ನವದೆಹಲಿ: ದಿಲ್ಲಿಯ ಮುಸ್ಲಿಮ್ ವಿರೋಧಿ ಗಲಭೆಗೆ ಸಂಬಂಧಿಸಿದಂತೆ ಬಂಧಿತ ಇಕ್ಬಾಲ್ ಗೆ ದೆಹಲಿ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ.
ಗಲಭೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆತ ಮಾರ್ಚ್ ಆರಂಭದಿಂದ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದ. ಜೂನ್ 10ರಂದು ಆತನಿಗೆ ಜಾಮೀನು ನೀಡಲಾಗಿತ್ತು. ಆದರೆ ಪೊಲೀಸರು ಮತ್ತೊಂದು ಪ್ರಕರಣವನ್ನು ಉಲ್ಲೇಖಿಸಿ ಆತನನ್ನು ಬಿಡುಗಡೆ ಮಾಡಲು ನಿರಾಕರಿಸಿದರು. ಅಲ್ಲದೇ ಇಕ್ಬಾಲ್ ವಿರುದ್ಧ ಕೊಲೆ ಆರೋಪಗಳನ್ನು ಮಾಡಲಾಗಿತ್ತು.
“ಅರ್ಜಿದಾರರು ಸಮಾನವಾಗಿ ಜಾಮೀನು ಪಡೆಯಲು ಅರ್ಹರಾಗಿದ್ದಾರೆ. ಇಕ್ಬಾಲ್ ಅವರನ್ನು 15 ಸಾವಿರ ರೂ. ವೈಯಕ್ತಿಕ ಬಾಂಡ್ (ಅರ್ಜಿದಾರರ ಆರ್ಥಿಕ ಸಾಮರ್ಥ್ಯದ ದೃಷ್ಟಿಯಿಂದ) ಮತ್ತು ವಿಚಾರಣಾ ನ್ಯಾಯಾಲಯದ ತೃಪ್ತಿಗೆ ಸಮಾನವಾದ ಮೊತ್ತದ ಜಾಮೀನು ನೀಡುವ ಮೂಲಕ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ” ಎಂದು ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರು ಹೇಳಿದ್ದಾರೆ.
ಆದಾಗ್ಯೂ, ನ್ಯಾಯಾಲಯದ ಆದೇಶದ ಭಾಗವಾಗಿ ಪಾವತಿಸಬೇಕಾದ ಹಣವನ್ನು ಇಕ್ಬಾಲ್ ಅವರ ಕುಟುಂಬ ಹೊಂದಿಲ್ಲ. ತಮ್ಮ ಮಗ ಜೈಲಿನಿಂದ ಹೊರಬರಲು ಇನ್ನೂ ಕೆಲವು ದಿನಗಳ ವರೆಗೆ ಕಾಯಬೇಕಾಗಬಹುದು ಎಂದು ಕುಟುಂಬಸ್ಥರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.