ಕೋವಿಡ್ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ಪತ್ನಿಯ ಆರೋಗ್ಯ ಸ್ಥಿತಿ ಬಗ್ಗೆ ತನಗೆ ಮಾಹಿತಿ ದೊರೆಯುತ್ತಿಲ್ಲ ಎಂದು ಉತ್ತರ ಪ್ರದೇಶದ ಜಸ್ರಾನಾದ ಬಿಜೆಪಿ ಶಾಸಕ ರಾಮ್‌ಗೋಪಾಲ್ ಪಪ್ಪು ಲೋಧಿ ಅಳಲು ತೋಡಿಕೊಂಡಿರುವ ಘಟನೆ ನಡೆದಿದೆ.
ಶಾಸಕ ಹೇಳಿಕೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಸಕ ಮತ್ತು ಅವರ ಪತ್ನಿ ಸಂಧ್ಯಾ ಲೋಧಿ ಕೊರೊನಾ ಸೋಂಕು ದೃಢಪಟ್ಟಿದ್ದರಿಂದಾಗಿ ಚಿಕಿತ್ಸೆಗಾಗಿ ಫಿರೋಜಾಬಾದ್‌ನ ಓಂ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ಸಂಪುರ್ಣ ಹದಗೆಟ್ಟಿರುವುದರಿಂದಾಗಿ ಸಂಧ್ಯಾ ಲೋಧಿಯವರನ್ನು ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು.
ತನ್ನ ಪತ್ನಿಯನ್ನು ಎಸ್‌ಎನ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಿ ಮೂರು ದಿನಗಳಾಗಿವೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಅಲ್ಲಿ ಆಕೆಗೆ ಸರಿಯಾಗಿ ಆಹಾರ ಕೂಡ ದೊರೆಯುತ್ತಿಲ್ಲ. ಇಂತಹ ಸ್ಥಿತಿ ಬಡವರಿಗೆ ಎಂದಿಗೂ ಬರದಿರಲಿ ಎಂದು ಅವರು ವೀಡಿಯೊದಲ್ಲಿ ಅವಲತ್ತುಕೊಂಡಿದ್ದಾರೆ.
ಶಾಸಕರಾಗಿಯೂ ಕೂಡ ಪತ್ನಿ ಸಂಧ್ಯಾ ಲೋಧಿ ಅವರಿಗೆ ಆಗ್ರಾದ ಆಸ್ಪತ್ರೆಯಲ್ಲಿ ಬೆಡ್ ದೊರಕಲು ಹರಸಾಹಸ ಪಡಬೇಕಾಯಿತು. ಆಗ್ರಾದ ಜಿಲ್ಲಾಧಿಕಾರಿ ಬೆಡ್ ಕೊಡಿಸುವ ಭರವಸೆ ನೀಡಿದ್ದರೂ ಸಂಧ್ಯಾ ಲೋಧಿಯವರನ್ನು ಬೆಡ್ ಲಭ್ಯವಿಲ್ಲ ಎಂದು ಹಿಂದಿರುಗುವಂತೆ ಹೇಳಲಾಗಿತ್ತು. ನಾನೇ ಈ ರೀತಿಯ ಪಾಡು ಪಡಬೇಕಾದರೆ ಬಡವರ ಗತಿ ಏನು, ಬಡವರಿಗೆ ಎಂದಿಗೂ ಈ ಸ್ಥಿತಿ ಬರಬಾರದು ಎಂದು ಶಾಸಕ ರಾಮ್‌ಗೋಪಾಲ್ ಪಪ್ಪು ಲೋಧಿ ವೀಡಿಯೋದಲ್ಲಿ ಹೆಳಿದ್ದಾರೆ.