ಬೆಂಗಳೂರು: ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದ ಸುರೇಶ್ ಎಂಬವರನ್ನು ಹಾಡ ಹಗಲೇ ಸುತ್ತಿಗೆಯಿಂದ ಹೊಡೆದು ಕೊಲೆಗೈದು ಖಾರದಪುಡಿ ಎರಚಿ ಸುಳಿವು ಸಿಗದಂತೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಹಲಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ದೊಮ್ಮಲೂರು ಲೇಔಟ್ ನ 2ನೇ ಮುಖ್ಯರಸ್ತೆಯ ಮನೆಯಲ್ಲಿ ಒಂಟಿಯಾಗಿದ್ದ ಸುರೇಶ್ ಅಲಿಯಾಸ್ ಜ್ಯೂಡ್ ತೆಡ್ಡಾಸ್ (70) ಅವರನ್ನು ಹಾಡಹಗಲೇ ಕೊಲೆಗೈದು ನಗದು ಚಿನ್ನ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಲು ಮಾಸ್ಟರ್ ಪ್ಲಾನ್ ಮಾಡಿದ್ದ ಮಣಿಪಾಲ್ ಆಸ್ಪತ್ರೆಯ ಕೇರ್ ಟೇಕರ್ ನರ್ಸ್ ಮಾರತ್ ಹಳ್ಳಿಯ ಬಾಬು (24) ಸೇರಿ ಐವರನ್ನು ಬಂಧಿಸಲಾಗಿದೆ.
ಬಾಬು ಜೊತೆ ದೇವೇಂದ್ರ, ಗಜೇಂದ್ರ, ಮುರುಳಿ,ಹಾಗೂ ರಾಜೇಂದ್ರ ನನ್ನು ಬಂಧಿಸಲಾಗಿದ್ದು ಆರೋಪಿಗಳೆಲ್ಲರೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರಾಮಸಮುದ್ರಂಗೆ ಸೇರಿದವರಾಗಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ ಗುಳೇದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಏ.13ರಂದು ಆರೋಪಿಗಳು ದೊಮ್ಮಲೂರು ಲೇಔಟ್ ನ 2ನೇ ಮುಖ್ಯರಸ್ತೆಯ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಸುರೇಶ್ ಅವರನ್ನು ಕೊಲೆಗೈದಿದ್ದರು.
ಕೊಲೆಗೂ ಮುನ್ನ ಬಾಬು ಹಾಕಿಕೊಟ್ಟ ಸಂಚಿನಂತೆ ನಾಲ್ವರು ಕೈಗೆ ಗ್ಲೌಸ್ ಹಾಕಿ ಕೃತ್ಯವೆಸಗಿ ನಂತರ ಕಾರದ ಪುಡಿ ಎರಚಿದ್ದರು.
ತೆಲುಗಿನ ಕೊಲೆ ಪ್ರೇರಿತ ಸಿನಿಮಾಗಳನ್ನು ನೋಡಿ ಪ್ರಮುಖ ಆರೋಪಿ ಬಾಬು ಕೃತ್ಯ ನಡೆಸಲು ಮುಂದಾಗಿದ್ದು ಸುರೇಶ್ ಹೆಂಡತಿ-ಮಕ್ಕಳಿಂದ ದೂರವಾಗಿ ಸುಸ್ಥಿತಿಯ ಜೀವನ ನಡೆಸುತ್ತಿರುವುದನ್ನು ಗಮನಿಸಿ ಹಣ ಚಿನ್ನ ಬೆಲೆಬಾಳುವ ವಸ್ತುಗಳನ್ನು ದೋಚಲು ಕೊಲೆ ಮಾಡಿದ್ದಾರೆ ಎಂದರು.
ಸುರೇಶ್ ಅವರ ತಾಯಿಯು ಅನಾರೋಗ್ಯದಿಂದ ಬಳಲುತ್ತಿದ್ದಾಗ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಬಾಬು ಪರಿಚಯವಾಗಿ ಆಗಾಗ ಸುರೇಶ್ ಮನೆಗೆ ಬಂದು ಹೋಗುತ್ತಿದ್ದ. ಸುರೇಶ ಬಳಿ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಸ್ವಂತ ಮನೆ ಇರುವುದನ್ನು ತಿಳಿದು ಬೆದರಿಸಿ ಹಣ ಸುಲಿಗೆ ಮಾಡಬಹುದು ಎಂದು ಮೊದಲು ಸಂಚು ರೂಪಿಸಿದ್ದ ಬಾಬು ಆಂಧ್ರದಲ್ಲಿದ್ದ ನಾಲ್ವರು ಸ್ನೇಹಿತರನ್ನು ಕರೆಸಿಕೊಂಡು ಈ ಕೃತ್ಯವೆಸಗಿದ್ದಾನೆ.
ಪೂರ್ಯ ಯೋಜನೆಯಂತೆ ನಾಲ್ವರು ಮನೆಗೆ ನುಗ್ಗಿ ಸುರೇಶನ ಕೈಕಾಲು ಕಟ್ಟಿ ಕಬ್ಬಿಣದ ಸಲಾಕೆಯಿಂದ ತಲೆಗೆ ಭಾಗಕ್ಕೆ ಹೊಡೆದು ಹೆದರಿಸಲು ಹೋದಾಗ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದರು.
ಪೊಲೀಸರಿಗೆ, ಶ್ವಾನದಳಕ್ಕೆ ಆರೋಪಿಗಳ ಜಾಡು ಸಿಗಬಾರದೆಂದು ಸುರೇಶನ ಶವದ ಸುತ್ತಮುತ್ತ ಕಾರದಪುಡಿಯನ್ನು ಹಾಕಿ ಆರೋಪಗಳು ಪರಾರಿಯಾಗಿದ್ದರು.
ಆರೋಪಿಗಳಿಂದ ಮೊಬೈಲ್ ಗಳನ್ನು ವಶಪಡಿಸಿಕೊಂಡ ಹಲಸೂರು ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತವರ ಸಿಬ್ಬಂದಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದೆ ಎಂದರು.