ಗೋಸ್ವಾಮಿಯ ನ್ಯಾಯಾಲಯ ಮತ್ತು ಇಂದಿನ ಮಾಧ್ಯಮ

Prasthutha|

-ರಮೇಶ್ ಎಸ್.ಪೆರ್ಲ

- Advertisement -

ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿಗೆ ಸುಪ್ರೀಂ ಕೋರ್ಟ್ ಸಹಾಯ ಮಾಡಿದ್ದು ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಹಲವೆಡೆ ಗೋಸ್ವಾಮಿ ವಿರುದ್ಧ ಎಫ್.ಐ.ಆರ್ ದಾಖಲಿಸಿದಾಗ ಕೂಡ ದೇಶ ಸರ್ವೋಚ್ಛ ನ್ಯಾಯಾಲಯ ತುರ್ತು ಸ್ಪಂದನೆ ನೀಡಿತ್ತು. ಇದೇ ‘ನ್ಯಾಯ’ ದೇಶದ ಅಸಂಖ್ಯ ಮಂದಿ ಸಾಮಾನ್ಯ ನ್ಯಾಯ ವಂಚಿತರಿಗೆ ದೊರಕುತ್ತಿಲ್ಲ ಎಂಬುದು ನಗ್ನ ಸತ್ಯ. ಸುಮಾರು 25 ವರ್ಷಗಳ ವೃತ್ತಿ ಅನುಭವ ಹೊಂದಿರುವ 47ರ ಹರೆಯದ ಅರ್ನಾಬ್ ಗೋಸ್ವಾಮಿಯ ಟಿವಿ ಪತ್ರಿಕೋದ್ಯಮ ಏಕ್ತಾ ಕಪೂರ್ ಟಿವಿ ಸೀರಿಯಲ್ ಬಿಸಿನೆಸ್ ಮಾದರಿಯಲ್ಲಿದೆ. ಪರಿಣಾಮ ಮಾತ್ರ ತುಂಬಾ ಅಪಾಯಕಾರಿಯಾಗಿದೆ. ಕಳೆದ ದಶಕದಲ್ಲಿ ಕನ್ನಡ ಪತ್ರಿಕೋದ್ಯಮದ ಯುವ ಮನಸ್ಸುಗಳನ್ನು ಹಾಳುಗೆಡಹಿದ ಕೆಲಸಕ್ಕಿಂತಲೂ ಆತಂಕಕಾರಿ. ಕೆಲವೊಂದು ಪ್ರೈಂ ಟೈಮ್ ಕಾರ್ಯಕ್ರಮಗಳು ಹೇಗಿರುತ್ತವೆ ಅಂದ್ರೆ ಉದ್ರಿಕ್ತ ಜನತೆ ಮಾರಕಾಸ್ತ್ರಗಳನ್ನು ಹಿಡಿದು ದೊಂಬಿ ಎಬ್ಬಿಸುವ ಭೀತಿಯನ್ನು ಸಷ್ಟಿಸುತಿತ್ತು. ಏಕ್ತಾ ಕಪೂರ್ ಶೈಲಿಯ ಸೀರಿಯಲ್ ಹೋಗಿ ಸನ್ಸನಿ ಕ್ರೈಂ ಎಪಿಸೋಡ್ ಶೈಲಿಯಲ್ಲಿ ರಾಜಕೀಯ ಡಿಬೇಟ್ ನಡೆಸಲಾಗುತ್ತಿದೆ. ಸಾಮಾಜಿಕ ಜವಾಬ್ದಾರಿ, ಪತ್ರಿಕೋದ್ಯಮದ ಕಟ್ಟುಪಾಡುಗಳನ್ನು ಯಾವಾಗಲೋ ಮರೆತಿದ್ದ ಗೋಸ್ವಾಮಿ ಒಂದೆಡೆ ತನ್ನ ಉದ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ಆದಾಯ ತರುವುದು, ಅದೇ ವೇಳೆಯಲ್ಲಿ ತನ್ನನ್ನು ಸಾಕುತ್ತಿರುವ ರಾಜಕೀಯ ಮುಖಂಡರಿಗೆ ಲಾಭ ತಂದುಕೊಡುವಲ್ಲಿ ಯಾವ ಮಟ್ಟಕ್ಕೂ ಇಳಿಯಲು ಹೇಸದ ಮಿಡಿಯ ಬುಚ್ಚರ್ ಆಗಿ ರೂಪುಗೊಂಡಿದ್ದ. ಹೇಳಿ ಕೇಳಿ ಮುಂಬಯಿ ಎಂಬುದು ಹಣಕಾಸಿನ ರಾಜಧಾನಿಯೂ ಹೌದು, ಭೂಗತ ಜಗತ್ತಿನ ತವರೂರೂ ಹೌದು. ಈತ ನಡೆಸುತ್ತಿದ್ದ ಕಾರ್ಯಕ್ರಮಗಳಿಂದಾಗಿ ಲಿಂಚಿಂಗ್ ಗ್ಯಾಂಗಿನ ಮುಖ್ಯಸ್ಥನೆಂದೇ ಈತನನ್ನು ಸೋಶಿಯಲ್ ಮೀಡಿಯಾಗಳಲ್ಲಿ ಟೀಕಿಸಲಾಗುತಿತ್ತು. ಕಳೆದೊಂದು ವರ್ಷದಲ್ಲಿ, ನರೇಂದ್ರ ದಾಮೋದರ ದಾಸ್ ಮೋದಿ ಎರಡನೇ ಬಾರಿ ಪ್ರಧಾನಿಯಾದ ಮೇಲೆ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರ ಕಳಕೊಂಡ ಮೇಲೆ ಗೋಸ್ವಾಮಿಯ ಡಿಬೇಟಿಂಗ್ ಶೈಲಿ ಮತ್ತಷ್ಟು ಕೆಳಮಟ್ಟಕ್ಕೆ ಇಳಿಯತೊಡಗಿತು.

ದೆಹಲಿಯಲ್ಲಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯಿಂದ ಹಿಡಿದು ಮುಂಬಯಿಯಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಮುಖಂಡರಾದ ಸಂಜಯ್ ರಾವತ್, ಮುಂಬಯಿ ಸಿನಿಮಾ ಜಗತ್ತಿನ ಎಲ್ಲ ಸೂಪರ್ಸ್ಟಾರ್ ಗಳನ್ನು ಗಾಂಜೆಡಿ, ನಶೆಡಿ ಇತ್ಯಾದಿ ಅವಮಾನಕಾರಿ ಶಬ್ದಗಳ ಮೂಲಕ ಮೂದಳಿಸಿದಲ್ಲದೆ, ಪರಸ್ಪರ ರೌಡಿ ಗ್ಯಾಂಗುಗಳು ಬೀದಿ ಬದಿ ಕಾಳಗಕ್ಕೆ ತೊಡೆ ತಟ್ಟುವಂತೆ ಟಿವಿ ಸ್ಟುಡಿಯೋದಲ್ಲಿ ಕುಳಿತು ಅರ್ನಾಬ್ ಅರಚಾಡತೊಡಗಿದ್ದ. ಬಿಹಾರ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಮರುಜೀವ ನೀಡಲಾಗಿತ್ತು. ಆತ್ಮಹತ್ಯೆ ನಡೆದು ಎಷ್ಟೋ ದಿನಗಳ ನಂತರ ಈ ರಾಷ್ಟ್ರೀಯವಾದಿ ಪತ್ರಕರ್ತರಿಗೆ ಅದನ್ನೊಂದು ಕೊಲೆ ಕೇಸಾಗಿ ಮಾರ್ಪಾಡು ಮಾಡಬಹುದು ಅನಿಸಿತ್ತು. ಬಿಹಾರ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಮತ್ತು ಕಾಂಗ್ರೆಸ್ ವಿರುದ್ಧ ಮತದಾರರಲ್ಲಿ ಆಕ್ರೋಶ ಮೂಡಿಸಲು ಒಂದು ವಿಚಾರ ಬೇಕಾಗಿತ್ತು. ಅರ್ನಾಬ್ ಗೋಸ್ವಾಮಿ ತನ್ನ ಟಿವಿ ಸ್ಟುಡಿಯೋದಲ್ಲಿ ಕುಳಿತು ನ್ಯಾಯಾಲಯದ ಶೈಲಿಯಲ್ಲಿ ರಿಯಾ ಚಕ್ರವರ್ತಿ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಕೇಸು ಹಾಕಬೇಕೆಂದು ಬೊಬ್ಬೆ ಹೊಡೆಯತೊಡಗಿದ. ಸಿಬಿಐ ತನಿಖೆ ನಡೆದ ನಂತರ ಅದೊಂದು ಆತ್ಮಹತ್ಯೆ ಎಂಬುದನ್ನು ತನಿಖಾಧಿಕಾರಿಗಳು ಮತ್ತೊಮ್ಮೆ ಹೇಳುವ ಮೂಲಕ ಇವರ ಬಾಯಿ ಮುಚ್ಚಿಸಿದರು.

- Advertisement -

ಸುಶಾಂತ್ ಪ್ರಕರಣದಲ್ಲಿ ಕೇವಲ ಪ್ರತಿಪಕ್ಷದ ಮುಖಂಡರನ್ನಲ್ಲದೆ ಮುಂಬಯಿ ಚಿತ್ರ ಜಗತ್ತಿನ ಬಹುಮಂದಿಯ ವಥಾ ಆರೋಪ ಮಾಡಿ ಮಾನಹಾನಿ ಮಾಡುವ ಯತ್ನ ನಡೆದಿತ್ತು. ಕೊನೆಗೆ ಹಲವು ಸಿನಿಮಾ ನಿರ್ಮಾಣ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಇದಕ್ಕೆ ಮೊದಲೇ, ಕಾಂಗ್ರೆಸ್ ಮುಖಂಡರು ಕೂಡ ಅರ್ನಾಬ್ ಗೋಸ್ವಾಮಿ ವಿರುದ್ಧ ಹಲವು ಎಫ್.ಐ.ಆರ್ ದಾಖಲಿಸಿದ್ದರು. ಆಗ ಇದೇ ಸುಪ್ರೀಂ ಕೋರ್ಟ್ ಗೋಸ್ವಾಮಿಯನ್ನು ಬಚಾವ್ ಮಾಡಿತ್ತು. ಈ ಪ್ರಕರಣಗಳಲ್ಲಿ ಅರ್ನಾಬ್ ಬಂಧನ ಆಗಿರಲಿಲ್ಲ. ಆದರೆ, ಟಿವಿ ಚಾನಲಿನಲ್ಲಿ ಕುಳಿತುಕೊಂಡು ಹಳೆ ಶೈಲಿಯ ರೌಡಿಗಳಂತೆ ಕಾಲು ಕೆರೆದು ಜಗಳಕ್ಕೆ ಕರೆಯುವುದನ್ನು ನೋಡಿ ಪ್ರತಿಪಕ್ಷದ ಮುಖಂಡರಿಗೂ ತುಂಬಾ ದಿನ ಸುಮ್ಮನಿರಲು ಸಾಧ್ಯವಾಗಿರಲಿಲ್ಲ. ಸೋನಿಯಾ ವಿರುದ್ಧ ನಡೆಸಿದ ಆಪಾದನೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸರಿಯಾದ ಯೋಜನೆ ಇಲ್ಲದೆ ಕಾಂಗ್ರೆಸ್ ಕಾರ್ಯಕರ್ತರಿಗೆ ಹಿನ್ನಡೆ ಆಗಿತ್ತು. ಕಾಂಗ್ರೆಸ್ ಯಾವತ್ತೂ ಯೋಜಿತವಾಗಿ ಕೆಲಸ ಮಾಡುವ ಸಂಘಟನೆ ಅಲ್ಲವೇ ಅಲ್ಲ. ಆದರೆ, ಈ ಬಾರಿ ಕೈ ಯಾಮಾರಲು ಮುಖಂಡರು ಸಿದ್ಧರಿರಲಿಲ್ಲ. ಅದಕ್ಕಾಗಿ ಗೋಸ್ವಾಮಿ ವಿರುದ್ಧವಿದ್ದ ಕ್ರಿಮಿನಲ್ ಪ್ರಕರಣವೊಂದಕ್ಕೆ ಜೀವ ನೀಡಲಾಯಿತು.

ಅದಕ್ಕೂ ಮುನ್ನ ಟಿ.ಆರ್.ಪಿ ಹಗರಣ ಬೆಳಕಿಗೆ ಬಂದಿತ್ತು. ರಿಪಬ್ಲಿಕ್ ಟಿವಿಯ ವೀಕ್ಷಕರ ಸಂಖ್ಯೆ ಹೆಚ್ಚಿಸಲು ಬೇಕಾಗಿ ಆಯ್ದ ಕುಟುಂಬಗಳಿಗೆ ಪ್ರತಿ ತಿಂಗಳು 15 ಲಕ್ಷ ರೂಪಾಯಿ ಪಾವತಿಸಲಾಗುತ್ತಿತ್ತು. ಆ ಮೂಲಕ ಗೋಸ್ವಾಮಿಯ ದೇಶಭಕ್ತಿಯ ರಿಪಬ್ಲಿಕ್ ಚಾನಲ್ ತನ್ನ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಮೂಲಕ ಎಲ್ಲ ಜಾಹೀರಾತು ತಾನೇ ಪಡೆದುಕೊಂಡು ಲಾಭ ಮಾಡುತ್ತಿತ್ತು. ಈ ಪ್ರಕರಣದಲ್ಲಿ ಗೋಸ್ವಾಮಿ ಅಲ್ಲದೆ ಇತರನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು. ಟಿ.ಆರ್.ಪಿ ರೇಟಿಂಗ್ ಹಗರಣ ಗದ್ದಲದ ನಡುವೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪೊಲೀಸರು ಒಂದು ಮುಂಜಾನೆ ಗೋಸ್ವಾಮಿಯ ಅರಮನೆಯ ಬಾಗಿಲು ತಟ್ಟಿದ್ದರು. 2018ರ ಮೇ ತಿಂಗಳಲ್ಲಿ 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಲಾಯಿತು.

2018ರ ಮೇ ತಿಂಗಳಲ್ಲಿ ಅನ್ವಯ್ ನಾಯಕ್ ಮತ್ತು ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಅರ್ನಾಬ್ ಗೋಸ್ವಾಮಿ ಮತ್ತು ಇನ್ನಿಬ್ಬರು ತಮಗೆ 5.4 ಕೋಟಿ ರೂ. ಹಣ ನೀಡಬೇಕು. ಆ ಹಣ ನೀಡಲು ಅವರು ಒಪ್ಪುತ್ತಿಲ್ಲ. ಇದರಿಂದ ನಾವು ಜೀವಿಸಲು ಬೇರೆ ಉಪಾಯ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್ ನೋಟ್ ಬರೆದಿಟ್ಟು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗ ಸಾವನ್ನಪ್ಪಿರುವುದು ಗೊತ್ತಾಗುತ್ತಿದ್ದಂತೆ ಅನ್ವಯ್ ಅವರ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಂಬಯಿಯಲ್ಲಿ ರಿಪಬ್ಲಿಕ್ ಟಿವಿ ಸ್ಟುಡಿಯೋ ನಿರ್ಮಿಸುವಾಗ ಅನ್ವಯ್ ನಾಯಕ್ ಅವರೇ ಇಂಟೀರಿಯರ್ ಡಿಸೈನಿಂಗ್ ಮಾಡಿಕೊಟ್ಟಿದ್ದರು. ಅದರ ಹಣ ನೀಡದೆ ಸತಾಯಿಸಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಅರ್ನಾಬ್ ಗೋಸ್ವಾಮಿ ವಿರುದ್ಧ ಕೇಳಿಬಂದಿತ್ತು. 2018ರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅರ್ನಾಬ್ ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಕೇಸನ್ನು 2019ರಲ್ಲಿ ರಾಯಘಡ ಪೊಲೀಸರು ಎ ರಿಪೋರ್ಟ್ ಹಾಕಿ ನ್ಯಾಯಾಲಯಕ್ಕೆ ವರದಿ ಹಾಕಿ ಕ್ಲೋಸ್ ಮಾಡಿದ್ದರು. ವಾಸ್ತವದಲ್ಲಿ ಈ ಪ್ರಕರಣ ಮತ್ತೆ ಜೀವ ಪಡೆಯಲು ಸ್ವತಃ ಅರ್ನಾಬ್ ಗೋಸ್ವಾಮಿಯೇ ಕಾರಣ ಎಂಬುದು ಸ್ವಾರಸ್ಯಕರ ವಿಚಾರ. ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ಅನ್ವಯ್ ನಾಯಕ್ ಪುತ್ರಿಗೆ ಪೊಲೀಸರು ನೈಜ ಮಾಹಿತಿ ಹೇಳಿರಲಿಲ್ಲ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅನ್ವಯ್ ನಾಯಕ್ ಪುತ್ರಿ ಎನ್.ಸಿ.ಪಿ ಮುಖಂಡರಿಗೆ ಮನವಿ ಮಾಡಿ ಪ್ರಕರಣದ ತನಿಖೆ ನಡೆಸಿ ಶೀಘ್ರ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದರು. ಅನ್ವಯ್ ನಾಯಕ್ ರ ಕುಟುಂಬ ಸರಕಾರಕ್ಕೆ ಮನವಿ ಮಾಡಿರುವ ವಿಚಾರ ರಿಪಬ್ಲಿಕ್ ಟಿವಿ ಗಮನಕ್ಕೂ ಬಂದಿತ್ತು. ಆಗ ರಿಪಬ್ಲಿಕ್ ಟಿವಿ ಸುದ್ದಿಯೊಂದನ್ನು ಪ್ರಸಾರ ಮಾಡಿತ್ತು. ಸುದ್ದಿಯ ಸಾರಾಂಶ ಏನೆಂದರೆ ಈ ಪ್ರಕರಣ ಈಗಾಗಲೇ ಕ್ಲೋಸ್ ಆಗಿದೆ. ನ್ಯಾಯಾಲಯ ಪೊಲೀಸರು ಸಲ್ಲಿಸಿದ ಎ ರಿಪೋರ್ಟ್ ಒಪ್ಪಿಕೊಂಡಿದೆ ಎಂದಿತ್ತು. ಅದಾಗಲೇ ಅನ್ವಯ್ ನಾಯಕ್ ಪುತ್ರಿಗೆ ಸತ್ಯ ವಿಚಾರ ತಿಳಿದದ್ದು. ಆ ಕಾರಣ ಮತ್ತೆ ಸರಕಾರಕ್ಕೆ ಮನವಿ ಸಲ್ಲಿಸಿ ನ್ಯಾಯ ಒದಗಿಸಲು ಬೇಡಿಕೊಂಡರು.

ಗೋಸ್ವಾಮಿಯ ಅದೃಷ್ಟ ಕೆಟ್ಟಿತ್ತು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವಾದ ಕಾರಣ ನ್ಯಾಯಾಲಯಗಳು ತಕ್ಷಣಕ್ಕೆ ಯಾವುದೇ ರೀತಿಯ ಕಾನೂನು ಸಮ್ಮುಖ ಸಹಾಯವನ್ನು ನೀಡಲಿಲ್ಲ. ಆದರೆ, ರಜೆಯ ಕಾಲವಾಗಿದ್ದರೂ ಕೂಡ ಸುಪ್ರೀಂ ಕೋರ್ಟ್ ಪರ್ಸನಲ್ ಲಿಬರ್ಟಿ ಹೆಸರಿನಲ್ಲಿ ಗೋಸ್ವಾಮಿಗೆ ಜಾಮೀನು ನೀಡಿ ಪುರಸ್ಕರಿಸಿದೆ. ಮತ್ತೊಂದು ಬಾರಿ ಸುಪ್ರೀಂ ಕೋರ್ಟ್ ಕೂಡ ಆಡಳಿತ ಪಕ್ಷಕ್ಕೆ ಹತ್ತಿರವಾಗಿರುವ, ಅತಿ ಶ್ರೀಮಂತ ಪತ್ರಕರ್ತನಿಗೆ ವಿಶೇಷ ಕಳಕಳಿ ತೋರಿಸಿತು. ಇದೇ ಪರ್ಸನಲ್ ಲಿಬರ್ಟಿ ಹಲವು ವರ್ಷಗಳಿಂದ ಅನ್ಯಾಯವಾಗಿ ಜೈಲುಗಳಲ್ಲಿ ಕೊಳೆಯುತ್ತಿರುವ ಪತ್ರಕರ್ತರು, ಹಕ್ಕುಗಳ ಹೋರಾಟಗಾರರಿಗೆ ಯಾಕೆ ಅನ್ವಯ ಆಗುವುದಿಲ್ಲ ಎಂಬುದು ದೇಶದ ಜನತೆ ಕೇಳುತ್ತಿರುವ ಪ್ರಶ್ನೆ.

ಟಿ.ಆರ್.ಪಿ ರೇಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ. ರಿಪಬ್ಲಿಕ್ ಟಿವಿಯ ಹಂಚಿಕೆ ವಿಭಾಗದ ಮುಖ್ಯಸ್ಥ ಘನಶ್ಯಾಮ್ ಸಿಂಗ್ ಬಂಧಿತರಾಗಿದ್ದು, ಇದರೊಂದಿಗೆ ಪ್ರಕರಣದಲ್ಲಿ ಇಲ್ಲಿಯವರೆಗೆ 12 ಜನರನ್ನು ಬಂಧಿಸಿದಂತಾಗಿದೆ. ಹವಾಲಾ ಆಪರೇಟರ್ ಗಳಿಂದ ಹಣ ಸ್ವೀಕರಿಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದು ದೇಶಪ್ರೇಮಿಗಳು ನಡೆಸುವ ವ್ಯಾಪಾರದ ಶೈಲಿ. ಅರ್ನಾಬ್ ಗೋಸ್ವಾಮಿ ತನ್ನ ವೃತ್ತಿ ಮತ್ತು ಪ್ರವೃತ್ತಿಯಿಂದಾಗಿ ಈಗಾಗಲೇ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಕೂಡ ಗೋಸ್ವಾಮಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಗೋಸ್ವಾಮಿ ವಿರುದ್ಧ ನಿಜಕ್ಕೂ ದಾಖಲಾಗಬೇಕಾಗಿರುವುದು ದೇಶದಲ್ಲಿ ಪರಸ್ಪರ ಕೋಮು ದ್ವೇಷ ಹಬ್ಬಿಸುವ ಕೃತ್ಯಕ್ಕಾಗಿ. ಅಂತಹ ಪ್ರಕರಣವೊಂದನ್ನು ಪುಣೆಯ ನಿಲೇಶ್ ನವ್ಲಖ ಅವರು ಭಾರತೀಯ ಕೇಬಲ್ ಟೆಲಿವಿಶನ್ ನೆಟ್ ವರ್ಕ್ ರೆಗ್ಯುಲೇಶನ್ ಕಾಯ್ದೆಯಡಿ ದಾಖಲಿಸಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಈ ಪ್ರಕರಣ ದಾಖಲಾಗಿದ್ದು, ಗೋಸ್ವಾಮಿ ಮುಂಬಯಿ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.

2011ರಲ್ಲಿ ಪುಣೆಯ ನ್ಯಾಯಲಯವೊಂದು ಗೋಸ್ವಾಮಿ ವಿರುದ್ಧ 100 ಕೋಟಿ ರೂ. ದಂಡ ಹಾಕಿ ಶಿಕ್ಷೆ ವಿಧಿಸಿತ್ತು. ಆದರೆ, ದಿನ ಹೈಕೋರ್ಟಾಗಲಿ, ಸುಪ್ರೀಂ ಕೋರ್ಟಾಗಲಿ ಗೋಸ್ವಾಮಿಗೆ ಕಾನೂನು ಪ್ರಕಾರ ಯಾವುದೇ ವಿನಾಯತಿ ನೀಡಲು ನಿರಾಕರಿಸಿತ್ತು. ಈ ಪ್ರಕರಣ ಹಲವು ವರ್ಷಗಳ ಕಾಲ ಹೈಕೋರ್ಟಿನಲ್ಲಿ ವಿಚಾರಣೆಯಲ್ಲಿತ್ತು. ಇದು ಗೋಸ್ವಾಮಿ ಟೈಮ್ಸ್ ನೌ ಟಿವಿ ಚಾನಲಿನಲ್ಲಿದ್ದಾಗ ನಡೆದ ಪ್ರಕರಣ. ಪ್ರಣಯ್ ರಾಯ್ ಅವರ ಎನ್.ಡಿ ಟಿವಿಯಂತಹ ದೇಶದ ಮಾದರಿಯ ಟೆಲಿವಿಶನ್ ಚಾನೆಲಿನಲ್ಲಿ ಕೆಲಸ ಕಲಿತುಕೊಂಡ ಗೋಸ್ವಾಮಿ ಈ ಮಟ್ಟದ ಪತ್ರಿಕೋದ್ಯಮ ನಡೆಸಬಹುದು ಎಂದು ಯಾರೂ ಊಹಿಸಿರಲಿಲ್ಲ. ದೆಹಲಿಯಿಂದ ಮುಂಬಯಿಗೆ ಆಗಮಿಸಿದ ಗೋಸ್ವಾಮಿ ಟೈಮ್ಸ್ ಆಫ್ ಇಂಡಿಯಾದವರಿಗಾಗಿ ಟೈಮ್ಸ್ ನೌ ಎಂಬ ಹೊಸ ಟಿವಿ ಚಾನೆಲ್ ಆರಂಭಿಸಿದ್ದರು. ಅತ್ಯಂತ ವೇಗವಾಗಿ, ವಿಶಿಷ್ಟವಾಗಿ ಸುದ್ದಿಕೊಡುವುದಕ್ಕಾಗಿ ಇದು ಗಮನ ಸೆಳೆದಿತ್ತು. ಆದರೆ, ಗೋಸ್ವಾಮಿಯ ಈ ಹೊಸ ಮಾದರಿ ಪತ್ರಿಕೋದ್ಯಮ ವೀಕ್ಷಿಸಿದ ಅಂದಿನ ಹಿರಿಯ ಪತ್ರಕರ್ತರು ಇದು ಗೋಸ್ವಾಮಿ ಹಾಗೂ ಅವರ ಮಾಲೀಕರ ಸಮಸ್ಯೆ ತರುತ್ತದೆ ಎಂದಿದ್ದರು. ಹಾಗೆಯೇ ಆಯಿತು. ನೂರು ಕೋಟಿ ರೂ. ದಂಡ ವಿಧಿಸಿರುವುದು ದೇಶದ ನ್ಯಾಯ ವ್ಯವಸ್ಥೆಯಲ್ಲೇ ಹೊಸದಾಗಿತ್ತು.

 ಹಗರಣದ ಸುದ್ದಿಯೊಂದಕ್ಕೆ ಸಂಬಂಧಿಸಿ ತಪ್ಪಾಗಿ ಮಾಜಿ ನ್ಯಾಯಮೂರ್ತಿ ಪಿ.ಬಿ.ಸಾವಂತ್ ಅವರ ಫೋಟೊವನ್ನು ಕೇವಲ ಏಳು ಸೆಕೆಂಡುಗಳ ಕಾಲ ಟೈಮ್ಸ್ ನೌ ಪ್ರಕಟಿಸಿತ್ತು. ಇದರ ವಿರುದ್ಧ ಪುಣೆ ಕೋರ್ಟಿನಲ್ಲಿ ಮಾನಹಾನಿ ಕೇಸು ದಾಖಲಾಗಿ ಅಲ್ಲಿನ ಕೆಳಹಂತದ ನ್ಯಾಯಾಲಯ ಗೋಸ್ವಾಮಿ ಮತ್ತು ಆತನ ಕಂಪೆನಿಗೆ 100 ಕೋಟಿ ರೂ. ದಂಡ ವಿಧಿಸಿ ತೀರ್ಪು ನೀಡಲಾಯಿತು. ಈ ತೀರ್ಪಿನ ವಿರುದ್ಧ ಹೈಕೋಟಿಗೆ ಹೋದಾಗ ಶೇ.20ರಷ್ಟು ದಂಡದ ಮೊತ್ತ ಡೆಪಾಸಿಟ್ ಮಾಡಲು ಸೂಚಿಸಲಾಯಿತು. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋದಾಗ ಹೈಕೋರ್ಟ್ ಹೇಳಿದಂತೆ ಮಾಡಿ ಎಂಬ ಆದೇಶ ಬಂತು. ಹಾಗಿತ್ತು, ಅಂದಿನ ನ್ಯಾಯ ವ್ಯವಸ್ಥೆ.

ನ್ಯಾಷನಲಿಸ್ಟ್ ರಾಜಕೀಯ ಎಷ್ಟು ಲಾಭದಾಯಕವೊ ಅಷ್ಟೇ ಲಾಭದಾಯಕ ನ್ಯಾಷನಲಿಸ್ಟ್ ಜರ್ನಲಿಸಮ್. ಗೋಸ್ವಾಮಿ ಇಂದು ಒಂದು ಸಾವಿರ ಕೋಟಿ ರೂಪಾಯಿ ಗಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಟೌಮ್ಸ್ ನೌನಿಂದ ಹೊರಬಿದ್ದ ಗೋಸ್ವಾಮಿ ಬಿಜೆಪಿಯ ಸಂಸದ ರಾಜೀವ್ ಚಂದ್ರಶೇಖರ್ ಅವರ ಪಾಲು ಬಂಡವಾಳದ ನೆರವಿನೊಂದಿಗೆ ರಿಪಬ್ಲಿಕ್ ಟಿವಿ ಆರಂಭಿಸಿದ್ದು. ಮೂರೇ ವರ್ಷಗಳಲ್ಲಿ ರಿಪಬ್ಲಿಕ್ ಅಗಾಧವಾಗಿ ಬೆಳೆದಿದೆ. ಕಳೆದ ವರ್ಷ ರಾಜಿವ್ ಚಂದ್ರಶೇಖರ್ ಅವರ ಬಂಡವಾಳವನ್ನು ಗೋಸ್ವಾಮಿ ವಾಪಾಸ್ ನೀಡಿದ್ದಾರೆ. ಶೇ.82ರಷ್ಟು ರಿಪಬ್ಲಿಕ್ ಟಿವಿ ಒಡೆಯ ಗೋಸ್ವಾಮಿ ಕಂಪೆನಿಯ ಇಂದಿನ ಒಟ್ಟು ಮೌಲ್ಯ 1,200 ಕೋಟಿ ರೂಪಾಯಿ.

Join Whatsapp