Home ರಾಜ್ಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದವನು ಬಿಜೆಪಿ ಕಾರ್ಯಕರ್ತ‌ ಎಂಬುದು ಪುರಾವೆಸಹಿತ ಸಾಬೀತು; ಸಿದ್ದರಾಮಯ್ಯ

ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದವನು ಬಿಜೆಪಿ ಕಾರ್ಯಕರ್ತ‌ ಎಂಬುದು ಪುರಾವೆಸಹಿತ ಸಾಬೀತು; ಸಿದ್ದರಾಮಯ್ಯ

ರೈತರ ಪ್ರತಿಭಟನೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದವನು ಬಿಜೆಪಿ ಕಾರ್ಯಕರ್ತ‌ ಎಂಬುದು ಪುರಾವೆಸಹಿತ ಸಾಬೀತಾಗಿದೆ. ಇಂತಹ ಬಿಜೆಪಿ ರೈತರಿಗೆ ಭಯೋತ್ಪಾದಕರ ಬೆಂಬಲ ಇದೆಯೆಂದು ಹೇಳುತ್ತಿರುವುದು ನಾಚಿಕೆಗೇಡು. ರೈತ ಚಳವಳಿಯಲ್ಲಿ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಸರ್ಕಾರದ ಬಳಿ ಇದ್ದರೆ ಅವರನ್ನು ಬಂಧಿಸಬೇಕಿತ್ತಲ್ಲವೇ? ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕಳೆದ ಎರಡು ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯಲ್ಲಿ ನೂರಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡರೂ ರೈತ ವಿರೋಧಿ‌ ಕಾನೂನುಗಳನ್ನು ವಾಪಸು‌ ಪಡೆಯಲು ನಿರಾಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಪ್ರತಿಷ್ಠೆಯೇ ಮುಖ್ಯವಾಗಿದೆ. ಅವರ 56 ಇಂಚಿನ ಎದೆಯೊಳಗೆ ಬಡವರಿಗಾಗಿ ಮಿಡಿಯುವ ಹೃದಯವೇ ಇಲ್ಲ ಎಂದು ಕುಟುಕಿದ್ದಾರೆ.
ಕೇಂದ್ರ ಸರ್ಕಾರಕ್ಕೆ ರೈತರ ಸಮಸ್ಯೆಯನ್ನು ಬಗೆಹರಿಸುವ ನೈಜ ಕಾಳಜಿ ಇದ್ದಿದ್ದರೆ ಹನ್ನೊಂದು ಸುತ್ತು ಮಾತುಕತೆ ನಡೆಸುವ ಅಗತ್ಯ ಬೀಳುತ್ತಿತ್ತಾ? ಸರ್ಕಾರಕ್ಕೆ ರೈತರ ಹಿತವೇ ಮುಖ್ಯವಾಗಿದ್ದರೆ ಕಾಯ್ದೆ ವಾಪಾಸು ಪಡೆಯಬೇಕಿತ್ತಲ್ಲವೇ? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಬಂಡವಾಳಶಾಹಿಗಳ ಗುಲಾಮಗಿರಿ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುತ್ತೇವೆ ಎಂದು ಅದಾನಿ, ಅಂಬಾನಿಗೆ ಮಾತು ಕೊಟ್ಟಿದ್ದಾರೆ, ಹೀಗಾಗಿ ರೈತರು ಎಷ್ಟೇ ಪ್ರತಿಭಟನೆ ನಡೆಸಿದರೂ ಅವುಗಳನ್ನು ವಾಪಾಸು ಪಡೆಯುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Join Whatsapp
Exit mobile version