ಚಾಣಕ್ಯ ವಿವಿ ಸ್ಥಾಪನೆಗಾಗಿ ಸೆಸ್ ಸಂಸ್ಥೆಗೆ ನೀಡಲಾದ ಜಾಗ ಹಿಂಪಡೆಯಲು ಸಿಪಿಐಎಂ ಆಗ್ರಹ

Prasthutha|


ಬೆಂಗಳೂರು:
ಚಾಣಕ್ಯ ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ಸೆಸ್ ಸಂಸ್ಥೆಗೆ ನೀಡಲಾದ ಜಾಗ ವಾಪಸ್ಸು ಪಡೆಯಲು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಆಗ್ರಹಿಸಿದ್ದಾರೆ.
ಕೋವಿಡ್ ಎರಡನೆಯ ಅಲೆಯ (ಏಪ್ರಿಲ್ – ಮೇ ತಿಂಗಳ) ಲಾಕ್ ಡೌನ್ ಸಂದರ್ಭದಲ್ಲಿ ಇಡೀ ರಾಜ್ಯವೇ ಅತ್ಯಂತ ಸಂಕಷ್ಟದಲ್ಲಿ ಹಾಗೂ ಆತಂಕದಲ್ಲಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಸರಕಾರ ಒಳ ಸಂಚಿನ ರೀತಿಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹರನೂರು ಹೈಟೆಕ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ ಹಂತ – 2 ರ ಕೈಗಾರಿಕಾ ಪ್ರದೇಶದಲ್ಲಿ ಚಾಣಕ್ಯ ವಿಶ್ವವಿದ್ಯಾನಿಲಯಕ್ಕಾಗಿ ಅರೆಸ್ಸೆಸ್ ನಾಯಕರಾಗಿದ್ದ ಎಂ.ಕೆ. ಶ್ರೀಧರ್ ಅವರ ಸೆಂಟರ್ ಫಾರ್ ಸೋಷಿಯಲ್ ಸ್ಟಡೀಸ್ ಸಂಸ್ಥೆಗೆ ಅತ್ಯಂತ ಹೆಚ್ಚು ಬೆಲೆಬಾಳುವ 116.16 ಎಕರೆ ಜಮೀನನ್ನು ಕಡಿಮೆ ಬೆಲೆಗೆ ನೀಡಿರುವುದು ಖಂಡನೀಯ ಎಂದರು.
ರಾಷ್ಟ್ರೀಯ ಹೆದ್ದಾರಿ 207 ರಿಂದ ನೇರ ಪ್ರತ್ಯೇಕ ರಸ್ತೆ ಹೊಂದಿರುವ ಸದ್ರಿ ಭೂಮಿಗೆ ಸಂಬಂಧಿಸಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ತಲಾ ಎಕರೆ ಬೆಲೆಯು 1.16 ಕೋಟಿ ರೂಪಾಯಿಗಳೆಂದು ಸೂಚಿಸಿದ್ದರೂ ಅದನ್ನು ಧಿಕ್ಕರಿಸಿ ಆರೆಸ್ಸೆಸ್ಸನ್ನು ಒಲೈಸುವ ದುರುದ್ದೇಶದಿಂದ ಕೇವಲ 50 ಕೋಟಿಗೆ ಮಾರಾಟ ಮಾಡುವ ಮೂಲಕ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಅಪಾರ ನಷ್ಟವನ್ನುಂಟು ಮಾಡಲಾಗಿದೆ.
ಈ ಸಂಸ್ಥೆಗೆ ಇಷ್ಟೊಂದು ಪ್ರಮಾಣದಲ್ಲಿ ಭೂಮಿ ಒದಗಿಸುವ ಅವಶ್ಯಕತೆ ಇದೆಯೇ ಮತ್ತು ಕಡಿಮೆ ಬೆಲೆಗೆ ನೀಡಿದಲ್ಲಿ ಇಲಾಖೆಗೆ ನಷ್ಟವಾಗುವುದಿಲ್ಲವೇ? ಎಂದು ಮರು ಪರಿಶೀಲಿಸುವಂತೆ ಆರ್ಥಿಕ ಇಲಾಖೆಗೆ ಮನವಿ ಮಾಡಿದ್ದಾರೆ. ಈ ರೀತಿಯಲ್ಲಿ ಅಗ್ಗದ ದರಕ್ಕೆ ಮಾರಾಟ ಮಾಡುವ ಮೂಲಕ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಸುಮಾರು 135 ಕೋಟಿ ನಷ್ಟ ಉಂಟಾಗಿದೆ. ಅಭಿವೃದ್ಧಿಪಡಿಸಲ್ಪಟ್ಟ ಜಮೀನಿನ ದರವನ್ನು 2021 ರ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ನಷ್ಟವು ಅತೀ ಹೆಚ್ಚಾಗಿದೆ. ರೈತರಿಂದ ಖರೀದಿಸುವಾಗ ಕೆಐಎಡಿಬಿಯು ಎಕರೆಗೆ ತಲಾ 1.5 ಕೋಟಿ ಪಾವತಿಸಿದ್ದು ಖರೀದಿ ನಷ್ಟವೇ ಸಂಸ್ಥೆಗೆ 125 ಕೋಟಿ ರೂ.ಗಳಿಗೂ ಅಧಿಕವಾಗುತ್ತದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಮುಖ್ಯವಾಗಿ ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಗಳ ಮೇಲೆ ದಾಳಿ ನಡೆಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಅಪರಾಧದಲ್ಲಿ ತೊಡಗಿರುವ ರಾಜ್ಯ ಸರಕಾರ, ಈ ರೀತಿ ಕನ್ನಡ ಭಾಷೆ ಹಾಗೂ ಜನಗಳ ಮೇಲೆ ದಾಳಿ ಮಾಡಲು, ಕನ್ನಡದ ನೆಲವನ್ನು ಬೇಕಾಬಿಟ್ಟಿ ದರಕ್ಕೆ ಮಾರುತ್ತಿರುವುದು ಮತ್ತೊಂದು ಅಪರಾಧವಾಗಿದೆ.
ಆದ್ದರಿಂದ, ರೈತರಿಂದ ಸ್ವಾಧೀನಪಡಿಸಿಕೊಂಡು, ಕೈಗಾರಿಕಾಭಿವೃದ್ಧಿಗಾಗಿ ಮೀಸಲಿಟ್ಟ ಈ ಜಮೀನುಗಳನ್ನು ಕನ್ನಡ ಹಾಗೂ ಕನ್ನಡಿಗರ ವಿರೋಧಿ ಕಾರ್ಯಕ್ಕಾಗಿ ಒದಗಿಸಿರುವುನ್ನು ರದ್ದುಪಡಿಸಿ ವಾಪಸ್ಸು ಪಡೆದು ಇಂತಹ ಅಗ್ಗದ ದರದ ಮಾರಾಟಕ್ಕೆ ಮುಂದಾದ ಕಾರ್ಯವನ್ನು ತನಿಖೆಗೊಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Join Whatsapp