ಅಹಮದಾಬಾದ್ : ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಸೇರಿ ಎಂಟು ಮಂದಿ ಪೊಲೀಸ್ ಸಿಬ್ಬಂದಿಯ ಭೀಕರ ಹತ್ಯೆ ಮಾಡಿದ ನೆನಪು ಮಾಸುವುದಕ್ಕೆ ಮುನ್ನವೇ, ಗುಜರಾತ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಅವರ ಪತಿ, ಕಾರ್ಮಿಕ ಸಹಿತ ಮೂವರ ಹತ್ಯೆಗೈದ ಆಘಾತಕಾರಿ ಘಟನೆ ವರದಿಯಾಗಿದೆ. ಪೋರಬಂದರು ಜಿಲ್ಲೆಯ ಬರ್ದಾ ವನ್ಯಜೀವಿ ಸಂರಕ್ಷಣಾ ತಾಣದೊಳಗೆ ಗುಜರಾತ್ ಅರಣ್ಯ ಇಲಾಖೆಯ ಮಹಿಳಾ ಗಾರ್ಡ್, ಆಕೆಯ ಪತಿ ಹಾಗೂ ಕೂಲಿ ಕಾರ್ಮಿಕರೊಬ್ಬರು ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಈಗ ಅವರ ಮೃತದೇಹ ಪತ್ತೆಯಾಗಿದೆ. ಹತ್ಯೆಯಾದ ಮಹಿಳಾ ಗಾರ್ಡ್ ಆರು ತಿಂಗಳ ಗರ್ಭಿಣಿಯಾಗಿದ್ದರು.
ರಕ್ಷಿತಾರಣ್ಯದ ಭನವದ್ ವಲಯದಲ್ಲಿ ಗಾರ್ಡ್ ಹೀತಲ್ ಸೋಳಂಕಿ ಶನಿವಾರ ಮಧ್ಯಾಹ್ನ ನಂತರ ಎಂದಿನಂತೆ ಗಸ್ತು ತಿರುಗಲು ತೆರಳಿದ್ದರು. ಅವರೊಂದಿಗೆ ಅವರ ಪತಿ, ಪ್ರಾಥಮಿಕ ಶಾಲಾ ಶಿಕ್ಷಕ ಕೀರ್ತಿ ಸೋಳಂಕಿ ಅವರೂ ತೆರಳಿದ್ದರು. ಜೊತೆಗೆ ನಾಗಜನ್ ಅಗಾಥ್ ಎಂಬವರೂ ಇದ್ದರು.
ಭಾನುವಾರ ಮುಂಜಾನೆಯಾದರೂ, ಅವರು ಮನೆಗೆ ಬಂದಿರಲಿಲ್ಲ. ಫೋನ್ ಸ್ವಿಚ್ ಆಫ್ ಬರುತಿತ್ತು. ಹೀಗಾಗಿ ಕೀರ್ತಿ ಅವರ ತಂದೆ ನಾಪತ್ತೆ ದೂರು ದಾಖಲಿಸಿದ್ದರು. ದಂಪತಿಯ ಕಾರು ಪತ್ತೆಯಾಗಿತ್ತು. ಸುಮಾರು 250 ಪೊಲೀಸರು, ಹೋಂ ಗಾರ್ಡ್, ಮತ್ತಿತರರು ಹುಡುಕಾಟ ನಡೆಸಿದ್ದು, ಕೊನೆಗೆ ಮೃತದೇಹ ಪತ್ತೆಯಾಗಿದೆ. ಮೃತರ ತಲೆ ಮೇಲೆ ಬಲವಾದ ಏಟುಗಳು ಬಿದ್ದಿರುವುದರಿಂದ, ಮೇಲ್ನೋಟಕ್ಕೆ ಇದು ಹತ್ಯೆ ಪ್ರಕರಣ ಎಂಬುದು ಗೊತ್ತಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳನ್ನು ನೋಡುವ ಸಲುವಾಗಿ ಮೂವರು ಅರಣಕ್ಕೆ ತೆರಳಿದ್ದರು ಎಂದು ಸೋಳಂಕಿ ಅವರ ತಂದೆ ತಿಳಿಸಿದ್ದಾರೆ.