ಕರ್ನಾಟಕ ಬಂದ್ | ರಾಜ್ಯಾದ್ಯಂತ ಕರವೇ ಪ್ರತಿಭಟನೆ ಯಶಸ್ವಿ : ಕರವೇ ನಾರಾಯಣ ಗೌಡ

Prasthutha|

ಬೆಂಗಳೂರು : “ಮರಾಠಾ ಅಭಿವೃದ್ಧಿ ಪ್ರಾಧಿಕಾರ” ರಚನೆಯ ಹೆಸರಿನಲ್ಲಿ ಹೀನ ರೀತಿಯ ವೋಟ್ ಬ್ಯಾಂಕ್ ರಾಜಕಾರಣ ನಡೆಸಿ, ಕನ್ನಡದ ಜನತೆಯನ್ನು ಒಡೆದು ಆಳುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಪ್ರತಿಭಟನೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.

- Advertisement -

ರಾಜ್ಯದ ನಾನಾ ಭಾಗಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟವನ್ನು ಬಿ.ಎಸ್.ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಪೊಲೀಸ್ ಬಲವನ್ನು ದುರುಪಯೋಗಪಡಿಸಿಕೊಂಡು ಹತ್ತಿಕ್ಕುವ ಪ್ರಯತ್ನ ನಡೆಸಿತು. ಆದರೂ ಸಹ ಎಲ್ಲ ಭಾಗಗಳಲ್ಲಿ ನಮ್ಮ ಕಾರ್ಯಕರ್ತರು ಪೊಲೀಸರ ಬೆದರಿಕೆಗೆ ಸೊಪ್ಪು ಹಾಕದೆ ಪ್ರತಿಭಟನೆ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಮರಾಠ ಪ್ರಾಧಿಕಾರದ ಹೆಸರಿನಲ್ಲಿ ರಾಜ್ಯ ಸರ್ಕಾರ ಮಾಡುತ್ತಿರುವ ಕೀಳು ರಾಜಕಾರಣದ ಕುರಿತು ಜನಜಾಗೃತಿ ಮೂಡಿಸುವ ಕೆಲಸ ಇಂದಿನ ಪ್ರತಿಭಟನೆಗಳಿಂದ ಆಗಿದ್ದು, ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಗಳು ಮತ್ತು ಅವರ ಸಂಪುಟ‌ ಸದಸ್ಯರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

- Advertisement -

ಕರ್ನಾಟಕ ಸರ್ಕಾರ ನೌಕರರಿಗೆ ಸಂಬಳ ಕೊಡುವುದಕ್ಕೆ ಹಣವಿಲ್ಲದೆ ಗೋಳಾಡುತ್ತಿದೆ.‌ ಕರ್ನಾಟಕಕ್ಕೆ ಒಕ್ಕೂಟ‌ ಸರ್ಕಾರದಿಂದ‌ ಬರಬೇಕಾದ ನೆರೆಪರಿಹಾರ ತರುವ ಯೋಗ್ಯತೆ ಇವರಿಗಿಲ್ಲ. ಜಿಎಸ್ ಟಿ ಬಾಕಿ‌ಹಣ ಕೊಡಿ ಎಂದು ಗಟ್ಟಿ ಧ್ವನಿಯಲ್ಲಿ ಕೇಳುವ ಶಕ್ತಿ ಇವರಿಗಿಲ್ಲ.‌ ಪ್ರಾಧಿಕಾರಗಳ ಹೆಸರಲ್ಲಿ ಕೀಳು ರಾಜಕಾರಣ ನಡೆಸುತ್ತ ಯಡಿಯೂರಪ್ಪ ನಗೆಪಾಟಲಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರ ನಿಗಮ-ಪ್ರಾಧಿಕಾರದ ಓಟ್ ಬ್ಯಾಂಕ್ ರಾಜಕಾರಣ ಕೈಬಿಟ್ಟು ಕೇಂದ್ರ ಸರ್ಕಾರದಿಂದ‌ ಬರಬೇಕಿರುವ ಅನುದಾನಗಳನ್ನು ತರುವೆಡೆಗೆ ಗಮನ ಹರಿಸಬೇಕು. ಹೈಕಮಾಂಡ್ ಗುಲಾಮಗಿರಿ ಮಾಡದೆ ಜನರ ಪರವಾಗಿ ನಿಲ್ಲುವ ಧೈರ್ಯವಿಲ್ಲದೇ ಹೋದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಅವರು ತಿಳಿಸಿದ್ದಾರೆ.

Join Whatsapp