ಕುಟುಕು ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ನಡೆಸಲು ರಾಜ್‌ಕೋಟ್ ನ ಪೊಲೀಸ್ ಠಾಣೆಗೆ ಪ್ರವೇಶಿಸಿದ ಗುಜರಾತಿ ದಿನಪತ್ರಿಕೆಯ ನಾಲ್ವರು ಪತ್ರಕರ್ತರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ನವೆಂಬರ್ 27ರಂದು ರಾಜ್ ಕೋಟ್ ನ ಕೋವಿಡ್-19 ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಐವರು ರೋಗಿಗಳ ಸಾವಿಗೆ ಸಂಬಂಧಿಸಿ ಸ್ಟಿಂಗ್ ಆಪರೇಷನ್ ನಡೆಸಲು ನಾಲ್ವರು ಪತ್ರಕರ್ತರು ಪೊಲೀಸ್ ಠಾಣೆಗೆ ಪ್ರವೇಶಿಸಿದ್ದರು.
ಮೂವರು ವರದಿಗಾರರು ಹಾಗೂ ಛಾಯಗ್ರಾಹಕರು ಸೂಕ್ತ ಅನುಮತಿಯಿಲ್ಲದೆ ನಿಷೇಧಿತ ಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂದು ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಅಗ್ನಿ ದುರಂತಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಲಾಕ್ ಅಪ್ ನಲ್ಲಿ ಬಂಧಿಸಿಡುವ ಬದಲು ಸಿಬ್ಬಂದಿಯ ಕೊಠಡಿಯಲ್ಲಿ ಇರಿಸಿ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂದು ಡಿಸೆಂಬರ್ 2ರಂದು ಭಾವಚಿತ್ರದೊಂದಿಗೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಪತ್ರಕರ್ತರು ಪೊಲೀಸ್ ಠಾಣೆಯ ಕೆಲವು ವಿಡಿಯೋಗಳನ್ನು ಚಿತ್ರೀಕರಿಸಿ, ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.