Home ಟಾಪ್ ಸುದ್ದಿಗಳು ಇಸ್ಲಾಮೋಫೋಬಿಯ: ಕೆನಡಾದಲ್ಲಿ ಮುಸ್ಲಿಮ್ ಕುಟುಂಬದ ಮೇಲೆ ಲಾರಿ ಹರಿಸಿ ನಾಲ್ವರ ಹತ್ಯೆ

ಇಸ್ಲಾಮೋಫೋಬಿಯ: ಕೆನಡಾದಲ್ಲಿ ಮುಸ್ಲಿಮ್ ಕುಟುಂಬದ ಮೇಲೆ ಲಾರಿ ಹರಿಸಿ ನಾಲ್ವರ ಹತ್ಯೆ

ಮುಸ್ಲಿಮ್ ದ್ವೇಷದಿಂದ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಮುಸ್ಲಿಂ ಕುಟುಂಬದ ಮೇಲೆ ಟ್ರಕ್ ಹತ್ತಿಸಿ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಕೆನಡಾದಲ್ಲಿ ಭಾನುವಾರ ನಡೆದಿದೆ.
ಇದು ಇಸ್ಲಾಮಿಕ್ ವಿರೋಧಿ ದ್ವೇಷದ ಅಪರಾಧ ಎಂದು ಕೆನಡಾದ ಪೊಲೀಸರು ಸೋಮವಾರ ತಿಳಿಸಿದ್ದಾರೆ.


“ಇದು ವ್ಯವಸ್ಥಿತ ಹಾಗೂ ಪೂರ್ವನಿಯೋಜಿತ ಕೃತ್ಯ ಎಂಬುದಕ್ಕೆ ಪುರಾವೆಗಳಿವೆ” ಎಂದು ಒಂಟಾರಿಯೊದ ಲಂಡನ್‌ನ ಡಿಟೆಕ್ಟಿವ್ ಸೂಪರಿಂಟೆಂಡೆಂಟ್ ಪಾಲ್ ವೇಟ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಸಂತ್ರಸ್ತರೆಲ್ಲರೂ ಮುಸ್ಲಿಮರಾಗಿದ್ದು, ಮುಸ್ಲಿಮ್ ದ್ವೇಷದಿಂದ ಅವರನ್ನು ಗುರಿಯಾಗಿಸಲಾಗಿದೆ” ಎಂದು ವೇಟ್ ಹೇಳಿದರು.
ಶಂಕಿತ ದಾಳಿಕೋರ, 20 ವರ್ಷದ ನಥಾನಿಯಲ್ ವೆಲ್ಮನ್ ಎಂಬಾತನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಕುಟುಂಬದ ಮೇಲೆ ಟ್ರಕ್ ಹರಿಸಿದ ಬಳಿಕ ಆತ ಅಲ್ಲಿಂದ ವೇಗವಾಗಿ ವಾಹನ ಚಲಾಯಿಸಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವೇಲ್ಮನ್ ಲಂಡನ್ ನಿವಾಸಿ ಎಂದು ತಿಳಿದುಬಂದಿದ್ದು, ಆತನ ವಿರುದ್ಧ ಕೊಲೆ ಮತ್ತು ಒಂದು ಕೊಲೆ ಯತ್ನದ ಆರೋಪವಿದೆ. ಗುರುವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


2017 ರಲ್ಲಿ ಕ್ವಿಬೆಕ್ ಸಿಟಿ ಮಸೀದಿಯ ಮೇಲೆ ದಾಳಿ ನಡೆಸಿ ಆರು ಮಂದಿ ಮುಸ್ಲಿಮರನ್ನು ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ ನಂತರ ಕೆನಡಾದ ಮುಸ್ಲಿಮರ ವಿರುದ್ಧ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಲಂಡನ್ ಮೇಯರ್ ಎಡ್ ಹೋಲ್ಡರ್ ಇದು ತನ್ನ ನಗರ ಕಂಡ ಅತ್ಯಂತ ಕೆಟ್ಟ ಸಾಮೂಹಿಕ ಹತ್ಯೆಯಾಗಿದೆ ಎಂದು ಖಂಡಿಸಿದ್ದಾರೆ.
ದುರಂತದಲ್ಲಿ 74 ವರ್ಷ, 44 ವರ್ಷದ ಮಹಿಳೆಯರು, 46 ವರ್ಷದ ಪುರುಷ, ಮತ್ತು 15 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 9 ವರ್ಷದ ಬಾಲಕ ಬದುಕುಳಿದಿದ್ದು, ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತರ ಹೆಸರು ಬಹಿರಂಗಪಡಿಸದಂತೆ ಕುಟುಂಬ ಮನವಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಈ ಅಪರಾಧದಿಂದ ಆತಂಕಗೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
“ನಮ್ಮ ಯಾವುದೇ ಸಮುದಾಯಗಳಲ್ಲಿ ಇಸ್ಲಾಮೋಫೋಬಿಯಾಕ್ಕೆ ಯಾವುದೇ ಸ್ಥಾನವಿಲ್ಲ. ಈ ದ್ವೇಷವು ಕಪಟ ಮತ್ತು ತುಚ್ಛವಾಗಿದೆ, ಮತ್ತು ಅದು ನಿಲ್ಲಬೇಕು” ಎಂದು ಹೇಳಿದರು.

Join Whatsapp
Exit mobile version