ಬೆಂಗಳೂರು: ಕಂಪನಿಯ ವೆಬ್ ಸೈಟ್ ಡೇಟಾ ಅಳಿಸುವಂತೆ ಮಾಡಿ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದ ವ್ಯಕ್ತಿಯನ್ನು ವಾಮ ಮಾರ್ಗದಿಂದ ಕರೆಯಿಸಿ ಅಪಹರಿಸಿ ಬೆದರಿಸಿ ಸುಲಿಗೆ ಮಾಡಿದ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಅಪಹರಣಗೊಂಡಿದ್ದ ಅಜಯ್ ಪಾಂಡೆ ನೀಡಿದ ದೂರಿನ ಮೇರೆಗೆ ಚೈತನ್ಯ ಶರ್ಮಾ, ವೈಭವ್ ಹಾಗೂ ಅಮಿತ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರ ಪೈಕಿ ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ.
ಬಾಣಸವಾಡಿಯಲ್ಲಿ ಲ್ಯಾಂಪ್ಸ್ ಕಾರ್ಟ್ ಕಂಪನಿಯ ಮಾಲೀಕನಾಗಿದ್ದ ಚೈತನ್ಯ ಅವರು ಉದ್ಯಮಕ್ಕೆ ವೆಬ್ ಸೈಟ್ ಸಿದ್ಧಪಡಿಸುವಂತೆ ಅಜಯ್ ಪಾಂಡೆಗೆ ಸೂಚಿಸಿದ್ದ. ಅದರಂತೆ ಪಾಂಡೆ ವೆಬ್ ಡಿಸೈನ್ ಮಾಡಿಕೊಟ್ಟಿದ್ದು, ಒಂದು ವರ್ಷದ ಬಳಿಕ ನವೀಕರಣ ಹಾಗೂ ವೆಬ್ ನಿರ್ವಹಣೆಗಾಗಿ ಚೈತನ್ಯಗೆ ಹೆಚ್ಚುವರಿ ಹಣ ಕೇಳಿದ್ದ. ಆದರೆ, ಹಣ ನೀಡದ ಚೈತನ್ಯ ವಿರುದ್ಧ ಅಸಮಾನಧಾನಗೊಂಡ ಪಾಂಡೆ ವೆಬ್ ಸೈಟ್ ನಲ್ಲಿರುವ ಡೇಟಾ ಅಳಿಸಿ ಎಲ್ಲವೂ ಶಟ್ ಡೌನ್ ಆಗುವಂತೆ ಮಾಡಿದ್ದ. ಇದರಿಂದ ವ್ಯವಹಾರದಲ್ಲಿ ಲಕ್ಷಾಂತರ ರೂ ನಷ್ಟವಾಗಿದೆ ಎಂದು ಚೈತ್ಯನ ಆಕ್ರೋಶ ವ್ಯಕ್ತಪಡಿಸಿದ್ದ.
ಅಲ್ಲದೇ ಒಂದು ವರ್ಷಗಳಿಂದ ಪಾಂಡೆ ತನ್ನಿಂದ ಅಂತರ ಕಾಯ್ದು ಕೊಂಡಿರುವುದು ಮತ್ತಷ್ಟು ಆಕ್ರೋಶಗೊಳ್ಳುವಂತೆ ಮಾಡಿತ್ತು.
ಇದರಿಂದ ವಾಮಮಾರ್ಗದಿಂದ ಪಾಂಡೆಯನ್ನು ಬಂಧಿತ ಆರೋಪಿಗಳ ಜೊತೆ ಸಂಪರ್ಕಿಸಿ ಕಳೆದ ಏ. 23ರಂದು ಯಲಹಂಕದ ಬಿಬಿ ರಸ್ತೆಗೆ ಕರೆಯಿಸಿಕೊಂಡಿದ್ದಾರೆ. ನಷ್ಟದ ಹಣ ವಸೂಲಿಗೆ ಮಾಲಿಕ ಚೈತನ್ಯ ಅಪಹರಣ ದಾರಿ ಕಂಡುಕೊಂಡಿದ್ದ. ಆರೋಪಿಗಳು ಪಾಂಡೆಯನ್ನು ಕಾರಿನಲ್ಲಿ ಅಪಹರಣ ಮಾಡಿ ಹಣ ನೀಡುವಂತೆ ಬೆದರಿಸಿದ್ದರು.
ಹೆದರಿದ ಪಾಂಡೆ ಪರಿಚಿತ ವ್ಯಕ್ತಿಯಿಂದ 6.35 ಲಕ್ಷ ವರ್ಗಾಯಿಸಿಕೊಂಡು ಅದನ್ನು ನೀಡಿ ಬಿಡಿಸಿಕೊಂಡು ಪೊಲೀಸ್ ಠಾಣೆಗೆ ತೆರಳಿ ಪಾಂಡೆ ನನ್ನನ್ನು ಅಪಹರಿಸಿ, ಪಿಸ್ತೂಲ್ ತೋರಿಸಿ, ಬೆದರಿಸಿ ಹಣ ಪಡೆದಿದ್ದಾರೆ ಎಂದು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ಪಿಸ್ತೂಲ್ ಬಳಕೆಯಾಗಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.