ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕನನ್ನು ಯುವತಿಯರು ಥಳಿಸಿದ್ದಾರೆ. ಉತ್ತರಪ್ರದೇಶದ ಜಲಾವ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನುಜ್ ಮಿಶ್ರಾ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಒರಾಯ್ ರೈಲ್ವೇ ನಿಲ್ದಾಣದ ಬಳಿ ಶನಿವಾರ ಈ ಘಟನೆ ನಡೆದಿದೆ. ಅನುಜ್ ಕೆಲವು ದಿನಗಳಿಂದ ಯುವತಿಯರಿಗೆ ಕಿರುಕುಳ ನೀಡಲು ಯತ್ನಿಸುತ್ತಿದ್ದನೆಂದು ಆರೋಪಿಸಲಾಗಿದೆ.
ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡ ಅಜಯ್ ಕುಮಾರ್ ಲಲ್ಲು ಅವರ ಬಳಿ ಅನುಜ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಈ ಹಿಂದೆ ದೂರು ನೀಡಿದ್ದೇವೆಯಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯುವತಿಯರು ಹೇಳಿದ್ದಾರೆ. ಅನುಜ್ ಮಿಶ್ರಾ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಯುವತಿಯರು ದೂರಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಬೇರೆ ದಾರಿ ಇಲ್ಲದ ಕಾರಣ ನಾವು ಅನುಜ್ ನಿಗೆ ಸಾರ್ವಜನಿಕವಾಗಿ ಥಳಿಸಿದ್ದೇವೆ. ಅದಲ್ಲದೆ ನಾವು ಬೇರೆ ಏನು ಮಾಡಬೇಕೆಂದು ಯುವತಿರು ಕೇಳಿದ್ದಾರೆ.
ಆದರೆ ಇದು ಷಡ್ಯಂತ್ರ ಎಂದು ಅನುಜ್ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ. “ಈ ರಾಜಕೀಯ ಷಡ್ಯಂತ್ರದ ಹಿಂದೆ ಏನು ಇದೆ ಎಂದು ತಿಳಿಯುತ್ತಿಲ್ಲ. ಇಬ್ಬರು ಮಹಿಳೆಯರು ಬಂದು ನನ್ನ ಕಾಲರ್ ಹಿಡಿದುಕೊಂಡರು. ಅವರಲ್ಲೊಬ್ಬರು ವೀಡಿಯೋ ಚಿತ್ರೀಕರಿಸುತ್ತಿದ್ದರು ಎಂದು ಮಿಶ್ರಾ ಹೇಳಿದ್ದಾರೆ. ಘಟನೆಯ ಕುರಿತು ನಮಗೆ ಯಾವುದೇ ಮಾಹಿತಿಯಿಲ್ಲ ಎಂದು ಯುಪಿಯ ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ನಂತರ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.