ಅಲೀಗಡ್: ಅಲೀಗಡ್ ಮುಸ್ಲಿಮ್ ವಿಶ್ವವಿದ್ಯಾಲಯದ ಕಾನೂನು ಸಮಾಜ, ಕಾನೂನು ವಿಭಾಗವು ಸರ್ ಮುಹಮ್ಮದ್ ಇಕ್ಬಾಲ್ (ಅಲ್ಲಮಾ ಇಕ್ಬಾಲ್) ಅವರ “ಕಾನೂನು ತತ್ವಶಾಸ್ತ್ರ” ಎಂಬ ವಿಷಯದಲ್ಲಿ ರಾಷ್ಟ್ರೀಯ ವೆಬಿನಾರ್ ಅನ್ನು ಆಯೋಜಿಸಿತ್ತು. ಈ ವೆಬಿನಾರ್ ನಲ್ಲಿ ವಿಶ್ವದ 15 ವಿವಿಧ ದೇಶಗಳ ಜನರು ಭಾಗವಹಿಸಿದ್ದರು.
ವೆಬಿನಾರ್ ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ದೆಹಲಿ ವಿಶ್ವವಿದ್ಯಾಲಯ ಮತ್ತು ಅಲ್ಲಮಾ ಇಕ್ಬಾಲ್ ಕುರಿತ ಪ್ರಾಧಿಕಾರದ ಪ್ರೊ.ಅಬ್ದುಲ್ ಹಖ್ ಹಾಗೂ ಪ್ರೊ.ಎಮೆರಿಟಸ್, “ನಾವು ಕವಿಗಳ ಇತಿಹಾಸವನ್ನು ಗಮನಿಸಿದರೆ, ಅವರಲ್ಲಿ ಅಲ್ಲಮಾ ಇಕ್ಬಾಲ್ ಬಗೆಗಿನ ಸಾಮ್ಯತೆಯನ್ನು ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಅವರು ವಿಶ್ವದ ಶ್ರೇಷ್ಠ ಕವಿ. ಅವರು ಕಾನೂನು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಜನರು ಆ ಕೆಲಸವನ್ನು ಎತ್ತಿ ತೋರಿಸಿಲ್ಲ” ಎಂದು ಹೇಳಿದರು ಮತ್ತು ಅಲ್ಲಮಾ ಇಕ್ಬಾಲ್ ಅವರ ಜೀವನದ ಈ ಸನ್ನಿವೇಶದ ಬಗ್ಗೆ ವೆಬಿನಾರ್ ಆಯೋಜಿಸಿದ್ದಕ್ಕಾಗಿ ಪ್ರೊ.ಶಕೀಲ್ ಸಮ್ದಾನಿಯನ್ನು ಅಭಿನಂದಿಸಿದರು.
ಕಾನೂನು ಇಕ್ಬಾಲ್ ಅವರ ಜೀವನದ ಒಂದು ಪ್ರಮುಖ ಭಾಗವಾಗಿದೆ. ದಲೀಲ್, ಗವಾಹ್, ಇನ್ಸಾಫ್, ಹುಕೂಕ್ ಮುಂತಾದ ಉರ್ದು ಭಾಷೆಯ ಕಾನೂನು ಪದಗಳನ್ನು ಇಕ್ಬಾಲ್ ಅವರ ಕಾವ್ಯಗಳಲ್ಲಿ ಏಕಕಾಲದಲ್ಲಿ ಪುನರಾವರ್ತಿಸಲಾಗುತ್ತದೆ. 30 ವರ್ಷಗಳ ಕಾಲ ಕಾನೂನು ಅಭ್ಯಾಸ ಮಾಡಿದ ಅವರು, ಒಬ್ಬ ಯಶಸ್ವಿ ನ್ಯಾಯವಾದಿಯಾಗಿದ್ದ ಏಕೈಕ ಉರ್ದು ಕವಿಯಾಗಿದ್ದಾರೆ. 20ನೇ ಶತಮಾನದ ಆರಂಭದಲ್ಲಿ ಆಧುನಿಕ ಶಿಕ್ಷಣವನ್ನು ಪ್ರತಿಪಾದಿಸಿದರು ಮತ್ತು ಕಡ್ಡಾಯ ಶಿಕ್ಷಣದ ಪರಿಕಲ್ಪನೆಯನ್ನು ನೀಡಿದರು. ಅಲ್ಲಮಾ ಇಕ್ಬಾಲ್ ಅವರ ಕಾನೂನು ಕಾರ್ಯಗಳಲ್ಲಿ ಸಂಶೋಧನೆ ಮಾಡುವುದು ಉಪಖಂಡದಾದ್ಯಂತ ಕಾನೂನು ಬೋಧಕ ವರ್ಗದ ಕರ್ತವ್ಯವಾಗಿದೆ ಎಂದು ಪ್ರೊ. ಹಖ್ ಹೇಳಿದರು.
ಕಾನೂನು ವಿಭಾಗದ ಡೀನ್ ಮತ್ತು ಕಾನೂನು ಸಮಾಜದ ಅಧ್ಯಕ್ಷ ಪ್ರೊ.ಶಕೀಲ್ ಸಮ್ದಾನಿ, ಇಕ್ಬಾಲ್ ಅವರು ವಿಶ್ವದಾದ್ಯಂತ ಪ್ರಸಿದ್ಧ ವ್ಯಕ್ತಿತ್ವ ಎಂದು ಹೇಳಿದರು. ‘ಸಾರೆ ಜಹಾನ್ ಸೆ ಅಚ್ಛಾ, ಹಿಂದೂಸ್ತಾನ್ ಹಮಾರಾ’ ಗೀತೆ ನಮ್ಮ ದೇಶಭಕ್ತಿಯ ಸ್ಫೂರ್ತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಮತ್ತು ಅದು ಇಕ್ಬಾಲ್ ಅವರಿಂದ ಎಲ್ಲಾ ಭಾರತೀಯರಿಗೆ ಸಿಕ್ಕ ಉಡುಗೊರೆಯಾಗಿದೆ ಎಂದು ಅವರು ಹೇಳಿದರು.
ಇಕ್ಬಾಲ್ ಅವರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ ಪ್ರೊ.ಶಕೀಲ್, ಇಕ್ಬಾಲ್ ಅವರ ಕಾವ್ಯವು ಸಾಮಾಜಿಕ ನ್ಯಾಯವನ್ನು ಆಧರಿಸಿದೆ. ಎಲ್ಲಾ ಪ್ರಮುಖ ಭಾಷೆಗಳಲ್ಲಿ 4500ಕ್ಕೂ ಹೆಚ್ಚು ಪುಸ್ತಕಗಳನ್ನು ಅಲ್ಲಮಾ ಇಕ್ಬಾಲ್ ರ ಕುರಿತು ಬರೆಯಲಾಗಿದೆ. ಇದು ಸ್ವತಃ ಒಂದು ದಾಖಲೆಯಾಗಿದೆ ಎಂದು ಹೇಳಿದರು.