ಬೆಂಗಳೂರು : ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಘಟನೆಗಳನ್ನು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲು ರಾಜ್ಯ ಸರಕಾರವು ವಿಚಾರಣೆಯನ್ನು ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.
ಆಗಸ್ಟ್ 13ರಂದು ಬೆಂಗಳೂರಿನಲ್ಲಿ ನಡೆದ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಹಿಂಸಾಚಾರ ಮತ್ತು ಮೂವರು ಅಮಾಯಕರ ಸಾವಿಗೆ ಕಾರಣವಾದ ಪೊಲೀಸ್ ಗೋಲಿಬಾರ್ ಕುರಿತು ಅವಲೋಕನ ನಡೆಸಿದ ಬಳಿಕ ಈ ನಿರ್ಣಯವನ್ನು ಕೈಗೊಳ್ಳಲಾಯಿತು.
ಪ್ರತಿಭಟನೆ ಭುಗಿಲೇಳಲು ಅವಮಾನಕಾರಿ ಹೇಳಿಕೆಗಳೇ ಕಾರಣ:
ಕೋಮುವಾದಿ ನವೀನ್ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾದಿ(ಸ) ಯವರ ಕುರಿತು ಅತ್ಯಂತ ಅವಮಾನಕಾರಿ ಹೇಳಿಕೆ ಪ್ರಕಟಿಸಿರುವುದು, ದ್ವೇಷವನ್ನು ಸೃಷ್ಟಿಸುವ ಮತ್ತು ಮುಸ್ಲಿಮರ ಭಾವನೆಗೆ ಧಕ್ಕೆ ಉಂಟು ಮಾಡುವ ಪ್ರಮುಖ ಉದ್ದೇಶ ಹೊಂದಿತ್ತು. ಹಲವು ಸಮಯಗಳಿಂದ ಆತ ಇದೇ ರೀತಿಯ ದ್ವೇಷಪೂರಿತ ಬರಹಗಳನ್ನು ಪೋಸ್ಟ್ ಮಾಡುತ್ತಿದ್ದ. ಇದು ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಹಿಂಸಾಚಾರಕ್ಕೆ ಕಾರಣವಾದ ಪ್ರಮುಖ ವಿಷಯವಾಗಿದೆ. ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ದ್ವೇಷಪೂರ್ಣ ಮತ್ತು ಅಪರಾಧಿ ಪ್ರಯತ್ನಗಳನ್ನು ಸಭೆಯು ತೀವ್ರವಾಗಿ ಖಂಡಿಸಿದೆ ಮತ್ತು ಅಪರಾಧಿಯ ವಿರುದ್ಧ ಕಠಿಣ ದಂಡನಾತ್ಮಕ ಸೆಕ್ಷನ್ ಗಳನ್ನು ದಾಖಲಿಸಬೇಕೆಂದು ಒತ್ತಾಯಿಸಿದೆ.
ಸಮಯೋಚಿತ ಪೊಲೀಸ್ ಕ್ರಮಗಳಿಂದ ಹಿಂಸೆ ತಡೆಯಬಹುದಿತ್ತು:
ಪೊಲೀಸರು ದೂರುಗಳನ್ನು ಪಡೆದ ಕೂಡಲೇ ವೇಗವಾಗಿ ಕ್ರಮ ಕೈಗೊಂಡಿದ್ದರೆ ಈ ಅಹಿತಕರ ಘಟನೆಗಳು ನಡೆಯುತ್ತಿರಲಿಲ್ಲ. ಬದಲಾಗಿ ಅವರು ರಾಜಕೀಯ ಒತ್ತಡದ ಕಾರಣಗಳಿಂದ ಅಪರಾಧಿಯ ಬಂಧನವನ್ನು ವಿಫಲಗೊಳಿಸುವ ತಂತ್ರಗಾರಿಕೆಯನ್ನು ಮೆರೆದರು ಮತ್ತು ಸಾರ್ವಜನಿಕ ಆಕ್ರೋಶವನ್ನು ತಣಿಸಲು ವಿಫಲರಾದರು. ಹಲವು ಸಮಯಗಳಿಂದ ಮುಸ್ಲಿಮರು ಮತ್ತು ಪ್ರವಾದಿಯವರ ಕುರಿತು ಪ್ರಚೋದನಾಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿರುವುದನ್ನು ಪರಿಶೀಲಿಸಲು ಬೇಹುಗಾರಿಕಾ ಇಲಾಖೆಯು ವಿಫಲವಾಗಿರುವುದು ಅಶಾಂತಿಗೆ ಕಾರಣವಾಗಿದೆ. ಡಿ.ಜೆ.ಹಳ್ಳಿಯಲ್ಲಿ ಅಹಿತಕರ ಘಟನೆ ನಡೆಯುವುದರ ಹಿಂದಿನ ದಿನವೂ ಅಪರಾಧಿಯು ಪ್ರವಾದಿ(ಸ) ಯವರ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿದ್ದ. ಬೇಜವಾಬ್ದಾರಿಯುತ ಪೊಲೀಸ್ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರವು ಕ್ರಮ ಕೈಗೊಳ್ಳಬೇಕು. ಅದೇ ರೀತಿ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸಭೆಯು ಆಗ್ರಹಿಸಿದೆ.
ಹಿಂಸೆ ಮತ್ತು ವಿಧ್ವಂಸಕತೆಯು ದುರದೃಷ್ಟಕರ; ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸಲಾಗದು:
ಡಿ.ಜೆ. ಹಳ್ಳಿಯಲ್ಲಿ ನಡೆದ ಹಿಂಸಾಕೃತ್ಯಗಳು, ಪೊಲೀಸ್ ಠಾಣೆಯ ಬಳಿ ನಡೆದ ವಿಧ್ವಂಸಕ ಕೃತ್ಯಗಳು ಅತ್ಯಂತ ದುರದೃಷ್ಟಕರ. ಕಾನೂನು ಕೈಗೆತ್ತಿಕೊಂಡು ಶಾಂತಿಗೆ ಭಂಗ ಉಂಟು ಮಾಡುವುದು ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದನ್ನು ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ. ಪೊಲೀಸರಿಗೆ, ಸಾರ್ವಜನಿಕ ಅಥವಾ ಖಾಸಗಿ ಆಸ್ತಿಪಾಸ್ತಿಯನ್ನು ಹಾನಿಗೊಳಿಸುವ ಅಧಿಕಾರವನ್ನು ಯಾರೂ ಹೊಂದಿರುವುದಿಲ್ಲ. ಅದೇ ವೇಳೆ ತಮ್ಮ ಮೇಲೆ ಯಾವುದೇ ಅನ್ಯಾಯ ನಡೆದಾಗ ಅದನ್ನು ಪ್ರತಿಭಟಿಸುವ ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ರಕ್ಷಿಸಬೇಕಾಗಿದೆ. ಪರಿಸ್ಥಿತಿಯ ಕುರಿತು ಮಾತನಾಡದ ಮತ್ತು ತನ್ನ ಸೋದರಳಿಯನ ಅಪರಾಧಿ ಕೃತ್ಯವನ್ನು ಖಂಡಿಸದ ಸ್ಥಳೀಯ ಶಾಸಕನ ವರ್ತನೆಯು ಖಂಡನೀಯವಾಗಿದೆ. ತನ್ನ ಸೋದರಳಿಯನ ಅಪಾಯಕಾರಿ ಕೃತ್ಯಗಳ ಮತ್ತು ಹೇಳಿಕೆಗಳ ಕುರಿತು ತಿಳಿದಿದ್ದೂ ಆತನನ್ನು ಕಾನೂನಿನ ಪರಿಧಿಯಡಿಗೆ ತರಲು ವಿಫಲರಾಗಿದ್ದರು ಎಂದು ಸಭೆ ಅಭಿಪ್ರಾಯಿಸಿದೆ.
ಪೊಲೀಸರು ಮತ್ತು ರಾಜ್ಯ ಸರಕಾರದ ವೈಫಲ್ಯ ಮರೆಮಾಚಲು ಎಸ್.ಡಿ.ಪಿ.ಐಯನ್ನು ಬಲಿಪಶು ಮಾಡಲಾಗುತ್ತಿದೆ:
ಇದೀಗ ಎಸ್.ಡಿ.ಪಿ.ಐ ಮೇಲೆ ಆರೋಪ ಹೊರಿಸುತ್ತಾ ಘಟನೆಗೆ ಸಂಬಂಧಿಸಿ ಪಕ್ಷದ ನಾಯಕರನ್ನು ಬಂಧಿಸುತ್ತಿರುವುದು ಪ್ರಶ್ನಾರ್ಹವಾಗಿದೆ. ಘಟನೆಯಾದ್ಯಂತ ಪೊಲೀಸರೊಂದಿಗೆ ಸಹಕರಿಸಲು ಎಸ್.ಡಿ.ಪಿ.ಐ.ನ ಸ್ಥಳೀಯ ನಾಯಕರು ಶ್ರಮಿಸಿದ್ದಾರೆ. ಪೊಲೀಸ್ ಇಲಾಖೆಯ ಸಾರ್ವಜನಿಕ ಸಂವಹನ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಾ ಪೊಲೀಸರು ಮತ್ತು ಸ್ಥಳೀಯ ಉಲಮಾಗಳ ಉಪಸ್ಥಿತಿಯಲ್ಲಿ ಅವರು ಸಾರ್ವಜನಿಕರನ್ನು ಸಮಾಧಾನಪಡಿಸುತ್ತಿದ್ದರು. ಪರಿಸ್ಥಿತಿಯ ಕಾವನ್ನು ತಣಿಸುವ ಅವರ ನಿರಂತರ ಪ್ರಯತ್ನಗಳ ಹೊರತಾಗಿಯೂ, ಇದೀಗ ಅವರನ್ನು ಹಿಂಸಾಚಾರದ ಆರೋಪಿಗಳನ್ನಾಗಿ ಮಾಡಲಾಗಿದೆ. ಇದು ಸಂಪೂರ್ಣ ಅನೈತಿಕವೂ, ಖಂಡನಾರ್ಹವೂ ಅಗಿದೆ. ಎಸ್.ಡಿ.ಪಿ.ಐ ನಾಯಕರ ಮೇಲೆ ಆರೋಪಗಳನ್ನು ಹೊರಿಸಲು ನಿರ್ದೇಶಿಸುವ ಮೂಲಕ ಪೊಲೀಸರು ತಮ್ಮ ವೈಫಲ್ಯಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಪಾಪ್ಯುಲರ್ ಫ್ರಂಟ್ ಗಮನಿಸಿದೆ. ರಾಜ್ಯ ಸರಕಾರದ ವೈಫಲ್ಯದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಕೇವಲ ಕುಟಿಲ ಉದ್ದೇಶದೊಂದಿಗೆ ಎಸ್.ಡಿ.ಪಿ.ಐ ಹೆಸರನ್ನು ರಾಜ್ಯ ಸರಕಾರವು ಅನಗತ್ಯವಾಗಿ ಎಳೆದು ತಂದಿದೆ. ಎಸ್.ಡಿ.ಪಿ.ಐ ನಾಯಕರು ಶಾಂತಿ ಸ್ಥಾಪನೆಗಾಗಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಿದರು ಎಂಬುದನ್ನು ಕರ್ನಾಟಕದ ಜನತೆ ವೀಕ್ಷಿಸಿದ್ದಾರೆ ಮತ್ತು ಅವರು ಪೊಲೀಸರು ಮತ್ತು ರಾಜ್ಯ ಸರಕಾರದ ಕಲ್ಪಿತ ಸುಳ್ಳು ಕತೆಗಳನ್ನು ತಿರಸ್ಕರಿಸಲಿದ್ದಾರೆ ಎಂಬ ವಿಶ್ವಾಸವನ್ನು ಪಾಪ್ಯುಲರ್ ಫ್ರಂಟ್ ವ್ಯಕ್ತಪಡಿಸಿದೆ.
ಎಲ್ಲಾ ಬಂಧಿತ ಅಮಾಯಕರನ್ನು ಬಿಡುಗಡೆಗೊಳಿಸಿ; ನ್ಯಾಯಾಂಗ ತನಿಖೆಗೆ ಆದೇಶಿಸಿ
ಎಲ್ಲಾ ಆಯಾಮಗಳಲ್ಲೂ ಘಟನೆಯ ತನಿಖೆ ನಡೆಸಲು ರಾಜ್ಯ ಸರಕಾರವು ವಿಚಾರಣೆಯನ್ನು ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸಿದೆ. ಪೊಲೀಸರು ಹಲವಾರು ಮಂದಿ ಅಮಾಯಕರನ್ನು ಬಂಧಿಸಿದ್ದಾರೆ ಮತ್ತು ಘಟನೆಯ ವೇಳೆ ಸ್ಥಳದಲ್ಲಿ ಹಾಜರಿರದವರ ಮೇಲೆಯೂ ಎಫ್.ಐ.ಆರ್. ದಾಖಲಿಸಿದ್ದು, ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸಿದೆ.
ಕೋಮು ಜ್ವಾಲೆ ಹೊತ್ತಿಸಿದ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಿ:
ಕೆಲವೊಂದು ಪಕ್ಷಪಾತಿ ಮಾಧ್ಯಮಗಳು ಎರಡು ದಿನಗಳ ವರೆಗೆ ನಿರಂತರ ಸುಳ್ಳು ಮತ್ತು ಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಸಮಾಜದಲ್ಲಿ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸಿದವು. ಇಂತಹ ಟಿವಿ ಚಾನೆಲ್‌ಗಳು ನಮ್ಮ ರಾಜ್ಯದ ಸಾಮರಸ್ಯ, ಶಾಂತಿಯುತ ಸಹಾಬಾಳ್ವೆ ಮತ್ತು ಬಹುತ್ವಕ್ಕೆ ಅತ್ಯಂತ ಅಪಾಯಕಾರಿಯಾಗಿವೆ. ಕೋಮು ದ್ವೇಷದ ಜ್ವಾಲೆಯನ್ನು ಹೊತ್ತಿಸಿದ ಇಂತಹ ಪಕ್ಷಪಾತಿ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಭೆಯು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ವದಂತಿಗೆ ಕಿವಿಗೊಡದೆ ಶಾಂತಿ ಕಾಪಾಡಲು ಮನವಿ:
ಈ ಸನ್ನಿವೇಶದಲ್ಲಿ ಸಮಾಜದಲ್ಲಿ ಶಾಂತಿ ಹಾಗೂ ಭ್ರಾತೃತ್ವವನ್ನು ಕಾಪಾಡಲು ಮತ್ತು ಯಾವುದೇ ವದಂತಿ ಹಾಗೂ ಪ್ರಚೋದನೆಗಳಿಗೆ ಗಮನಹರಿಸದಂತೆ ಪಾಪ್ಯುಲರ್ ಫ್ರಂಟ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಜನರು ನೆಲದ ಕಾನೂನು ಮತ್ತು ಕಾನೂನು ಜಾರಿ ವ್ಯವಸ್ಥೆಯನ್ನು ಗೌರವಿಸುತ್ತಾ ಸಂವಿಧಾನದ ಹಕ್ಕುಗಳು ಮತ್ತು ಸೌಕರ್ಯಗಳ ಪ್ರಕಾರ ಕಾರ್ಯನಿರ್ವಹಿಸಬೇಕೆಂದು ಪಾಪ್ಯುಲರ್ ಫ್ರಂಟ್ ಕರೆ ನೀಡಿದೆ.