ನವದೆಹಲಿ: ನೂತನ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ಮುಸ್ಲಿಂ ರೈತರು ಪ್ರತಿಭಟನೆಯ ಮಧ್ಯೆ ನಮಾಝ್ ನಿರ್ವಹಿಸುತ್ತಿರುವ ಸಂದರ್ಭ, ಇತರ ಎಲ್ಲಾ ಪ್ರತಿಭಟನಾಕಾರರು ಅವರ ಸುತ್ತ ನಿಂತು ಅವರೊಂದಿಗೆ ಸರ್ವಧರ್ಮ ಸೌಹಾರ್ದತೆಯನ್ನು ಮೆರೆದಿದ್ದಾರೆ.
ರೈತರ ಪ್ರತಿಭಟನೆಯಲ್ಲಿ ಸಿಖ್ ಮತ್ತು ಮುಸ್ಲಿಂ ರೈತರು ಪರಸ್ಪರ ಒಗ್ಗಟ್ಟನ್ನು ಪ್ರದರ್ಶಿಸುವ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ಟ್ವಿಟ್ಟರ್ ನಲ್ಲಿ ಹಂಚಲಾದ ವೀಡಿಯೊವೊಂದರಲ್ಲಿ, ಪ್ರತಿಭಟನೆಯ ನಡುವೆ ಮುಸ್ಲಿಂ ರೈತರು ಬೀದಿಯಲ್ಲಿ ನಮಾಝ್ ನಿರ್ವಹಿಸುತ್ತಿರುವುದನ್ನು ಕಾಣಬಹುದು. ಪಕ್ಕದಲ್ಲೇ ನಿಂತ ಸಿಖ್ ರೈತರು ಸಂಪೂರ್ಣ ಮೌನವಾಗಿ, ಶಾಂತಿಯಿಂದ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಟ್ಟರು.
ವಿಡಿಯೋ ಅಪ್‌ಲೋಡ್ ಮಾಡಿದ ಭಾರತೀಯ ಪತ್ರಕರ್ತೆ ರಾಣಾ ಅಯೂಬ್, “ಸಿಖ್ ಸಹೋದರರು ರೈತರ ಪ್ರತಿಭಟನೆಯಲ್ಲಿ ನಮಾಜ್ ನಿರ್ವಹಿಸುತ್ತಿರುವ ಮುಸ್ಲಿಮರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆ. ಈ ವಿಡಿಯೋ ತನ್ನನ್ನು ಭಾವುಕಳನ್ನಾಗಿ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.