►ಆರೋಗ್ಯ ಸಚಿವ ಸುಧಾಕರ್ ಗೆ ಕರೆ ಮಾಡಿದರೂ ಫೋನ್ ಎತ್ತಿಲ್ಲ!
ಕೊರೋನಾದಿಂದ ರಾಜ್ಯದ ಜನತೆ ತತ್ತರಿಸುತ್ತಿದ್ದು, ಕೊರೋನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಮಧ್ಯೆ ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ತನ್ನ ಅಸಹಾಯಕತೆಯನ್ನು ಹೊರಹಾಕಿದ ಅಬಕಾರಿ ಸಚಿವ ಎಂಟಿಬಿ ನಾಗರಾಜ್, ತಾನೊಬ್ಬ ಮಂತ್ರಿಯಾಗಿ ಒಂದು ಬೆಡ್ ಕೊಡಿಸಲು ಸಾಧ್ಯವಾಗಿಲ್ಲ, ಜನ ಕ್ಯಾಕರಿಸಿ ಉಗಿಯುತ್ತಿದ್ದಾರೆ ಎಂದು ಅವಲತ್ತುಕೊಂಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಅಟ್ಟಹಾಸ ಮೆರೆಯುತ್ತಿದ್ದು, ಜನರು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಹಾಗೂ ಆಕ್ಸಿಜನ್ ಲಭ್ಯವಾಗದೆ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಹೇರುವ ಸಂಬಂಧ ಚರ್ಚೆ ನಡೆಸಲು ಇಂದು ನಡೆಸಿದ ಕ್ಯಾಬಿನೆಟ್ ಸಭೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎದುರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿ ಆರೋಗ್ಯ ಸಚಿವ ಡಾ| ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಒಂದು ಬೆಡ್ ಗಾಗಿ ಆರೋಗ್ಯ ಸಚಿವ ಸುಧಾಕರ್ ಗೆ ಕರೆ ಮಾಡಿದಾಗ ಕಾಲ್ ಪಿಕ್ ಮಾಡಲೇ ಇಲ್ಲ. ಒಬ್ಬ ಸಚಿವನಾಗಿ ನನ್ನಿಂದ ಒಂದು ಬೆಡ್ ಕೂಡ ರೋಗಿಗೆ ಕೊಡಲು ಸಾಧ್ಯವಾಗಿಲ್ಲ. ಜನ ನಮ್ಮನ್ನು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಬೇಕಿದ್ದರೆ ಸಚಿವ ಸುಧಾಕರ್ ಅವರನ್ನೇ ಕೇಳಿ” ಎಂದು ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿರುವ ಎಂಟಿಬಿ ನಾಗರಾಜ್ ಕಿಡಿಕಾರಿದ್ದಾರೆ. ಈ ವೇಳೆ ಆರೋಗ್ಯ ಸಚಿವ ಸುಧಾಕರ್ ಕೂಡ ತಮ್ಮ ಅಸಹಾಯಕತೆಯನ್ನು ಒಪ್ಪಿಕೊಂಡಿರುವ ಘಟನೆ ನಡೆದಿದೆ.