ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಯಲ್ಲಿರುವಾಗ ನಿಯಮವನ್ನು ಉಲ್ಲಂಘಿಸಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ತನ್ನ ಆರೋಗ್ಯದ ಬಗ್ಗೆ ಯಾರೂ ಆತಂಕ ವ್ಯಕ್ತಪಡಿಸಬಾರದು ಎಂದು ತನ್ನ ಅಭಿಮಾನಿಗಳಿಗೆ ತಿಳಿಸಲು ಅವರು ಪ್ರಯಾಣ ಮಾಡಿದ್ದಾರೆ ಎಂದು ಹೇಳಲಾದರೂ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಆಸ್ಪತ್ರೆಯಿಂದ ಹೊರಗೆ ಬಂದಿರುವುದನ್ನು ಆರೋಗ್ಯ ತಜ್ಞರು ಮತ್ತು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಮುಖ್ಯ ಸಲಹೆಗಾರ ಹೋಪ್ ಹಿಕ್ಸ್ ಗೆ ಕೋವಿಡ್ ಪೋಸಿಟಿವ್ ಆಗಿದ್ದ ಕಾರಣ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಟ್ರಂಪ್ ಮತ್ತು ಅವರ ಪತ್ನಿಗೆ ಕೋವಿಡ್ ದೃಢಪಟ್ಟಿತ್ತು. ನಂತರ ಟ್ರಂಪ್ ಅವರಿಗೆ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಟ್ರಂಪ್ ಅವರ ಆರೋಗ್ಯದ ಬಗ್ಗೆ ಆತಂಕವಿದೆ ಎಂದು ಶ್ವೇತಭವನದ ಮುಖ್ಯಸ್ಥರು ತಿಳಿಸಿದ್ದರು. ಆದರೆ ಈ ಹೇಳಿಕೆಯನ್ನು ಸ್ವತಃ ಟ್ರಂಪ್ ಅವರೇ ವೀಡಿಯೋ ಸಂದೇಶದಲ್ಲಿ ನಿರಾಕರಿಸಿದ್ದರು. ನಂತರ ಚಿಕಿತ್ಸೆಯಲ್ಲಿರುವಾಗಲೇ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಕಾರಿನಲ್ಲಿ ಪ್ರಯಾಣ ಮಾಡಿದ್ದು ವಿವಾದಾಸ್ಪದವಾಯಿತು.