚ್ಚರಿಕೆ ನೀಡಿದೆ. “ಇಂತಹ ಆರೋಪಗಳನ್ನು ಮಾಡಲು ನಿಮ್ಮಲ್ಲಿ ಯಾವುದೇ ಆಧಾರ ಇಲ್ಲ. ನೀವು ತನಿಖಾ ಸಂಸ್ಥೆಯಲ್ಲ. ಅರ್ಜಿದಾರರ ವಿರುದ್ಧ ಯಾವುದೇ ಆರೋಪಗಳನ್ನು ಮಾಡಬೇಡಿ’’ ಎಂದು ಕೋರ್ಟ್ ತಿಳಿಸಿದೆ.
ತನ್ಹಾ ಹೇಳಿಕೆಯನ್ನು ವರದಿ ಮಾಡುವಾಗ ಸುದ್ದಿ ವಾಹಿನಿಯು ವಿವಿಧ ಹಂತದಲ್ಲಿ ತಪ್ಪು ವ್ಯಾಖ್ಯಾನಗಳನ್ನು ನೀಡಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಹೇಳಿಕೆಯು ಸ್ವಲ್ಪ ಸಾಕ್ಷಿಗೆ ಪೂರಕವಾಗಿತ್ತು. ಆದರೆ, ಅದನ್ನು ಸುದ್ದಿ ವಾಹಿನಿಯು ಆ ವ್ಯಕ್ತಿಯನ್ನು ಸಂಪೂರ್ಣವಾಗಿ ಸಿಲುಕಿಸುವ ನಿಟ್ಟಿನಲ್ಲಿ ಬಳಸಿಕೊಳ್ಳಲಾಗಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಮುಂದಿನ ವಿಚಾರಣೆ ಅ.23ಕ್ಕೆ ಮುಂದೂಡಲ್ಪಟ್ಟಿದೆ.
ಅಪರಾಧ ದಂಡ ಸಂಹಿತೆಯ ಕಲಂ 161ರ ಪ್ರಕಾರ, ಪೊಲೀಸ್ ಕಸ್ಟಡಿಯಲ್ಲಿ ಪಡೆದ ಹೇಳಿಕೆ ಸಾಕ್ಷ್ಯವಾಗಿ ಸ್ವೀಕಾರಾರ್ಹವಾದುದಲ್ಲ. ಆದರೂ, ‘ಜೀ ನ್ಯೂಸ್’ ಪೂರ್ವಾಗ್ರಹ ಪೀಡಿತವಾಗಿ, ವರದಿ ಮಾಡಿದೆ. ಇಂತಹ ತಪ್ಪೊಪ್ಪಿಗೆಗಳನ್ನು ಬಹಿರಂಗ ಪಡಿಸುವಂತಿಲ್ಲ.