Home ರಾಷ್ಟ್ರೀಯ ಜೆಇಇ-ಎನ್ಇಇಟಿ ಪರೀಕ್ಷೆ ನಿಗದಿತ ಸಮಯದಲ್ಲೇ ನಡೆಸುವುದಕ್ಕೆ ಬೆಂಬಲಿಸಿ 100ಕ್ಕೂ ಹೆಚ್ಚು ಬೋಧಕರಿಂದ ಪ್ರಧಾನಿಗೆ ಪತ್ರ

ಜೆಇಇ-ಎನ್ಇಇಟಿ ಪರೀಕ್ಷೆ ನಿಗದಿತ ಸಮಯದಲ್ಲೇ ನಡೆಸುವುದಕ್ಕೆ ಬೆಂಬಲಿಸಿ 100ಕ್ಕೂ ಹೆಚ್ಚು ಬೋಧಕರಿಂದ ಪ್ರಧಾನಿಗೆ ಪತ್ರ


ನವದೆಹಲಿ : ಪ್ರತಿಪಕ್ಷಗಳ ವಿರೋಧವಿದ್ದಾಗ, ಒಂದು ಆಡಳಿತಾತ್ಮಕ ಸರಕಾರಕ್ಕೆ ಇದಕ್ಕಿಂತ ಒಳ್ಳೆಯ ಬೆಂಬಲ ಖಂಡಿತವಾಗಿಯೂ ದೊರೆಯಲಾರದು. ಜೆಇಇ-ಎನ್ಇಇಟಿ ಪರೀಕ್ಷೆ ನಡೆಸುವ ಸಲುವಾಗಿ, ವಿದ್ಯಾರ್ಥಿಗಳಿಗೆ ಒಂದು ವರ್ಷ ನಷ್ಟವಾಗಬಾರದು ಎಂಬ ಉದ್ದೇಶದಿಂದ, ನಿಗದಿತ ಅವಧಿಯಲ್ಲೇ ಪರೀಕ್ಷೆ ಮುಗಿಸುವಂತೆ ಜೆಎನ್ ಯು, ಕೇರಳದ ಸೆಂಟ್ರಲ್ ಯೂನಿವರ್ಸಿಟಿ, ದೆಹಲಿ ಯೂನಿವರ್ಸಿಟಿ, ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಪ್ರೊಫೆಸರ್ ಗಳ ಬೆಂಬಲ ದೊರಕಿದೆ. ಜೆಇಇ-ಎನ್ಇಇಟಿ ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿ ಪ್ರತಿಪಕ್ಷಗಳ ವಿರೋಧ ಎದುರಿಸುತ್ತಿರುವ ಕೇಂದ್ರ ಸರಕಾರಕ್ಕೆ ಬೆಂಬಲ ಸೂಚಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರೊಫೆಸರ್ ಗಳ ಗುಂಪೊಂದು ಪತ್ರ ಬರೆದಿದೆ. 100ಕ್ಕೂ ಹೆಚ್ಚು ಬೋಧಕ ವರ್ಗದ ಸದಸ್ಯರು ಈ ಪತ್ರಕ್ಕೆ ಸಹಿ ಮಾಡಿದ್ದಾರೆ.

ಪ್ರಾಧ್ಯಾಪಕ ವಲಯದ ಸದಸ್ಯರಾದ ನಾವು, ಜೆಇಇ-ಎನ್ ಇಇಟಿ ಪರೀಕ್ಷೆಗೆ ಸಂಬಂಧಿಸಿದ ಸರಕಾರದ ನಿರ್ಧಾರಕ್ಕೆ ಪೂರ್ಣ ಬೆಂಬಲ ನೀಡುತ್ತಿದ್ದೇವೆ ಎಂದು ವಿಶ್ವವಿದ್ಯಾಲಯಗಳ ಬೋಧಕರ ಗುಂಪು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದೆ

ನಿಮ್ಮ ಸಮರ್ಥ ನಾಯಕತ್ವದಲ್ಲಿ ಜೆಇಇ-ಎನ್ಇಇಟಿ ಪರೀಕ್ಷೆಗಳು ಯಶಸ್ವಿಯಾಗಿ ನಡೆಯಲಿವೆ ಎಂಬ ನಂಬಿಕೆ ನಮಗಿದೆ. ವಿದ್ಯಾರ್ಥಿಗಳ 2020-21ರ ಶೈಕ್ಷಣಿಕ ವರ್ಷ ಪೂರ್ಣಗೊಳ್ಳಬೇಕು ಮತ್ತು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸರಕಾರದ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಪ್ರೊಫೆಸರ್ ಗಳಲ್ಲಿ ಇಗ್ನೊದ ಪ್ರೊ. ಸಿ.ಬಿ. ಶರ್ಮಾ, ದೆಹಲಿ ವಿವಿಯ ಪ್ರೊ. ಪ್ರಕಾಶ್ ಸಿಂಗ್, ಎಂಜಿಸಿಯುಬಿಯ ಉಪಕುಲಪತಿ ಪ್ರೊ. ಸಂಜೀವ್ ಶರ್ಮಾ, ಕೇರಳ ಸೆಂಟ್ರಲ್ ಯೂನಿವರ್ಸಿಟಿಯ ಪ್ರಭಾರ ಕುಲಪತಿ ಪ್ರೊ. ಜಯಪ್ರಸಾದ್, ಜೆಎನ್ ಯುನ ಪ್ರೊ. ಐನುಲ್ ಹಸನ್ ಮುಂತಾದವರು ಸೇರಿದ್ದಾರೆ.

ಫೋಟೊ ಕೃಪೆ : DNA India

Join Whatsapp
Exit mobile version