ಟಿ20 ಕ್ರಿಕೆಟ್ ಮಾದರಿಯಲ್ಲಿ 600 ವಿಕೆಟ್ ಪಡೆದ ಮೊತ್ತ ಮೊದಲ ಬೌಲರ್ ಎಂಬ ಕೀರ್ತಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಡ್ವೇಯ್ನ್ ಬ್ರಾವೊ ಪಾತ್ರರಾಗಿದ್ದಾರೆ. 38 ವರ್ಷದ ಬ್ರಾವೊ, ತಮ್ಮ ವೃತ್ತಿ ಜೀವನದ 516ನೇ ಪಂದ್ಯದಲ್ಲಿ 600 ವಿಕೆಟ್ ಎಂಬ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಸದ್ಯ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಭಾಗವಹಿಸಿರುವ ಬ್ರಾವೊ, ಓವಲ್ ಇನ್ವಿನ್ಸಿಬಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ ಕರನ್ ವಿಕೆಟ್ ಪಡೆಯುವ ಮೂಲಕ 600 ವಿಕೆಟ್ ಗಳಿಸಿದ ಮೊದಲ ಆಟಗಾರ ಎಂದು ಹೊಸ ದಾಖಲೆ ನಿರ್ಮಿಸಿದ್ದಾರೆ. ನಾರ್ದರ್ನ್ ಸೂಪರ್‌ಚಾರ್ಜರ್ಸ್ ತಂಡದ ಪರ ಆಡುತ್ತಿರುವ ಬ್ರಾವೋ, ಈ ಪಂದ್ಯದಲ್ಲಿ 20 ಎಸೆತಗಳನ್ನು ಎಸೆದು 29 ರನ್ ನೀಡಿ ಎರಡು ಪ್ರಮುಖ ವಿಕೆಟ್ ಪಡೆದರು.
ನಿಧಾನಗತಿಯ ಬೌಲಿಂಗ್ ಮೂಲಕ ರಿಲಿ ರೋಸೌವ್ ಮತ್ತು ಸ್ಯಾಮ್ ಕರನ್ ವಿಕೆಟ್ ಪಡೆದ ಬ್ರಾವೋ, ತಮ್ಮ ಎಂದಿನ ಶೈಲಿಯಲ್ಲಿ ಸಂಭ್ರಮಾಚರಣೆ ನಡೆಸಿದರು. ಬ್ರಾವೋ ನಂತರದ ಸ್ಥಾನದಲ್ಲಿರುವ ಅಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ವೆಸ್ಟ್ ಇಂಡೀಸ್‌ನ ಸುನಿಲ್ ನರೈನ್ ಕ್ರಮವಾಗಿ 466 ಮತ್ತು 457 ಟಿ20 ವಿಕೆಟ್‌ಗಳನ್ನು ಪಡೆದಿದ್ದಾರೆ.