ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ 10 ಮಂದಿ ಆರೋಪಿಗಳಿಗೆ ಜಾಮೀನು ನೀಡಲು ಬೆಂಗಳೂರಿನ ಎನ್ಐಎ ವಿಶೇಷ ಕೋರ್ಟ್ ನಿರಾಕರಿಸಿದೆ.
ಕಳೆದ 2020ರ ಆಗಸ್ಟ್ 8 ರಂದು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಭೆ ನಡೆದಿತ್ತು. ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ಪಿ. ನವೀನ್ ಫೇಸ್ ಬುಕ್ ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟ್ ಹಾಕಿದ್ದ. ಈ ವಿಚಾರವಾಗಿ ನವೀನ್ ಬಂಧಿಸಲು ಒತ್ತಾಯಿಸಿ ಆರಂಭಗೊಂಡಿದ್ದ ಪ್ರತಿಭಟನೆ ಕೊನೆಯಲ್ಲಿ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಗಲಭೆ ವೇಳೆ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಪೊಲೀಸ್ ಠಾಣೆಯ ವಾಹನಗಳು ಸೇರಿದಂತೆ ಸಾರ್ವಜನಿಕ ವಾಹನಗಳು ಬೆಂಕಿಗಾಹುತಿಯಾಗಿದ್ದವು. ಜತೆಗೆ ಪೊಲೀಸರು ಗಾಯಗೊಂಡು ಗೋಲಿಬಾರ್ ಗೂ ಕಾರಣವಾಗಿತ್ತು.
ಈ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಹತ್ತು ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಾ. ಕಸನಪ್ಪ ನಾಯಕ್ ಆರೋಪಿಗಳ ಮನವಿ ಪುರಸ್ಕರಿಸಲು ನಿರಾಕರಿಸಿದ್ದಾರೆ.
ನ್ಯಾಯಾಲಯ ತನ್ನ ಆದೇಶದಲ್ಲಿ, ಅರೋಪಿತರ ಪರ ವಕೀಲರು ತಮ್ಮ ಕಕ್ಷೀದಾರರು ಮುಗ್ಧರು ಎಂದು ಹೇಳಿದ್ದಾರೆ. ಆದರೆ, ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಆರೋಪಿಗಳು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಹಾಗೂ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ಸಂಗತಿಯನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಆರೋಪಿಗಳ ಕೃತ್ಯಕ್ಕೆ ಪೂರಕ ಅಂಶಗಳು ಕಂಡುಬಂದಿವೆ. ಆದ್ದರಿಂದ ಆರೋಪಿತರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.