ನವದೆಹಲಿ : ಭಾರತ ಸಹಿತ ವಿವಿಧ ದೇಶಗಳಲ್ಲಿ ಇಂದು ಗೂಗಲ್ ಜಿ-ಮೇಲ್ ಸೇವೆಯಲ್ಲಿ ಭಾರೀ ವ್ಯತ್ಯಯವಾದ ಬಗ್ಗೆ ದೂರುಗಳು ಕೇಳಿ ಬಂದಿವೆ. ಬಳಕೆದಾರರಿಗೆ ಲಾಗಿನ್ ಆಗಲು, ಫೈಲ್ ಅಟ್ಯಾಚ್ ಮಾಡಲು, ಡೌನ್ ಲೋಡ್ ಮಾಡಲು ತುಂಬಾ ಕಷ್ಟದಾಯಕವಾಯಿತು ಎಂಬ ದೂರುಗಳು ಬಂದಿವೆ. ಇದರಿಂದಾಗಿ, ಕೊರೋನ ಹಿನ್ನೆಲೆಯಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿರುವ (ವರ್ಕ್ ಫ್ರಂ ಹೋಂ) ಸಾಕಷ್ಟು ಮಂದಿಗೆ ತಮ್ಮ ಕಾರ್ಯ ನಿರ್ವಹಿಸಲು ಭಾರಿ ಅಡ್ಡಿಯಾಯಿತು ಎನ್ನಲಾಗಿದೆ.
ಕಂಪ್ಯೂಟರ್ ಮತ್ತು ನೆಟ್ವರ್ಕ್ ಲೋಕದ ಸಮಸ್ಯೆ ಮತ್ತು ಬಗ್ ಕುರಿತು ವರದಿ ಮಾಡುವ ಡೌನ್ ಡಿಟೆಕ್ಟರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಜಿ-ಮೇಲ್ ಮತ್ತು ಗೂಗಲ್ ಡ್ರೈವ್ ನಲ್ಲಿ ತೊಂದರೆಯಾಗಿದೆ ಎಂದು ತಿಳಿಸಿದೆ.
ಭಾರತ ಮಾತ್ರವಲ್ಲದೆ, ಜಪಾನ್, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಈ ಸಮಸ್ಯೆ ತಲೆದೋರಿತು. ಬೆಳಗ್ಗೆ 11 ಗಂಟೆಯಿಂದ ಸುಮಾರು ನಾಲ್ಕು ಗಂಟೆಗಳ ಕಾಲ ಸಮಸ್ಯೆ ಅಂತರ್ ಜಾಲ ವಲಯದಲ್ಲಿ ಸಂಕಷ್ಟವನ್ನು ಎದುರಿಸುವಂತೆ ಮಾಡಿತು.
ಜಿ-ಮೇಲ್ ಕೈಕೊಟ್ಟಿರುವ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಮತ್ತು ಸಮಸ್ಯೆ ಶೀಘ್ರವೇ ಪರಿಹರಿಸಲಾಗುವುದು ಎಂದು ಜಿ-ಮೇಲ್ ಪ್ರಕಟಿಸಿದೆ.