ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ನೋಟೀಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರಿನಿವಾಸ ಓಕಾ, ನ್ಯಾಯಮೂರ್ತಿ ಶಂಕರ್ ಮಗದಮ್ ನೇತೃತ್ವದ ನ್ಯಾಯಪೀಠ ಮುಹಮ್ಮದ್ ಆರೀಫ್ ಜಮೀಲ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ, ಸುಗ್ರೀವಾಜ್ಞೆಯ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೆ, ಈ ಕುರಿತು ಫೆಬ್ರವರಿ 17ರಂದು ಮುಂದಿನ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಗೋ ಹತ್ಯೆ ನಿಷೇಧ ಸುಗ್ರೀವಾಜ್ಞೆ ನಿಬಂಧನೆಗಳು ಸಂವಿಧಾನ 21ರ ಜೀವನಾಧಾರ ಹಕ್ಕನ್ನು ಉಲ್ಲಂಘಿಸುತ್ತದೆ. ವಾಣಿಜ್ಯ ಅಥವಾ ವ್ಯಾಪಾರ ಮಾಡುವ ಹಕ್ಕುಗಳನ್ನು ಮೊಟುಕುಗೊಳಿಸಲಿದೆ ಎಂದು ಆರೀಫ್ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಈ ಸುಗ್ರೀವಾಜ್ಞೆ ಸಂವಿಧಾನದ ಕಲಂ 19 (ಜಿ) ಖಾತರಿಪಡಿಸಿರುವ ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ. ದೇಶದಲ್ಲಿ ಪ್ರಾಣಿಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಬಹಳ ಮಂದಿಯ ಬದುಕುಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಲವಾರು ಮಂದಿಯ ವ್ಯಾಪಾರ-ವಹಿವಾಟಿನ ಮೇಲೆ ಇದು ಪ್ರಭಾವ ಬೀರಲಿದೆ ಎಂದು ಆರೀಫ್ ಜಮೀಲ್ ಆರ್ಜಿಯಲ್ಲಿ ಹೇಳಿದ್ದಾರೆ.
ಪ್ರತಿಪಕ್ಷಗಳ ವಿರೋಧದ ನಡುವೆಯೂ ಗೋಹತ್ಯೆ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿತ್ತು. ಆದರೆ ವಿಧಾನಪರಿಷತ್‌ನಲ್ಲಿ ವಿಧೇಯಕ ಮಂಡನೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯ ಮೂಲಕ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.