Home ಟಾಪ್ ಸುದ್ದಿಗಳು ತಲೆಮರೆಸಿಕೊಂಡಿದ್ದ ಜಾರಕಿಹೊಳಿ ಸಿಡಿ ಪ್ರಕರಣದ ಕಿಂಗ್ ಪಿನ್ ಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು

ತಲೆಮರೆಸಿಕೊಂಡಿದ್ದ ಜಾರಕಿಹೊಳಿ ಸಿಡಿ ಪ್ರಕರಣದ ಕಿಂಗ್ ಪಿನ್ ಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು

ಬೆಂಗಳೂರು: ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕಿಂಗ್ ಪಿನ್ ಗಳೆಂದೇ ಗುರುತಿಸಿಕೊಂಡಿದ್ದ ಇಬ್ಬರು ಆರೋಪಿಗಳಿಗೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸಿಡಿ ಸ್ಫೋಟಗೊಳ್ಳುತ್ತಿದ್ದಂತೆ ಕಳೆದ ಮಾರ್ಚ್ 2 ರಿಂದ ತಲೆಮರೆಸಿಕೊಂಡಿದ್ದ ನರೇಶ್‌ ಗೌಡ ಬಿಎಂ ಮತ್ತು ಆರ್‌ ಶ್ರವಣ್‌ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕ ಹಿನ್ನೆಲೆ ಇವರಿಬ್ಬರೂ ಶೀಘ್ರವೇ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ ಬುಧವಾರ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಲಕ್ಷ್ಮಿನಾರಾಯಣ್‌ ಭಟ್‌ ಅವರು ತೀರ್ಪು ಕಾಯ್ದಿರಿಸಿದ್ದರು. ಹಿಂದಿನ ವಿಚಾರಣೆಯ ವೇಳೆ ಎಸ್‌ಐಟಿ ಪರ ಹಿರಿಯ ವಕೀಲ ಕಿರಣ್‌ ಜವಳಿ ಅವರು ನಿರೀಕ್ಷಣಾ ಜಾಮೀನಿಗೆ ತೀವ್ರ ವಿರೋಧ ದಾಖಲಿಸಿದ್ದರು. ಎಸ್‌ಐಟಿ ಆರೋಪಗಳನ್ನು ನಿರಾಕರಿಸಿದ್ದ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಅವರು ನರೇಶ್‌ ಮತ್ತು ಶ್ರವಣ್‌ ಜಾಮೀನಿಗೆ ಅರ್ಹರು ಎಂದು ವಾದಿಸಿದ್ದರು.

“ನಮ್ಮ ಕಕ್ಷಿದಾರರ ವಿರುದ್ಧದ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ. ಅತ್ಯಾಚಾರ ಆರೋಪಿಯಾಗಿರುವ ರಮೇಶ್‌ ಜಾರಕಿಹೊಳಿ ಅವರನ್ನು ರಕ್ಷಿಸಲು ನಮ್ಮ ಕಕ್ಷಿದಾರರನ್ನು ಗುರಿಯಾಗಿಸಿ, ಕಿರುಕುಳ ನೀಡಲಾಗುತ್ತಿದೆ. ಎಸ್‌ಐಟಿ ಪೊಲೀಸರ ಈ ತನಿಖೆಯಿಂದಾಗಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಜಾರಕಿಹೊಳಿ ಅವರು ಫಿರ್ಯಾದಿ ಸ್ಥಾನಕ್ಕೆ ಬಂದಿದ್ದಾರೆ. ಹೀಗಾಗಿ, ಪ್ರಾಸಿಕ್ಯೂಷನ್‌ ಸಾಕ್ಷಿ ಎಂದು ಜಾರಕಿಹೊಳಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ಪೊನ್ನಣ್ಣ ಪೀಠದ ಗಮನ ಸೆಳೆದಿದ್ದರು.

ನರೇಶ್ ಗೌಡ ಮತ್ತು ಶ್ರವಣ್ ಇವರಿಬ್ಬರೂ ಈ ಹಿಂದೆ ಕನ್ನಡದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಪತ್ರಕರ್ತರಾಗಿದ್ದರು.

Join Whatsapp
Exit mobile version