ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಚ್.ನಾಗೇಶ್ ಅವರಿಗೆ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಮಾಧಾನ ಪಡಿಸಲಾಗಿದೆ.
ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಅಬಕಾರಿ ಸಚಿವರಾಗಿದ್ದ ಎಚ್.ನಾಗೇಶ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೀವ್ರ ಅಸಮಾಧಾನಗೊಂಡಿದ್ದ ನಾಗೇಶ್ ಅವರನ್ನು ಮುಖ್ಯಮಂತ್ರಿ ಹಾಗೂ ಇತರ ಸಚಿವರು ಸಮಾಧಾನಪಡಿಸಿದ್ದರು.
ಈ ಹಿಂದೆ ಸಿ.ಮುನಿಕೃಷ್ಣ ಅವರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇದೀಗ ಈ ಆದೇಶವನ್ನು ರದ್ದುಪಡಿಸಿ ನಾಗೇಶ್ ಅವರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಶಾಸಕರಾಗಿರುವ ಎಚ್.ನಾಗೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಪಿ.ಎನ್.ನಾಗರಾಜ್ ಆದೇಶದಲ್ಲಿ ತಿಳಿಸಿದ್ದಾರೆ.