ಏಳು-ಬೀಳುಗಳ ನಡುವೆ ಸ್ವಾತಂತ್ರ್ಯ

Prasthutha|

– ಇಲ್ಯಾಸ್ ಮುಹಮ್ಮದ್

- Advertisement -

ಗಲಭೆಕೋರರ ಬಟ್ಟೆ ನೋಡಿದರೆ ಅವರು ಯಾರೆಂದು ಗುರುತಿಸಬಹುದು – ಪ್ರಧಾನಿ ನರೇಂದ್ರ ಮೋದಿಯ ಬಾಯಲ್ಲಿ ಉದುರಿದ ಮಾತುಗಳಿವು. ಸಿಎಎ, ಎನ್‌ ಆರ್‌ಸಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸರು ಮತ್ತು ಸಂಘಪರಿವಾರದ ದುಷ್ಕರ್ಮಿಗಳು ಸೇರಿ ನಡೆಸಿದ ಗಲಭೆ, ಪ್ರತಿಭಟನಕಾರರ ನಡೆದ ಮೇಲೆ ಭೀಕರ ಆಕ್ರಮಣಗಳನ್ನು ಉದ್ದೇಶಿಸಿ ಆಡಿದ ಮಾತುಗಳಿವು. ಮೋದಿ ಹೇಳಿದ್ದು ಪೊಲೀಸರನ್ನೋ ಸಂಘಿಗಳನ್ನೋ ಅಲ್ಲ. ಅಲ್ಲಿದ್ದ ಪ್ರತಿಭಟನಕಾರರೇ ಮೋದಿಯ ಟಾರ್ಗೆಟ್. ಮುಸ್ಲಿಮರೇ ಹೆಚ್ಚಾಗಿದ್ದ ಪ್ರತಿಭಟನಕಾರರು ಗಲಭೆಕೋರರು ಎಂದು ಹೇಳುವುದು ಭಾರತದ ಪ್ರಧಾನಿಯ ಉದ್ದೇಶವಾಗಿತ್ತು.

ದೇಶದ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯ ಮನಸ್ಸಿನಲ್ಲಿ ಇರುವ ದ್ವೇಷ, ಪೂರ್ವಾಗ್ರಹವು ಭಾರತದಲ್ಲಿ ನಡೆಯುವ ಎಲ್ಲಾ ಹಿಂಸಾಕೃತ್ಯ, ಧ್ವಂಸ, ಗಲಭೆ ನಾಶಗಳಿಗೆ ಮಾರ್ಗದರ್ಶನವಾಗಿದೆ. ವಿಶ್ವದ ರಾಷ್ಟ್ರಗಳಲ್ಲಿ ಪ್ರಧಾನಿ ಅಥವಾ ಅಧ್ಯಕ್ಷರ ಹುದ್ದೆಗಳಿಗೆ ಅಲ್ಲಿನ ಜನರು ಅರ್ಹರನ್ನು ಆಯ್ಕೆ ಮಾಡುತ್ತಾರೆ. ದೂರದೃಷ್ಟಿ, ಸರ್ವರನ್ನು ಸಮಾನತೆಯಿಂದ ನೋಡುವ ಪ್ರಭುದ್ಧತೆ, ವಿಶಾಲ ಮನೋಭಾವನೆ ಹಾಗೂ ವೈಚಾರಿಕ ಬುದ್ಧಿಮತ್ತೆ ಇರುವವರನ್ನು ಅವರು ಆಯ್ಕೆ ಮಾಡುತ್ತಾರೆ. ಆದರೆ ಭಾರತ ಮತ್ತು ಅಮೆರಿಕದಲ್ಲಿ ಇದು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ.

- Advertisement -

ಭಾರತ  ದೇಶವನ್ನು ಸ್ವತಂತ್ರ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ರಾಷ್ಟ್ರವೆನ್ನುವುದು ಒಂದು ಘೋಷಣೆಗಷ್ಟೇ ಸೀಮಿತವಾದಂತಾಗಿದೆ. ಇಲ್ಲಿ ಶತಮಾನಗಳಿಂದ ತುಳಿಯಲ್ಪಟ್ಟ ಪರಿಶಿಷ್ಟ ಜಾತಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮ್ ಮತ್ತು ಕ್ರೈಸ್ತರನ್ನು ಅತ್ಯಂತ ಹೀನಾಯವಾಗಿ ದಮನಿಸಲಾಗುತ್ತಿದೆ. ಗುಜರಾತಿನ ಮೆಹಸಾನ ಎಂಬಲ್ಲಿ 20ವರ್ಷದ ಪರಿಶಿಷ್ಟ ಜಾತಿಯ ಯುವಕನನ್ನು ಆತ ಹುರಿಮೀಸೆ ಇರಿಸಿದ್ದಕ್ಕಾಗಿ ಥಳಿಸಿ ಮೀಸೆ ಬೋಳಿಸಲಾಯಿತು. ಇಂತದ್ದೇ ಘಟನೆ ಗುಜರಾತಿನ ಲಿಂಬೋದರಿ ಎಂಬ ಹಳ್ಳಿಯಲ್ಲೂ ನಡೆಯಿತು. 17 ವರ್ಷದ ಚಿಗುರು ಮೀಸೆಯ ಯುವಕನಿಗೆ ಚೂರಿಯಿಂದ ಇರಿಯಲಾಗಿತ್ತು. ಗುಜರಾತಿನ ಲಿಂಬಿ ಎಂಬ ಗ್ರಾಮದಲ್ಲಿ ಪ್ರದೀಪ್ ಎಂಬ ಪರಿಶಿಷ್ಟ ಜಾತಿಯ 21 ವರ್ಷದ ಯುವಕನನ್ನು ಆತ ಕುದುರೆಯನ್ನು ಹೊಂದಿದ್ದ ಎಂಬ ಕಾರಣಕ್ಕೆ ಮೇಲ್ಜಾತಿಗಳ ಜನರು ಇರಿದು ಕೊಂದಿದ್ದರು. ಉತ್ತರಾಖಾಂಡದ ಕೋರ್ಟ ಎಂಬಲ್ಲಿ 21 ವರ್ಷದ ದಲಿತ ಯುವಕ ಜಿತೇಂದ್ರ ಎಂಬವರನ್ನು ಆತ ಮದುವೆ ಸಮಾರಂಭದಲ್ಲಿ ಕುರ್ಚಿಯಲ್ಲಿ ಕುಳಿತು ಮೇಲ್ಜಾತಿಯವರ ಮುಂದೆ ಊಟ ಮಾಡಿದನೆಂದು ಥಳಿಸಿ ಕೊಂದಿದ್ದರು. ಭಾರತದ ಪ್ರತಿ ರಾಜ್ಯದ ಪ್ರತಿ ನಗರ ಮತ್ತು ಹಳ್ಳಿಗಳಲ್ಲಿ ಈ ಸ್ಥಿತಿ ಇನ್ನೂ ಜೀವಂತವಾಗಿದೆ. ಪರಿಶಿಷ್ಟ ಜಾತಿ, ಆದಿವಾಸಿ ಜನಾಂಗಗಳ ಮೇಲೆ ದೌರ್ಜನ್ಯ, ಅತ್ಯಾಚಾರ, ಬಹಿಷ್ಕಾರ, ಅಸ್ಪಶ್ಯತೆ ಇನ್ನೂ ತಾಂಡವವಾಡುತ್ತಿದೆ. ಈ ದೇಶದಲ್ಲಿ ಸ್ವಾತಂತ್ರ್ಯ ಯಾರಿಗೆ, ಎಲ್ಲಿ ಸಿಕ್ಕಿದೆ? ಮೇಲ್ಜಾತಿಯ ಜನರ ಕಾಲ ಕೆಳಗೆ ‘ಕೆಳಜಾತಿ’  ಎಂದು ಕರೆಸಿಕೊಳ್ಳುವ ಜನ ಸ್ವಾತಂತ್ರ್ಯವಿಲ್ಲದೆ ನರಳುತ್ತಿದ್ದಾರೆ.

ಕಾಶ್ಮೀರ ಭಾರತದ ರಾಜ್ಯ ಎನ್ನುವುದಕ್ಕೆ ಇದ್ದ ಏಕೈಕ ಪುರಾವೆ ಆರ್ಟಿಕಲ್ 370. ಭಾರತ ಸ್ವತಂತ್ರಗೊಂಡಾಗ ಕಾಶ್ಮೀರ ಇನ್ನೂ ಭಾರತಕ್ಕೆ ಸೇರಿರಲಿಲ್ಲ. ನಂತರ ನಡೆದ ಮಾತುಕತೆಯ ಪ್ರಕಾರ ಅಂದಿನ ಕಾಶ್ಮೀರದ ರಾಜ ಹರಿಸಿಂಗ್ ಭಾರತ ಸರಕಾರದೊಂದಿಗೆ ಮಾಡಿದ ಒಪ್ಪಂದದ ಪ್ರಕಾರ ಸಂವಿಧಾನದಲ್ಲಿ 370ನೇ ವಿಧಿಯ ಸೇರ್ಪಡೆಯೊಂದಿಗೆ ಕಾಶ್ಮೀರ ಭಾರತದೊಂದಿಗೆ ಇರಲು ಸಮ್ಮತಿಸಲಾಯಿತು. 370ನೇ ವಿಧಿ ಎಂದರೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಎಂದರ್ಥ. 370ನೇ ವಿಧಿ ಇಲ್ಲದಿದ್ದರೆ ಕಾಶ್ಮೀರ ಭಾರತದೊಂದಿಗೆ ಇರಲು ಸಾಧ್ಯವೇ ಇರಲಿಲ್ಲ. 370ನೇ ವಿಧಿಯ ರದ್ದತಿಯ ಮೂಲಕ ಕೇಂದ್ರ ಸರಕಾರವು ಕಾಶ್ಮೀರದ ನೆಲಕ್ಕೆ ಮತ್ತು ಜನರಿಗೆ ಮೋಸ ಮಾಡಿದೆ. ಅಂತಾರಾಷ್ಟ್ರೀಯ ನೀತಿ ನಿಯಮಗಳನ್ನು ಉಲ್ಲಂಘಿಸಿದೆ.

ಕಳೆದ ಒಂದು ವರ್ಷದಿಂದ ಕಾಶ್ಮೀರವು ಅಂತ್ಯವಿಲ್ಲದ ಲಾಕ್‌ಡೌನ್‌ನಲ್ಲಿ ನರಳುತ್ತಿದೆ. ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಯುವಕರನ್ನು 370ನೇ ವಿಧಿಯ ರದ್ದತಿ ನಂತರ ಜೈಲಿಗೆ ತಳ್ಳಲಾಗಿದೆ. ಕಾಶ್ಮೀರದ 11 ಮಂದಿಗೆ ಒಬ್ಬನಂತೆ ಸೈನಿಕರನ್ನು ನಿಯೋಜಿಸಲಾಗಿದ್ದು, 9 ಲಕ್ಷಕ್ಕೂ ಹೆಚ್ಚು ಸೈನಿಕರ ಮೂಲಕ ಕಾಶ್ಮೀರವನ್ನು ಬಂದೂಕಿನ ಮನೆಯಲ್ಲಿ ಕಟ್ಟಿಹಾಕಲಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿರುವ ಪ್ರದೇಶ ಎಂಬ ಕುಖ್ಯಾತಿಯನ್ನು ಕೇಂದ್ರ ಸರಕಾರ ಹೊತ್ತುಕೊಂಡಿದೆ. 8000ಕ್ಕೂ ಹೆಚ್ಚು ಕಾಶ್ಮೀರಿಗಳು ನಾಪತ್ತೆಯಾಗಿದ್ದಾರೆ. 6000ಕ್ಕೂ ಹೆಚ್ಚು ಅನಾಮಧೇಯ ಗೋರಿಗಳು ಪತ್ತೆಯಾಗಿವೆ. ಸಾವಿರಾರು ಜನರನ್ನು ಕೊಲ್ಲಲಾಗಿದೆ. ಗನ್‌ ಗಳ ಮೂಲಕ 6600ಕ್ಕೂ ಹೆಚ್ಚು ಜನರ ಕಣ್ಣುಗಳನ್ನು ನಾಶಗೊಳಿಸಿದೆ ಮತ್ತು ತೀವ್ರ ಗಾಯಗೊಳಿಸಿದೆ. 2,17,000 ಮಕ್ಕಳು ತಂದೆಯಂದಿರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಗಂಡಸರ ಅಕ್ರಮ ಬಂಧನ, ಚಿತ್ರಹಿಂಸೆ, ಮಹಿಳೆಯರ ಮೇಲೆ ಅತ್ಯಾಚಾರ ಕಾಶ್ಮೀರದಲ್ಲಿ ಸಾಮಾನ್ಯವಾಗಿದೆ. ಕಾಶ್ಮೀರದಲ್ಲಿ ಸೈನಿಕರ ನಿಯೋಜನೆಯೇ ಭಾರತದ ರಕ್ಷಣಾ ಬಜೆಟ್‌ ನಲ್ಲಿ ಬಹುದೊಡ್ಡ ಭಾಗ.  370ನೇ ವಿಧಿ ರದ್ದತಿ ಕಾಶ್ಮೀರದ ನಾಗರಿಕರ ಸ್ವಾತಂತ್ರದ ಹರಣವಾಗಿದೆ. ಅಲ್ಲಿ ಇಂದಿಗೂ ಇಂಟರ್ನೆಟ್ ಸಂಪರ್ಕವಿಲ್ಲ. ಕೇವಲ 2ಜಿ ಜಾಲವಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರು ಕೂಡ ಇಂತಹ ದೌರ್ಜನ್ಯ ಹತ್ಯೆ ನಡೆಸಿಲ್ಲ. ಆದರೆ ಅಧಿಕಾರದಲ್ಲಿರುವ ಫ್ಯಾಶಿಸ್ಟರಿಗೆ ಮಾನವ ಜೀವಗಳ ಹಿಂಸೆ ಮತ್ತು ಹತ್ಯೆಯೇ ಆಡಳಿತದ ಅಸ್ತ್ರವಾಗಿದೆ ಎಂದರೆ ಸ್ವಾತಂತ್ರ್ಯ ಎಂಬುದು ಯಾರಿಗೆ ಬಂದಿದೆ ಎಂಬುದು ಬಹಳ ಸ್ಪಷ್ಟವಾಗಿ ಅರ್ಥವಾಗುತ್ತದೆ.

ರಾಮನು ಬಾಬರಿ ಮಸ್ಜಿದ್ ಸ್ಥಳದಲ್ಲಿ ಹುಟ್ಟಿದ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ. ಮಂದಿರವನ್ನು ಕೆಡವಿ ಬಾಬರಿ ಮಸ್ಜಿದ್ ನಿರ್ಮಾಣ ಮಾಡಿರುವುದಕ್ಕೆ ಯಾವುದೇ ಸಾಕ್ಷವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಹೇಳುತ್ತಿದೆ. 1949ರಲ್ಲಿ ಬಾಬರಿ ಮಸ್ಜಿದ್‌ ನಲ್ಲಿ ವಿಗ್ರಹಗಳನ್ನು ಅಕ್ರಮವಾಗಿ ಇರಿಸಲಾಗಿದೆ ಎಂದೂ ಮಸ್ಜಿದ್ ಕೆಡವಿದ್ದು ಕ್ರಿಮಿನಲ್ ಕೃತ್ಯ ಎಂದೂ ಸ್ಪಷ್ಟವಾಗಿ ಹೇಳಿದೆ. ಆದರೆ, ಅಂತಿಮವಾಗಿ ಸುಪ್ರೀಂ ಕೋರ್ಟ್ ಬಾಬರಿ ಮಸ್ಜಿದ್ ಸ್ಥಳವನ್ನು ರಾಮಮಂದಿರ ನಿರ್ಮಾಣಕ್ಕೆ ಬಿಟ್ಟುಕೊಡಬೇಕೆಂದು ನೀಡಿದ ತೀರ್ಪು ದೇಶಕ್ಕೆ ಬಗೆದ ಐತಿಹಾಸಿಕ ದ್ರೋಹ ಮತ್ತು ಮಹಾ ಅನ್ಯಾಯವಾಗಿದೆ. ಯಾವುದೇ ಲಾಜಿಕ್ ಅಥವಾ ಫಿಲಾಸಫಿಯು ಈ ತೀರ್ಪನ್ನು ನ್ಯಾಯವೆಂದು ಒಪ್ಪದು.

1992 ಡಿಸೆಂಬರ್ 6ರಂದು ಸಂಘಿ ಭಯೋತ್ಪಾದಕರು ಮಸ್ಜಿದನ್ನು ಧ್ವಂಸಗೊಳಿಸಿದರು. 2019ರಲ್ಲಿ ಮಸ್ಜಿದ್ ಕುರಿತು ನೀಡಿದ ತೀರ್ಪು ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಧ್ವಂಸ ಮಾಡಿತು. ಆಗಸ್ಟ್ 5ರಂದು ಮೋದಿ ನೇತೃತ್ವದಲ್ಲಿ ನಡೆದ ಭೂಮಿಪೂಜೆಯು ದೇಶಕ್ಕೆ ಬಗೆದ ಕಳಂಕವಾಗಿದೆ. ಸಂಘಪರಿವಾರವು ತನ್ನ ಅಜೆಂಡವಾಗಿದ್ದ ಮಂದಿರ ನಿರ್ಮಾಣದ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೇರಿಸುವ ತಂತ್ರವಾಗಿ ಬಳಸಿತು. ಬಿಜೆಪಿ ಅದನ್ನೇ ತನ್ನ ಮುಂಚೂಣಿಯ ಪ್ರಣಾಳಿಕೆಯಾಗಿಸಿ ಅಧಿಕಾರಕ್ಕೇರಿತು. ಕಾಂಗ್ರೆಸ್ ಪಕ್ಷ ಇನ್ನೂ ಒಂದು ಹೆಜ್ಜೆ ಮುಂದೆ ಇರಿಸಿ ತಾನೇ ರಾಮಮಂದಿರ ನಿರ್ಮಾಣದ ರೂವಾರಿ ಎನ್ನುತ್ತಿದೆ. ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಕಮಲ್ ನಾಥ್, ಡಿಕೆಶಿ ಮುಂತಾದವರು ಬಹಿರಂಗವಾಗಿ ಇದನ್ನು ಘೋಷಿಸಿದ್ದಾರೆ. 1949ರಲ್ಲಿ ಬಾಬರಿ ಮಸ್ಜಿದ್‌ ನಲ್ಲಿ ಅಕ್ರಮವಾಗಿ ವಿಗ್ರಹಗಳನ್ನು ಇರಿಸಿದ ನಂತರ ಅದನ್ನು ಮುಚ್ಚುವ ಪ್ರಕ್ರಿಯೆಯಿಂದ ತೊಡಗಿ 1992ರಲ್ಲಿ ಮಸ್ಜಿದ್ ಧ್ವಂಸದವರೆಗೆ ಕಾಂಗ್ರೆಸ್ಸಿನ ಸಕ್ರಿಯ ಪಾತ್ರ ಇಡೀ ಜಗತ್ತಿಗೆ ಗೊತ್ತಿದೆ. ಈಗ ಎಲ್ಲವನ್ನೂ ತೆರೆದ ಪುಸ್ತಕದಂತೆ ಮಂದಿರ ನಿರ್ಮಾಣ ಕಾಂಗ್ರೆಸ್ಸಿನ ಕೂಸು ಎನ್ನುತ್ತಿದೆ. ತೆರೆಮರೆಯಲ್ಲಿ ಅಪ್ಪಟ ಕೋಮುವಾದವನ್ನು ಮೆರೆಯುತ್ತಿದ್ದ ಕಾಂಗ್ರೆಸ್ ಇಂದು ತಾನು ಬಿಜೆಪಿಯ ಕೋಮುವಾದಕ್ಕಿಂತ ಕಮ್ಮಿಯೇನಲ್ಲ ಎಂದು ತೋರಿಸಿಕೊಟ್ಟಿದೆ. ಮಸ್ಜಿದ್ ಧ್ವಂಸ ಮಾಡಲು ಸೈನ್ಯದ ರಕ್ಷಣೆ ನೀಡಿ ಪೂರ್ಣ ಸ್ವಾತಂತ್ರ್ಯ ನೀಡಿದ ಕಾಂಗ್ರೆಸ್ ಪಕ್ಷ ದೇಶದ ಜಾತ್ಯಾತೀತತೆಯನ್ನು ಧ್ವಂಸಗೈದ ಅಪ್ರತ್ಯಕ್ಷ ಶತ್ರು.

ಸ್ವಾತಂತ್ರ್ಯ ನಂತರ ಕಾಂಗ್ರೆಸ್ಸಿನಲ್ಲಿದ್ದ ಬಹುತೇಕ ಮೇಲ್ಜಾತಿ ನಾಯಕರು, ಧನಿಕ ಮತ್ತು ಗೂಂಡ ಪಡೆಗಳ ಕೈಯಲ್ಲಿ ಅಧಿಕಾರ ಸಿಕ್ಕಿದ್ದರಿಂದ ದೇಶವು ಇಂದಿನ ಹೀನಾಯ ಸ್ಥಿತಿಗೆ ತಲುಪಿದೆ. ಸ್ವಾತಂತ್ರ್ಯ ಬಂದಿರುವುದು ಮೇಲ್ಜಾತಿ, ಧನಿಕ, ಗೂಂಡಾ ಹಾಗೂ ಕೋಮುವಾದಿಗಳಿಗಲ್ಲದೆ ಜನಸಾಮಾನ್ಯರಿಗಂತೂ ಅಲ್ಲವೇ ಅಲ್ಲ.

ಹೊಸ ಶಿಕ್ಷಣ ನೀತಿ(New Educational Policy-NEP) ಮೂಲಕ ಕೇಂದ್ರದ ಬಿಜೆಪಿ ಸರಕಾರ ಪ್ರಾಥಮಿಕ ಶಿಕ್ಷಣದಿಂದ ಯುನಿವರ್ಸಿಟಿವರೆಗೆ ಗುರುಕುಲ, ವೈದಿಕತೆ, ವಿಜ್ಞಾನದಲ್ಲಿ ಸನಾತನತೆ, ಸಂಸ್ಕೃತ ಭಾಷೆ ಮುಂತಾದ ಅಸಂಬದ್ಧತೆಗಳನ್ನು ತರುತ್ತಿದೆ. ವಿದೇಶಿಯರಿಗೆ ದೇಶದಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಹಾದಿ ತೆರೆದುಕೊಟ್ಟಿದೆ. ಕಳೆದ ವರ್ಷ ಎನ್‌ ಇಪಿ-19 ಎಂದು ಜನತೆ ಮುಂದೆ ನೀಡಿದ ಕರಡು ನೀತಿಗೆ ವ್ಯಾಪಕ ಆಕ್ಷೇಪಗಳು ಬಂದಿತ್ತು. ಆದರೆ ಆ ಆಕ್ಷೇಪಗಳನ್ನು ಸಾರಾಸಗಟಾಗಿ ನಿರ್ಲಕ್ಷಿಸಿ ಹೊಸ ಎನ್‌ಇಪಿ-2020 ತಂದಿದೆ. ಅದನ್ನು ಜನತೆಯ ಮುಂದಿರಿಸುವ ಮೊದಲೇ ಅಂಗೀಕರಿಸಿದೆ. ಆರ್‌ಟಿಇ ಅಡಿಯಲ್ಲಿ ಕಡ್ಡಾಯ ಶಿಕ್ಷಣಕ್ಕೆ ಪ್ರಾಶಸ್ತ್ಯ ಅದರಲ್ಲಿಲ್ಲ.

ಅಲ್ಪಸಂಖ್ಯಾತರು, ದಲಿತರು, ರೈತರು, ಬುಡಕಟ್ಟು ಮತ್ತು ಆದಿವಾಸಿಗಳ ದುಸ್ಥಿತಿಯ ವಿರುದ್ಧ ಮತ್ತು ಹಕ್ಕುಗಳಿಗಾಗಿ ಹೋರಾಡುವ ಕಾರ್ಯಕರ್ತರ ಧ್ವನಿಯನ್ನು ಅಧಿಕಾರ ಬಲದಿಂದ ದಮನಿಸಲಾಗುತ್ತಿದೆ. ಸರಕಾರದ ಜನವಿರೋಧಿ ಕಾನೂನುಗಳ ವಿರುದ್ಧ ಮಾತನಾಡುವ ಹೋರಾಟಗಾರರನ್ನು ಜೈಲಿಗಟ್ಟಲಾಗುತ್ತಿದೆ. ಗ್ರಾಮ ಸ್ವರಾಜ್ಯ, ಕೃಷಿ ಅಭಿವೃದ್ಧಿ, ನಿರ್ಭೀತಿಯ ಅಲ್ಪಸಂಖ್ಯಾತರು, ಆರ್ಥಿಕ ಸಮಾನತೆ, ನಿಷ್ಕಳಂಕ ಜಾತ್ಯತೀತತೆ ಸದೃಢ ಪ್ರಜಾಪ್ರಭುತ್ವ ಇವುಗಳು ಗಾಂಧೀಜಿಯ ಕನಸಾಗಿತ್ತು. ಆದರೆ ಇಂದು ರಾಷ್ಟ್ರಪಿತ ಗಾಂಧೀಜಿಯನ್ನು ಕೊಂದ ಹಂತಕ ಗೋಡ್ಸೆಯನ್ನು ಪೂಜಿಸಲಾಗುತ್ತಿದೆ. ಗೋಡ್ಸೆವಾದಿಗಳು ಸಂಸತ್ತಿನಲ್ಲಿ ಕೂತು ಗಾಂಧೀಜಿಯನ್ನು ಅವಮಾನಿಸುತ್ತಿದ್ದಾರೆ. ದೇಶದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆಸದೇ ಕಾನೂನುಗಳನ್ನು ತಂದು ಜನತೆಯನ್ನು ಅಪಾರ ಸಂಕಷ್ಟಕ್ಕೆ ದೂಡುತ್ತಿದ್ದಾರೆ. ತನ್ನ ಆರ್ಥಿಕ ನೀತಿಯಿಂದ ಇಡೀ ದೇಶವೇ ಕಂಗೆಟ್ಟು ಹೋದರೂ ಪ್ರಧಾನ ಸೇವಕರು ಅದನ್ನು ಸರಿಪಡಿಸುವ ಗೋಜಿಗೇ ಹೋಗುತ್ತಿಲ್ಲ. ನೆರೆಹೊರೆಯ ರಾಷ್ಟ್ರಗಳೊಂದಿಗೆ ಅಖಂಡ ಶತ್ರುತ್ವ ಬೆಳೆಸುವ ವಿದೇಶಿ ನೀತಿ ಹೊಂದುತ್ತಾ ದೇಶವನ್ನು ದ್ವೇಷದ ಕೂಪದೊಳಗೆ ಬಂಧಿಯಾಗಿಸುತ್ತಿದ್ದಾರೆ. ಸಾಮ್ರಾಜ್ಯವಾದಿ ಅಮೆರಿಕದೊಂದಿಗೆ ಕೈಜೋಡಿಸಿ ಬೇಡದ ಗುಲಾಮಗಿರಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಬ್ಯಾಂಕುಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಪಂಗನಾಮ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳದೆ ಪ್ರತಿಕ್ಷಣಕ್ಕೂ ಪಾಕಿಸ್ತಾನದ ಹೆಸರು ಬಳಸಿ ಜನತೆಯನ್ನು ಭಾವನಾತ್ಮಕವಾಗಿ ಮರುಳು ಮಾಡಲಾಗುತ್ತಿದೆ. ಒಟ್ಟಿನಲ್ಲಿ ಅವಲೋಕಿಸುವುದಾದರೆ, ಸ್ವಾತಂತ್ರ್ಯ ಬಂದಿರುವುದು ಕೇವಲ ಭ್ರಷ್ಟ, ಬಲಾಢ್ಯ, ಮತೀಯವಾದಿ, ಬಂಡವಾಳಶಾಹಿ ಹಾಗೂ ಅವಕಾಶವಾದಿಗಳಿಗೆ ಮಾತ್ರ ಎಂಬುದು ಸ್ಪಷ್ಟವಾಗುತ್ತದೆ.

Join Whatsapp