ಉಡುಪಿ ವಿದ್ಯಾರ್ಥಿನಿಯರ ನ್ಯಾಯಯುತ ಹೋರಾಟದೊಂದಿಗೆ ಕ್ಯಾಂಪಸ್ ಫ್ರಂಟ್ ಸದಾ ಮುಂಚೂಣಿಯಲ್ಲಿ ಇರಲಿದೆ: ಸಾದಿಕ್ ಜಾರತ್ತಾರು

Prasthutha|

ಬೆಂಗಳೂರು: ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಕಾರಣಕ್ಕಾಗಿ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕಿ ಧಾರ್ಮಿಕ ತಾರತಮ್ಯ ನಡೆಸಿ ಸಂವಿಧಾನ ನೀಡಿದ ಧಾರ್ಮಿಕ ಹಕ್ಕನ್ನು ಉಲ್ಲಂಘನೆ ಮಾಡಿದ ಘಟನೆಯು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ, ಇದೀಗ ಉಡುಪಿ ಶಾಸಕ ರಘುಪತಿ ಭಟ್ ಸೇರಿದಂತೆ ವಿವಿಧ ರಾಜಕಾರಣಿಗಳು ಇದರ ಹಿಂದೆ ಕ್ಯಾಂಪಸ್ ಫ್ರಂಟ್ ಷಡ್ಯಂತ್ರ ನಡೆಸುತ್ತಿದೆ ಎಂದು ಹೇಳುತ್ತಿದ್ದು, ಕ್ಯಾಂಪಸ್ ಫ್ರಂಟ್ ಹಿಂದೆಯಿಂದಲ್ಲ ಮುಂಚೂಣಿಯಲ್ಲಿ ನಿಂತು ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸಾದಿಕ್ ಜಾರತ್ತಾರು ಸ್ಪಷ್ಟಪಡಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ಒಂದು ತಿಂಗಳುಗಳಿಂದ ಕಾಲೇಜಿಗೆ ಹೋದರೂ   ತರಗತಿಗೆ ಅನುಮತಿ ಸಿಗದೆ ಪಾಠ ಪ್ರವಚನಗಳಿಂದ ವಂಚಿತಗೊಂಡು, ಹಾಜರಾತಿ ಸಿಗದೆ ಬೆದರಿಕೆಯನ್ನೆದುರಿಸಿಕೊಂಡು, ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಇದುವರೆಗೂ ಈಡೇರಿಸಲು ಉಡುಪಿಯ ಜಿಲ್ಲಾಧಿಕಾರಿಗಳಿಗೂ, ಸರಕಾರಕ್ಕೂ ಸಾಧ್ಯವಾಗಿಲ್ಲ. ಬದಲಾಗಿ ಸರಕಾರ ಈ ಧಾರ್ಮಿಕ ತಾರತಮ್ಯಕ್ಕೆ ಬೆಂಬಲ ನೀಡುವಂತೆ ಯಥಾಸ್ಥಿತಿ ಮುಂದುವರೆಸಲು ಸೂಚಿಸಿದ್ದು ಖಂಡನೀಯ.

ಇದರೊಂದಿಗೆ ಹಲವಾರು ಮಂದಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನ ನಡೆಸುವ ಮುಖಾಂತರ ತಮ್ಮ ಹಕ್ಕನ್ನು ಕೇಳುವುದು ಮಹಾ ಅಪರಾಧವೆಂಬಂತೆ ಬಿಂಬಿಸುತ್ತಿದ್ದಾರೆ.  ಪದವಿಪೂರ್ವ ಶಿಕ್ಷಣ ಇಲಾಖೆಯ ಮಾರ್ಗಸೂಚಿಯ ಅನ್ವಯ, ಸಮವಸ್ತ್ರ ಕಡ್ಡಾಯಗೊಳಿಸಿಲ್ಲ ಮತ್ತು ಕಾಲೇಜು ಪ್ರಾಂಶುಪಾಲರು ಅಥವಾ ಆಡಳಿತ ಮಂಡಳಿ ಕಡ್ಡಾಯಗೊಳಿಸಿದರೆ ಕ್ರಮ ಕೈಗೊಳ್ಳುವುದೆಂದು ತಿಳಿಸಿದೆ. ಆದರೆ ಇಂದು ತಾನು ಹೊರಡಿಸಿದ ಮಾರ್ಗಸೂಚಿಯ ವಿರುದ್ಧವೇ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆದುಕೊಳ್ಳುತ್ತಿದೆ.

- Advertisement -

ಸಂಘಪರಿವಾರದ ಕೈಗೊಂಬೆಯಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕಾರ್ಯನಿರ್ವಹಿಸುವುದನ್ನು ನೋಡಿದರೆ, ಶಿಕ್ಷಣ ಇಲಾಖೆಯು ಕೋಮುವಾದಕ್ಕೆ ಒತ್ತು ಕೊಟ್ಟು ಮುಸ್ಲಿಮರ ವಿರುದ್ಧ ತಾರತಮ್ಯ ನೀತಿ ಅನುಸರಿಸುತ್ತಿರುವುದು ನಿಖರವಾಗಿದೆ. ಈಗಾಗಲೇ ಮಾನವ ಹಕ್ಕುಗಳ ಆಯೋಗದಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಶೋಕಾಸು ನೋಟಿಸು ಕಳುಹಿಸಿದ್ದು ಇದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ತಿಳಿಸಲಾಗಿದೆ.

ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕುವವರೆಗೂ ಯಾವುದೇ ರೀತಿಯ ಬೆಂಬಲಕ್ಕೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸದಾ ಮುಂಚೂಣಿಯಲ್ಲಿರುತ್ತದೆ ಎಂದು ಸಾದಿಕ್ ಜಾರತ್ತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp