ದೆಹಲಿಯ ಕೆಂಪು ಕೋಟೆಗೆ ನುಗ್ಗಿದವರು ರೈತರಲ್ಲ, ಭಯೋತ್ಪಾದಕರು ಎಂಬ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಇದು ಹೊಟ್ಟೆಗೆ ಅನ್ನ ತಿನ್ನುವ ಜನರು ಆಡುವ ಮಾತುಗಳೇ? ಕೃಷಿ ಸಚಿವರಿಗೆ ನೆಟ್ಟಗೆ ಮಾತನಾಡಲೂ ಬರುವುದಿಲ್ಲ. ಇಂಥವರನ್ನು ಯಡಿಯೂರಪ್ಪ ತಮ್ಮ ಕ್ಯಾಬಿನೆಟ್ ನಲ್ಲಿ ಇಟ್ಟುಕೊಂಡಿರುವುದು ದುರಂತ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಕೊಪ್ಪಳದಲ್ಲಿ ಇಂದು 72 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ರೈತರು ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ಘಟನೆಯ ಹಿಂದೆ ರೈತರ ವೇಷದಲ್ಲಿ ಕಾಂಗ್ರೆಸ್ ಮತ್ತು ಪಾಕ್ ಬೆಂಬಲಿತ ಭಯೋತ್ಪಾದಕರು ಇದ್ದಾರೆ. ಭಾರತೀಯ ಧ್ವಜ ಮತ್ತು ಕೆಂಪು ಕೋಟೆಗೆ ವಿಶೇಷ ಸ್ಥಾನಮಾನ ಇದ್ದು, ಸಾಂವಿಧಾನಿಕ ಪಾವಿತ್ರ್ಯವನ್ನು ಹೊಂದಿದೆ. ವಿಶೇಷವಾಗಿ ಗಣರಾಜ್ಯೋತ್ಸವದಂದು ಅವಮಾನಿಸುವುದು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿದೆ. ಇದು ಅತ್ಯಂತ ಖಂಡನೀಯ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದರು.
ಇದಕ್ಕೆ ತೀಕ್ಷ್ಣವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಕೋಡಿಹಳ್ಳಿ, ರೈತರನ್ನೇ ದೇಶದ್ರೋಹಿಗಳು ಎಂದು ಕರೆಯುವ ಕಾಲ ಬಂದಿದೆ. ರೈತರಿಗೆ ಪಾಕಿಸ್ತಾನದ ನಂಟು ಇದೆ ಎಂಬ ಆರೋಪವನ್ನೂ ವಿರೋಧಿಗಳು ಮಾಡುತ್ತಿದ್ದಾರೆ. ರೈತರು ಎಲ್ಲರಿಗೂ ಅನ್ನ ಹಾಕಿದ್ದಕ್ಕೆ ಸಿಗುತ್ತಿರುವ ಪ್ರತಿಫಲ, ರೈತರು ಹೋರಾಟ ಮಾಡಿದರೆ ಅಂಥವರ ವಿರುದ್ಧ ಹರಕಲು ಬಾಯಿ ಸಚಿವರನ್ನು ಮುಂದೆ ಬಿಡುತ್ತಾರೆ. ಸಚಿವರು ಬೇಕಾ ಬಿಟ್ಟಿ ಮಾತನಾಡಿದರೆ ಯಡಿಯೂರಪ್ಪನವರ ಮರ್ಯಾದೆ ಹೋಗುತ್ತದೆ ಎಂದು ತಿರುಗೇಟು ನೀಡಿದರು.
ಮೋದಿಯವರ ಸರ್ವಾಧಿಕಾರಿಯ ಧೋರಣೆ ಹೆಚ್ಚು ದಿನ ನಡೆಯುವುದಿಲ್ಲ. ಈಸ್ಟ್ ಕಂಪೆನಿಯಿಂದ ದೇಶವನ್ನು ವಾಪಾಸ್ ಪಡೆಯಲು ಬಹಳ ಹೋರಾಟ ನಡೆದಿದೆ. ಈಗ ದೇಶವನ್ನು ಮೋದಿ ಕಾರ್ಪೋರೇಟ್ ಕಂಪೆನಿಗಳಿಗೆ ವಾಪಾಸ್ ಕೊಡಲು ಹೊರಟಿದ್ದಾರೆ. ಇದರ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ನಡೆಯುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.