ನವದೆಹಲಿ: ದೇಶದಲ್ಲಿ ಕೋಮು ದ್ವೇಷದ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಈ ಬಗ್ಗೆ ಯಾವುದೆ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಪ್ರಧಾನಿಯ ಮೌನವನ್ನು ಪ್ರಶ್ನಿಸಿದ್ದು, ದ್ವೇಷದ ಘಟನೆಗಳನ್ನು ಏಕೆ ಖಂಡಿಸಿಲ್ಲ ಎಂದು ಕೇಳಿದ್ದಾರೆ.
ಬಿಜೆಪಿ ಆಡಳಿತದ 2016-2020ರ ಅವಧಿಯಲ್ಲಿ ಭಾರತದಲ್ಲಿ 3,399 ಕೋಮು ಗಲಭೆ ಪ್ರಕರಣಗಳು ನಡೆದಿವೆ ಎಂದು ಒಕ್ಕೂಟ ಸರ್ಕಾರ ಒಪ್ಪಿಕೊಂಡಿದ್ದು, ಇದೀಗ ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ಕೋಮು ವಿಭಜನೆಗಳು ಹೆಚ್ಚುತ್ತಿದ್ದು, ದೇಶ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಈ ವಿಷಯಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡಿಲ್ಲ. ವಾಸ್ತವದಲ್ಲಿ ಬಿಜೆಪಿ ಪಕ್ಷದ ಪದಾಧಿಕಾರಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳೇ ಈ ಕೋಮುದ್ವೇಷ ಹಾಗೂ ಮುಸ್ಲಿಂ ದ್ವೇಷಗಳಿಗೆ ತುಪ್ಪ ಸುರಿಯುತ್ತಿದ್ದಾರೆ.