ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ (ಜೆಕೆಸಿಎ) ಗೆ ಸಂಬಂಧಿಸಿದ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾರ 11.86 ಕೋಟಿ ರೂಪಾಯಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್.ಡಿ.ಟಿ.ವಿ ವರದಿ ಮಾಡಿದೆ.
ಹಣಕಾಸಿನ ಅಪರಾಧಗಳ ತನಿಖೆ ನಡೆಸುವ ಜಾರಿ ನಿರ್ದೇಶನಾಲಯವು ಜಮ್ಮುಕಾಶ್ಮೀರ ಕ್ರಿಕೆಟ್ ಮಂಡಳಿಗೆ ಸಂಬಂಧಿಸಿದ ಅಕ್ರಮ ಹಣಕಾಸು ವರ್ಗಾವಣೆ ಆರೋಪಗಳ ತನಿಖೆ ನಡೆಸುತ್ತಿದೆ. 2002ರಿಂದ 11ರ ಮಧ್ಯೆ 40.69 ಕೋಟಿ ರೂಪಾಯಿ ದುರುಪಯೋಗ ಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಶನಲ್ ಕಾನ್ಫರೆನ್ಸ್ ಸಂಸದ ಅಬ್ದುಲ್ಲಾ ಮತ್ತು ಇತರ ಮೂವರ ವಿರುದ್ಧ ಸಿಬಿಐ 2018ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತಾತ್ಕಾಲಿಕ ಮುಟ್ಟುಗೋಲು ಆದೇಶವನ್ನು ಏಜೆನ್ಸಿ ಬಿಡುಗಡೆಗೊಳಿಸಿದೆ ಎಂದು ಜಾರಿ ನಿರ್ದೇಶನಾಲಯ ಮೂಲಗಳು ತಿಳಿಸಿವೆ.
ವಿಶೇಷ ಸ್ಥಾನಮಾನವನ್ನು ಮರಳಿ ತರುವುದಕ್ಕಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲಾ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ಮಾಡಿದ್ದಕ್ಕಾಗಿ ಫಾರೂ ಕ್ ಅಬ್ದುಲ್ಲಾ ವಿರುದ್ಧ ಈ ಕ್ರಮಕೈಗೊಳ್ಳಲಾಗಿದೆ ಎಂದು ನ್ಯಾಶನಲ್ ಕಾನ್ಫರೆನ್ಸ್ ಹೇಳಿದೆ.
‘ಗುಪ್ಕರ್ ಘೋಷಣೆಯ ಬಳಿಕ ಜಾರಿ ನಿರ್ದೇಶನಾಲಯದ ಪತ್ರ ಬಂದಿದೆ. ಕಾಶ್ಮೀರದಲ್ಲಿ ‘ಪೀಪಲ್ಸ್ ಅಲೈನ್ಸ್’ ಸ್ಥಾಪಿಸಿದ ಬಳಿಕ ಇದು ರಾಜಕೀಯ ಹಗೆತನದ ಭಾಗವಾಗಿದೆ” ಎಂದು ಪಕ್ಶದ ವಕ್ತಾರರೊಬ್ಬರು ಹೇಳಿದ್ದಾರೆ.